ಸಹಕಾರ ಕ್ಷೇತ್ರದ ರಕ್ಷಣೆ ಬದಲು ಕಠಿಣ ಕ್ರಮಗಳಿಗೆ ತೀವ್ರ ಆಕ್ಷೇಪ

ಸಹಕಾರ ಕ್ಷೇತ್ರದ ರಕ್ಷಣೆ ಬದಲು ಕಠಿಣ ಕ್ರಮಗಳಿಗೆ ತೀವ್ರ ಆಕ್ಷೇಪ

ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‍ನ ಚೌಕಿಪೇಟೆ ಶಾಖೆಯಲ್ಲಿ ಎಟಿಎಂ ಕೇಂದ್ರದ ಉದ್ಘಾಟನೆಯಲ್ಲಿ ಸಹಕಾರಿ ಧುರೀಣ  ಹೆಚ್.ಕೆ. ಪಾಟೀಲ್

ದಾವಣಗೆರೆ, ಜು.23- ಸಹಕಾರ ಕ್ಷೇತ್ರ ಪ್ರಸ್ತುತ ಗಂಡಾಂತರ ಪರಿಸ್ಥಿತಿಯಲ್ಲಿದೆ. ಈ ಕ್ಷೇತ್ರವನ್ನು ರಕ್ಷಿಸಬೇಕಾದ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಹೇರುವ ಮೂಲಕ ದಮನ ಮಾಡುವ ಕೆಲಸ ಆಗುತ್ತಿದೆ ಎಂದು ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮಹಾಮಂಡಳದ ಅಧ್ಯಕ್ಷರೂ, ಮಾಜಿ ಸಚಿವರೂ ಆದ ಹೆಚ್.ಕೆ.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು.

ನಗರದ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಚೌಕಿಪೇಟೆ ಶಾಖೆಯಲ್ಲಿ ನೂತನ ಎ.ಟಿ.ಎಂ ಕೇಂದ್ರಕ್ಕೆ ಚಾಲನೆ ನೀಡಿದ ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1997ರಲ್ಲಿ ಮಾಡಲಾಗಿರುವ ಸಂವಿಧಾನ ಬದ್ದ ಕಾಯ್ದೆಯು ಸಹಕಾರಿ ಕ್ಷೇತ್ರವನ್ನು ಉತ್ತೇಜಿಸುತ್ತದೆ. ಆದರೆ, ಕೇಂದ್ರ ಸರ್ಕಾರವೂ ಈಗ ಹೊಸ ಕಾನೂನುಗಳನ್ನು ಜಾರಿಗೆ ತರಲು ಹೊರಟಿದ್ದು, ಇದರಿಂದ ಈ ಕ್ಷೇತ್ರ ಅಧಃಪತಕ್ಕೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ಹೊಸ ಕಾನೂನಿನಲ್ಲಿ ರಾಜಕಾರಣಿಗಳ ಪ್ರವೇಶ ಮಾಡುವಂತಿಲ್ಲ, ಪದಾಧಿಕಾರಿ ಆಗಲು ಅವಕಾಶ ಇರುವುದಿಲ್ಲ. ಇದರಿಂದ ಸಹಕಾರಿಗಳು ಮತ್ತು ಸಹಕಾರಿ ಕ್ಷೇತ್ರವನ್ನು ದಮನ ಮಾಡಿದಂತೆ ಆಗಲಿದೆ. ಹೀಗಾಗಿ, ಸಹಕಾರಿಗಳನ್ನು ರಕ್ಷಿಸುವವರು ಇಲ್ಲದಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. 

ದಾವಣಗೆರೆ ಅರ್ಬನ್ ಬ್ಯಾಂಕ್‌ ನೊಂದಿಗೆ ತಮ್ಮ ತಂದೆ ಕೆ.ಹೆಚ್.ಪಾಟೀಲ್ ಅವರ ಒಡನಾಟ ಉತ್ತಮವಾಗಿತ್ತು. ಅವರ ಆಶಯದಂತೆ ಬ್ಯಾಂಕ್‌ನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಬ್ಯಾಂಕಿನ ಎಲ್ಲಾ ನಿರ್ದೇಶಕರು, ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನಾರ್ಹ ಎಂದು ಶ್ಲ್ಯಾಘಿಸಿದರು. 

ಈ ಹಿಂದೆ ಅನ್ನದಾನ, ಜ್ಞಾನದಾನ ಒಂದಕ್ಕಿಂತ ಒಂದನ್ನು ಶ್ರೇಷ್ಠ ಎಂದು ಹೇಳಲಾಗುತ್ತಿತ್ತು. ಆದರೆ, ಇವತ್ತು ವ್ಯಾಕ್ಸಿನ್ ದಾನವೂ ಶ್ರೇಷ್ಠವಾಗಿದೆ. ಈ ನಿಟ್ಟಿನಲ್ಲಿ ಡಾ. ಶಾಮನೂರು ಶಿವಶಂಕರಪ್ಪ ಅವರು ಈಗ ದಾವಣಗೆರೆ ಜನತೆಗೆ ಕೊರೊನಾ ಲಸಿಕೆ ಹಾಕಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅಭಿನಂದನೆ ಸಲ್ಲಿಸಿ, ಇದು ಉಳ್ಳವರಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಆಗಿದೆ ಎಂದರು. 

