ಒಡೆದ ನೀರಿನ ಪೈಪ್‌ ರಿಪೇರಿಗೆ ಆಗ್ರಹ

ಒಡೆದ ನೀರಿನ ಪೈಪ್‌ ರಿಪೇರಿಗೆ ಆಗ್ರಹ

ಹರಿಹರ, ಜು.20- ನಗರದ ಶಿವಮೊಗ್ಗ ರಸ್ತೆಯಲ್ಲಿ ಹೈಸ್ಕೂಲ್ ಬಡಾವಣೆ, ವಿದ್ಯಾನಗರ, ಸೇರಿದಂತೆ ಅನೇಕ ಬಡಾವಣೆಗಳಿಗೆ ಸರಬರಾಜು ಆಗುವ 24/7 ನೀರಿನ ಪೈಪ್ ಒಡೆದುಕೊಂಡು ನೀರು ರಸ್ತೆ  ಹಾಗೂ ಚರಂಡಿಯಲ್ಲಿ ತುಂಬಿ ಹರಿಯುತ್ತಿದ್ದರೂ, ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಪೈಪನ್ನು ಆದಷ್ಟು ಬೇಗನೆ ದುರಸ್ತಿ ಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದರು.

ನಗರದ ಹೊರವಲಯದ ನೀರು ಸರಬರಾಜು ಕೇಂದ್ರದಿಂದ ನಗರದ ಹೈಸ್ಕೂಲ್ ಬಡಾವಣೆ, ವಿದ್ಯಾನಗರ, ಕಾಳಿದಾಸ ನಗರ, ಬೆಂಕಿನಗರ, ಮೋಚಿ ಕಾಲೋನಿ ಸೇರಿದಂತೆ ಹಲವಾರು ಬಡಾವಣೆಯ ಜನತೆಗೆ ಕುಡಿಯುವ ನೀರು ಸರಬರಾಜು ಮಾಡುವುದಕ್ಕೆ ಪೈಪ್ ಮೂಲಕ ನಗರದ ನೀರು ಸರಬರಾಜು ಕೇಂದ್ರದಿಂದ ಶಿವಮೊಗ್ಗ ರಸ್ತೆಯ ಮೂಲಕ ಇಲ್ಲಿನ ಬಡಾವಣೆಯ ಜನತೆಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ.

ಶಿವಮೊಗ್ಗ ರಸ್ತೆಯ ಸೇತುವೆಯ ಮೇಲೆ ಹಾದು ಹೋಗಿರುವ ಪೈಪ್ ಡ್ಯಾಮೇಜ್ ಆಗಿದ್ದು, ಇದೇ ರಸ್ತೆಯಲ್ಲಿ
ಸಂಚಾರ ಮಾಡುವ ನಗರಸಭೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳ ಗಮನಕ್ಕೆ ಬಂದಿದ್ದರೂ ದುರಸ್ತಿ ಪಡಿಸಲು ಮುಂದಾಗದೇ ಇರುವುದರಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಹರಿಯುವ ನೀರು ಚರಂಡಿ ಪಾಲಾಗುತ್ತಿದೆ. ರಸ್ತೆಯಲ್ಲಿ ಹರಿಯುವುದರಿಂದ ಸಾರ್ವಜನಿಕರು ಈ ನೀರಿನ ಮೇಲೆ ಓಡಾಡುವಂತಾಗಿದೆ.