ಹೊನ್ನಾಳಿ ತಾ|| ಕಸಾಪಕ್ಕೆ ರೇವಣಪ್ಪ ಅಧ್ಯಕ್ಷ

ಹೊನ್ನಾಳಿ ತಾ|| ಕಸಾಪಕ್ಕೆ ರೇವಣಪ್ಪ ಅಧ್ಯಕ್ಷ

ಹೊನ್ನಾಳಿ, ಜು.10- ತೆರವಾಗಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಎಂ.ಎಸ್. ರೇವಣಪ್ಪ ಅವರನ್ನು ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಆಯ್ಕೆ ಮಾಡಿರುವುದಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಮಂಜುನಾಥ ಕುರ್ಕಿ ಹೇಳಿದರು.

ಹಿರೇಕಲ್ಮಠದಲ್ಲಿ ಇಂದು ತಾಲ್ಲೂಕು ಕಸಾಪ ಪದಾಧಿಕಾರಿಗಳ ಸಭೆಯಲ್ಲಿ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳ ಸಾನ್ನಿಧ್ಯದಲ್ಲಿ ಆದೇಶ ಪ್ರತಿಯನ್ನು ರೇವಣಪ್ಪ ಅವರಿಗೆ ಕುರ್ಕಿ ನೀಡಿದರು.

ತಾಲ್ಲೂಕು ಅಧ್ಯಕ್ಷರಾಗಿದ್ದ ಕತ್ತಿಗೆ ಗಂಗಾಧರಪ್ಪ ಅವರು ಇತ್ತೀಚೆಗೆ ನಿಧನರಾಗಿದ್ದರಿಂದ, ಅಧ್ಯಕ್ಷ ಸ್ಥಾನ ತೆರವಾಗಿತ್ತು. ಹೊನ್ನಾಳಿ ಸೇರಿದಂತೆ ರಾಜ್ಯದ 6 ತಾಲ್ಲೂಕುಗಳಲ್ಲಿ ಇಂತಹ ಆಯ್ಕೆ ಸಂದರ್ಭಗಳು ಎದುರಾಗಿದ್ದು, ನಿಕಟಪೂರ್ವ ಅಧ್ಯಕ್ಷರನ್ನು ಆಯ್ಕೆ ಮಾಡುವ ಮೂಲಕ ಬೈಲಾದ ನಿಯಮವನ್ನು ಪಾಲಿಸಲಾಗಿದೆ ಎಂದು ಜಿಲ್ಲಾಧ್ಯಕ್ಷರು ಸ್ಪಷ್ಟಪಡಿಸಿದರು.

ಮೇ 9 ರಂದು ನಿಗದಿಯಾಗಿದ್ದ ರಾಜ್ಯ ಕಸಾಪ ಅಧ್ಯಕ್ಷರ ಚುನಾವಣೆ ಕೊರೊನಾ ಹಿನ್ನಲೆಯಲ್ಲಿ ಮುಂದೂಡಲಾಗಿದ್ದು, ಆಗಸ್ಟ್‌ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಉಜ್ಜನಪ್ಪ, ದಿಳ್ಯಪ್ಪ, ಎನ್.ಎಸ್. ರಾಜು, ಷಣ್ಮುಖಪ್ಪ, ಬಿ. ವಾಮದೇವಪ್ಪ, ಹೊನ್ನಾಳಿಯ ಪದಾಧಿಕಾರಿಗಳಾದ ಶೇಖರಪ್ಪ, ಸಿದ್ಧಯ್ಯ, ರತ್ನಮ್ಮ, ಹೊಸಕೆರೆ ರಾಮು, ಡಿ.ಎಂ. ಮಂಜಣ್ಣ, ಟೈಲರ್ ಬಸಣ್ಣ, ಆಂಜನೇಯ, ಚನ್ನೇಶ್, ಸೌಭಾಗ್ಯಲಕ್ಷ್ಮಿ  ಇದ್ದರು.