ಶಾಸಕರೂ ಆಗಿರುವ ಬಾಪೂಜಿ ಬ್ಯಾಂಕ್ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಜನರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಸುತ್ತಾರೆ. ಆದರೆ, ಸಹಕಾರಿ ಕ್ಷೇತ್ರದಲ್ಲಿ ವಹಿವಾಟು ನಡೆಸಲು ಆಸಕ್ತಿ ತೋರುತ್ತಾರೆ. ಆದರೆ, ಸಾಲ-ಸೌಲಭ್ಯವನ್ನು ಸಹಕಾರಿ ಬ್ಯಾಂಕ್‌ನಲ್ಲಿ ಸುಲಭವಾಗಿ ಪಡೆಯಬಹುದು ಎಂದರು.

ಸಹಕಾರಿ ಕ್ಷೇತ್ರಕ್ಕೆ ಸರ್ಕಾರ ಉತ್ತೇಜನ ಕೊಟ್ಟಾಗ ರೈತ, ಜನ ಸಾಮಾನ್ಯರಿಗೆ ಸಾಲ, ಸೌಲಭ್ಯಗಳನ್ನು ನೀಡಿ ಅವರ ಬದುಕಿಗೆ ಅನುಕೂಲ ಮಾಡಿಕೊಡಲು ಸಹಕಾರಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. 

ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್‌.ಎಂ. ಮುರುಗೇಶ್ ಮಾತನಾಡಿ, ಸಹಕಾರಿ ಕ್ಷೇತ್ರದ ಸಮಸ್ಯೆಯನ್ನು ಎಳೆ-ಎಳೆಯಾಗಿ ವಿವರಿಸಿ, ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಹೆಚ್.ಕೆ.ಪಾಟೀಲ್ ಅವರನ್ನು ವಿನಂತಿಸಿದರು.

ದಾವಣಗೆರೆ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ದಾವಣಗೆರೆ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ, ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಟಿ.ಎಸ್. ಜಯರುದ್ರೇಶ್, ಜಿಲ್ಲಾ ಕೇಂದ್ರ ಸಹಕಾರ  ಬ್ಯಾಂಕ್ ಅಧ್ಯಕ್ಷ ಕೆ. ವೇಣುಗೋಪಾಲ್ ರೆಡ್ಡಿ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆರಂಭದಲ್ಲಿ ಸ್ವಾಗತ ಕೋರಿದ ನಿರ್ದೇಶಕ ಬಿ.ಸಿ.ಉಮಾಪತಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಅರ್ಬನ್ ಬ್ಯಾಂಕ್ ನಿರ್ದೇಶಕರುಗಳಾದ ಮತ್ತಿಹಳ್ಳಿ ವೀರಣ್ಣ, ಪಲ್ಲಾಗಟ್ಟೆ ಶಿವಾನಂದಪ್ಪ, ಎಂ.ಚಂದ್ರಶೇಖರ್, ದೇವರಮನೆ ಶಿವಕುಮಾರ್, ಅಜ್ಜಂಪುರ ಶೆಟ್ರು ವಿಜಯಕುಮಾರ್, ಶ್ರೀಮತಿ ಸುರೇಖಾ ಎಂ. ಚಿಗಟೇರಿ, ಕಂಚಿಕೆರೆ ಮಹೇಶ್, ನಲ್ಲೂರು ಎಸ್.ರಾಘವೇಂದ್ರ, ಎಂ. ವಿಕ್ರಂ, ಮುಂಡಾಸ್ ವೀರೇಂದ್ರ, ಬೆಳ್ಳೂಡಿ ಮಂಜುನಾಥ್, ಎಂ.ದೊಡ್ಡಪ್ಪ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಬೆಳಗಾವಿ ಬಸವರಾಜಪ್ಪ, ಜಂಬಗಿ ರಾಧೇಶ್, ಕೆ. ಕೊಟ್ರೇಶ್ ಅವರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಬಿ.ಇ. ಸಿಂಧು  ಪ್ರಾರ್ಥಿಸಿದರು. ನಿರ್ದೇಶಕ ಇ.ಎಂ.ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಮಲ್ಲಿಕಾರ್ಜು ಕಣವಿ ವಂದಿಸಿದರು.

ಪ್ರಧಾನ ವ್ಯವಸ್ಥಾಪಕ ಡಿ.ವಿ.ಆರಾಧ್ಯಮಠ, ಉಪ ಪ್ರಧಾನ ವ್ಯವಸ್ಥಾಪಕ ಬಿ.ಎಸ್.ಮಲ್ಲೇಶ್ ಮತ್ತಿತರರು ಸಮಾರಂಭದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.