ದಾವಣಗೆರೆ ಜಿಲ್ಲೆಯ ಕನಸಿನ ವೈದ್ಯಕೀಯ ಕಾಲೇಜು…

ಇತ್ತೀಚೆಗೆ ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಬಹಳ ಸುದ್ದಿಯಲ್ಲಿದೆ. ಎನ್‌ಎಂಸಿ (ಎಂಸಿಟಿ) ನಮ್ಮ ದೇಶದ ವೈದ್ಯಕೀಯ ಕಾಲೇಜು ಸ್ಥಾಪನೆಗಳ ಬಗ್ಗೆ ಕೆಲವು ಮಾನದಂಡ ರೂಪಿಸಿದೆ. ನೀತಿ ಆಯೋಗ ನಮ್ಮ ದೇಶದ ವೈದ್ಯಕೀಯ ವ್ಯವಸ್ಥೆಯನ್ನು ಅಭಿವೃದ್ಧಿ ಗೊಳಿಸಲು ದೇಶದಲ್ಲಿ ಹೊಸ ಕಾಲೇಜು ಸ್ಥಾಪನೆ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಪರಿಣಾಮವೇ ಪಿಪಿಪಿ ಮಾಡೆಲ್ ಕಾಲೇಜುಗಳು. ಅಂದರೆ, ಸರ್ಕಾರ ಹಾಗೂ ಸಾರ್ವಜನಿಕ ಹೊಂದಾಣಿಕೆ, ಇದರ ಪ್ರಕಾರ ಸರ್ಕಾರ ಜಿಲ್ಲಾಸ್ಪತ್ರೆ ಹಾಗೂ ಹೊಂದಿಕೊಂಡ ಸ್ಥಳವನ್ನು ಸಾರ್ವಜನಿಕ ಒಡಂಬಡಿಕೆಗೆ 60 ವರ್ಷಗಳ ಕಾಲ ಬಳುವಳಿ ಕೊಡುವುದು.

ಸಾರ್ವಜನಿಕ ಸಂಸ್ಥೆ ಕಾಲೇಜನ್ನು ಸ್ಥಾಪಿಸಿ, ಆಸ್ಪತ್ರೆ ವ್ಯವಸ್ಥೆಯನ್ನು ಅಭಿವೃದ್ಧಿ ಗೊಳಿಸುವ ಉದ್ದೇಶ. ಇದರಿಂದ
ಸರ್ಕಾರಕ್ಕೆ ಕಾಲೇಜು ನಡೆಸಲು ಹೊರೆಯಾಗದು. ಸಾರ್ವಜನಿಕರಿಗೆ ಉನ್ನತ ವೈದ್ಯಕೀಯ ಸೇವೆ ಉಚಿತ ಅಥವಾ ಕಡಿಮೆ ವೆಚ್ಚದಲ್ಲಿ ಲಭ್ಯ.

ದಾವಣಗೆರೆ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ರಾಜಕೀಯದ, ಸಾರ್ವಜನಿಕರ ಚದುರಂಗದ ಆಟವಾಗಬಾರದು. ಯೋಜನೆ ಕಾರ್ಯರೂಪಕ್ಕೆ ಬರುವುದು ಮುಖ್ಯ. ನೂತನ ಕಾಲೇಜು ಜಿಲ್ಲೆಯ ರೋಗಿಗಳಿಗೆ ಉಪಯೋಗ ಆಗಬೇಕು. ಈಗಾಗಲೇ ಪತ್ರಿಕೆಗಳಲ್ಲಿ ನೋಡಿದಂತೆ, ದಾವಣಗೆರೆ – ಹರಿಹರ ಜನರಲ್ಲಿ ಗೊಂದಲ ಮೂಡಿಸಿದೆ.

ಹೊಸ ಕಾಲೇಜು ಸ್ಥಾಪನೆಗೆ ಇರುವ ಎನ್ಎಂಸಿ ಮಾನದಂಡವೇನು ? ಉದ್ದೇಶಿತ ಕಾಲೇಜು 650 – 700 ಹಾಸಿಗೆಗಳ ಆಸ್ಪತ್ರೆಯನ್ನು ಈಗಾಗಲೇ 3 ವರ್ಷಗಳಿಂದ ನಡೆಸುತ್ತಿರಬೇಕು. ಇದಕ್ಕಾಗಿಯೇ ಜಿಲ್ಲಾಸ್ಪತ್ರೆ ಆವರಣ ಸೂಕ್ತ ಮತ್ತು 25 ಎಕರೆ ವಿಸ್ತೀರ್ಣ ಹೊಂದಿರಬೇಕು.

