ಸಂಪುಟ ಪುನರ್‌ರಚನೆಯಾಗಲಿದೆ

ದಾವಣಗೆರೆ, ಜು. 23 – ಮುಖ್ಯಮಂತ್ರಿ ಬದಲಾವಣೆಯ ವರದಿಗಳ ನಡುವೆಯೇ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಪುಟ ಪುನರ್‌ರಚನೆಯಾಗಲಿದೆ ಎಂದು ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ತಮಗೆ ತಿಳಿದಿಲ್ಲ. ಆದರೆ, ಸಂಪುಟದಲ್ಲಿ ಬದಲಾವಣೆ ಆಗಲಿದೆ. ಈ ಇಲಾಖೆಯಲ್ಲಿ ನಾನು ಇರುತ್ತೇನೋ, ಇನ್ನೊಂದು ಇಲಾಖೆಗೆ ಹೋಗುತ್ತೇನೋ ಗೊತ್ತಿಲ್ಲ ಎಂದಿದ್ದಾರೆ.

ಮುಂದೆ ಸಂಪುಟದಲ್ಲಿ ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ, ಮುಂದುವರೆಸುವುದೇ ಆದರೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲೇ ಇರಬೇಕು ಎಂಬುದು ತಮ್ಮ ಅಪೇಕ್ಷೆ ಎಂದು ಸಮಾರಂಭವೊಂದರಲ್ಲಿ ಹೇಳಿದ ಬಗ್ಗೆ ಪ್ರಶ್ನಿಸಿದಾಗ, ನಾವೇ ಗೂಟ ಹೊಡೆದುಕೊಂಡು ಕುಳಿತಿರಬೇಕಾ? ನಾವು ಹೋದರೆ ಬೇರೆಯವರು ಬರುತ್ತಾರೆ ಎಂದು ಹೇಳಿದರು.

ಕೇಂದ್ರದಲ್ಲಿ ಹರ್ಷವರ್ಧನ್, ರವಿಶಂಕರ್ ಪ್ರಸಾದ್ ಅಂಥವರನ್ನೇ ಕೈ ಬಿಡಲಾಗಿದೆ. ಯುವಕರಿಗೆ ಅವಕಾಶ ಕೊಟ್ಟಿರುವುದಕ್ಕೆ ಸಂತೋಷ ಪಡುತ್ತೇವೆ. ಕೇಂದ್ರ ನಾಯಕರು ಏನೇ ತೀರ್ಮಾನ ತೆಗೆದುಕೊಂಡರೂ ಸ್ವಾಗತಿಸುತ್ತೇನೆ ಎಂದು ಹೇಳಿದರು.

ಈಶ್ವರಪ್ಪ ಮುಖ್ಯಮಂತ್ರಿಯಾಗಲೀ ಎಂದು ಕೆಲವರು ಹೇಳಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಗೊಂದಲದಲ್ಲಿ ನನ್ನ ಹೆಸರು ತರಬೇಡಿ. ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ, ನನ್ನ ಹೆಸರು ಮುಖ್ಯಮಂತ್ರಿ ವಿಚಾರಕ್ಕೆ ತರಬೇಡಿ ಎಂದರು.