ಉದ್ದೇಶಿತ ನೂತನ ಕಾಲೇಜು ಹೇಗಿರಬೇಕು 

ಎನ್‌ಎಂಸಿ ಕನಿಷ್ಠ ಮಾನದಂಡದಂತೆ ಇರಬೇಕೇ ಅಥವಾ ಅದಕ್ಕಿಂತ ಹೆಚ್ಚಿನ ವ್ಯವಸ್ಥೆ ಇರಬೇಕೇ ? ನನ್ನ ಅನಿಸಿಕೆ ಪ್ರಕಾರ, ಹೆಚ್ಚಿನ ವ್ಯವಸ್ಥೆ ಮುಂದಿನ 50 ವರ್ಷಗಳಿಗೆ ಉದ್ದೇಶಿತ ಹೊಸ ಕಾಲೇಜು 50-100 ಎಕರೆ ಆವರಣ ಹೊಂದಿರುವುದು ಸೂಕ್ತ. ಆಸ್ಪತ್ರೆ 1000 ಹಾಸಿಗೆಗಳನ್ನು ಹೊಂದಿರ ಬೇಕು. ಉದ್ದೇಶಿತ ಕಾಲೇಜು ಹಾಗೂ ಆಸ್ಪತ್ರೆ ಒಂದೇ ಆವರಣದಲ್ಲಿ ಇರಬೇಕು.

ಕಾಲೇಜು ಹಾಗೂ ಆಸ್ಪತ್ರೆಯ ಇತರೆ ಸೌಲಭ್ಯಗಳು ಅದೇ ಆವರಣದಲ್ಲಿ ಹೊಂದಿಕೊಂಡಿರಬೇಕು. ಸಿಬ್ಬಂದಿ ಕ್ವಾಟ್ರಸ್‌, ವಿದ್ಯಾರ್ಥಿ ನಿಲಯ, ಉಪಹಾರ ಗೃಹ, ರೋಗಿಗಳ ಸಂಬಂಧಿಕರು ತಂಗುವ ವ್ಯವಸ್ಥೆ, ಲಾಂಡ್ರಿ, ಉದ್ಯಾನವನ, ಕಲುಷಿತ ನೀರು ಶುದ್ದೀಕರಣ ಘಟಕ, ವಿದ್ಯುತ್ ಜನರೇಟರ್, ಆಕ್ಸಿಜನ್ ಜನರೇಟರ್ ಹಾಗೂ ಇತರೆ ಎಲ್ಲಾ ಸೌಲಭ್ಯಗಳನ್ನು ಹೊಂದಿರಬೇಕು.

ಒಟ್ಟಾರೆ ಆಸ್ಪತ್ರೆಗೆ ಬೇಕಾದ ಪೂರಕ ಸೇವೆಗಳು ಆವರಣದಲ್ಲೇ ಲಭ್ಯವಿರಬೇಕು. ಕಾಲೇಜಿಗೆ ಹೊಂದಿಕೊಂಡಂತೆ ಸುತ್ತಮುತ್ತಲಿನ ನಗರಗಳಲ್ಲಿ ಡಿಸ್ಪೆನ್ಸರೀಸ್ (ಔಷಧಾಲಯಗಳು) ಇರಬೇಕು.

ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳಂತಹ ರೋಗ ಬಂದಾಗ, ಆಸ್ಪತ್ರೆಗಳು ಜನನಿಬಿಡ ಪ್ರದೇಶಗಳಿಗಿಂತ ವಿಶಾಲ ಪ್ರದೇಶಗಳಲ್ಲಿ ಇರುವುದು ಸೂಕ್ತ. ಜಿಲ್ಲಾಸ್ಪತ್ರೆ ಹೊಂದಾಣಿಕೆಯೊಂದಿಗೆ ಉದ್ದೇಶಿತ ಕಾಲೇಜು ಪಡೆದು, ದಾವಣಗೆರೆ – ಹರಿಹರದ ನಡುವೆ ವಿಶಾಲ ಪ್ರದೇಶದಲ್ಲಿ ಸ್ಥಾಪನೆಗೊಳ್ಳುವುದು ಒಳಿತು.

ಜಿಲ್ಲೆಯ ಎಲ್ಲಾ ನಾಗರಿಕರಿಗೆ ಉಪಯೋಗ ವಾಗುವಂತಿರಬೇಕು.  ಒಂದು ಉನ್ನತ ಮಾದರಿ ಕಾಲೇಜು ಹಾಗೂ ರೆಪರಲ್ ಆಸ್ಪತ್ರೆಯಾಗಿ ಹೆಸರುವಾಸಿ ಯಾಗಲಿ. ರಾಜಕೀಯದ ಚದುರಂಗದಲ್ಲಿ ಯೋಜನೆ ಕುಬ್ಜವಾಗಬಾರದು.

– ಡಾ. ಕೆ.ಎಸ್.ಸೋಮಶೇಖರ್ 

 ಹೃದ್ರೋಗ ತಜ್ಞರು, ದಾವಣಗೆರೆ. 

ನಿವೃತ್ತ ಪ್ರಾಂಶುಪಾಲರು,

 ಬಸವೇಶ್ವರ ಮೆಡಿಕಲ್ ಕಾಲೇಜು, ಚಿತ್ರದುರ್ಗ