ಗಿಡಮರಗಳ ಹಾಗೆ ಪರೋಪಕಾರಿಯಾಗು ಮಾನವ…

ಗಿಡಮರಗಳ ಹಾಗೆ ಪರೋಪಕಾರಿಯಾಗು ಮಾನವ…

ಒಮ್ಮೆ ಒಬ್ಬ ರಾಜನಿಗೆ ತಾನು ಸಾವಿರಾರು ವರ್ಷ ಬದುಕಬೇಕೆಂದು ಆಸೆಯಾಯಿತು. ಅದಕ್ಕೆ ಋಷಿಮುನಿಗಳನ್ನು ಸಂಪರ್ಕಿಸಿದ. ಅವರು ಉತ್ತರ ಹಿಮಾಲಯದಲ್ಲಿ ಒಬ್ಬ ಸನ್ಯಾಸಿ ಇರುವರು. ಅವರು  ಹಿಮಾಲಯದಲ್ಲಿರುವ ಅಮರತ್ವದ ರಸ ತಯಾರಿಸುವ ಗಿಡದ ಬಗ್ಗೆ ತಿಳಿಸುತ್ತಾರೆ ಎಂದು ಹೇಳುತ್ತಾರೆ. ರಾಜ ನೋಡಿಯೇ ಬಿಡಬೇಕೆಂದು ಹೊರಡುತ್ತಾನೆ. ಅಲ್ಲಿ ತಪಸ್ಸಿಗೆ ಕುಳಿತಿರುವ ಸನ್ಯಾಸಿಯ ಹತ್ತಿರ ತನ್ನ ಬಯಕೆ ಹೇಳುತ್ತಾನೆ. ಆಗ ಆ ಸನ್ಯಾಸಿ ನಕ್ಕು “ರಾಜ ಈ ಔಷಧಿಯನ್ನು ಹುಡುಕಿಕೊಂಡು ಬಹಳ ಮಂದಿ ಬಂದಿದ್ದಾರೆ ಹಾಗೂ ನಾನು ದಾರಿಯನ್ನೂ ತೋರಿಸಿದ್ದೇನೆ. ಅವರಿಗೆ ಉಪಯೋಗಿಸುವ ರೀತಿ ತಿಳಿಸಿದಂತೆ ನಿನಗೂ ತಿಳಿಸುತ್ತೇನೆ” ಎಂದನು. ರಾಜನಿಗೆ ತುಂಬಾ ಖುಷಿಯಾಗಿ “ದಯವಿಟ್ಟು ಆ ಗಿಡಮೂಲಿಕೆ ರಸ ತೋರಿಸಿ. ನೀವು ಹೇಳಿದ ರೀತಿಯಲ್ಲೇ ತೆಗೆದುಕೊಳ್ಳುವೆ” ಎಂದನು. ಸನ್ಯಾಸಿ ತೋರಿಸಿದ ಗಿಡಮೂಲಿಕೆ ಕಿತ್ತು ತರುತ್ತಾನೆ. ಸನ್ಯಾಸಿ ಅದರಿಂದ ರಸ ತಯಾರಿಸಿ “ಇಲ್ಲಿಂದ ಸ್ವಲ್ಪ ಮುಂದೆ ಹೋದರೆ ಅಲ್ಲಿ ಒಂದು ಕಾಡು ಸಿಗುತ್ತದೆ. ಅಲ್ಲಿ ಒಬ್ಬ ಮುದುಕ ಗಿಡಗಳಿಗೆ ನೀರು ಹಾಕುತ್ತಿರುತ್ತಾನೆ. ಅವನು ಈ ಔಷಧವನ್ನು ಯಾವ ರೀತಿ ಉಪಯೋಗಿಸಬೇಕು ಎಂದು ತಿಳಿಸುತ್ತಾನೆ” ಎಂದು ಹೇಳಿ ಕಣ್ಣು ಮುಚ್ಚಿ ಧ್ಯಾನಸ್ಥನಾಗುತ್ತಾನೆ.

ರಾಜ ಕಾಡಿನ ಕಡೆ ಹೊರಡುತ್ತಾನೆ. ಔಷಧವನ್ನು ಕುಡಿದು ಸಾವಿರಾರು ವರ್ಷ ಬದುಕಬೇಕು ಎಂದು ಖುಷಿಯಿಂದ ಬೇಗ ಬೇಗ ಹೆಜ್ಜೆ ಹಾಕಿ ಕಾಡು ತಲುಪಿದ. ಅಲ್ಲಿ ಒಬ್ಬ ಬೆನ್ನು ಬಾಗಿದ, ಹಲ್ಲುಗಳು ಉದುರಿದ, ಚರ್ಮವೆಲ್ಲಾ ಸುಕ್ಕುಗಟ್ಟಿದ ಹಣ್ಣು ಹಣ್ಣು ಮುದುಕ ಗಿಡಗಳಿಗೆ ನೀರುಣಿಸುತ್ತಿದ್ದನು. ರಾಜ ಹತ್ತಿರ ಹೋಗುತ್ತಿದ್ದಂತೆಯೇ ಆ ಮುದುಕು ‘ಬಾರಪ್ಪಾ ಬಾ… ನೀನೂ ಸಾವಿರಾರು ವರ್ಷ ಬದುಕುವ ಆಸೆಯಿಂದ ಔಷಧಿ ತರೋಕೆ ಹೋಗಿದ್ದಿಯಾ?” ಎಂದು ಕೇಳಿದನು. ರಾಜನು ಆಶ್ಚರ್ಯದಿಂದ “ನಿಮಗೆ ಹೇಗೆ ಗೊತ್ತಾಯಿತು? ಇದನ್ನು ತೆಗೆದುಕೊಳ್ಳುವ ಬಗೆ ಹೇಗೆ? ನೀವು ಒಬ್ಬಂಟಿಯಾಗಿ ಇಲ್ಲೇನು ಮಾಡುತ್ತಿರುವಿರಿ?” ಎಂದು ಕೇಳಿದನು. ಆ ಮುದುಕನು ಜೋರಾಗಿ ನಗುತ್ತಾ “ನಿನ್ನಂಥವರು ಇಲ್ಲಿಗೆ ಹೀಗೆ ಸಾವಿರಾರು ಜನರು ಬಂದು ಹೋಗಿದ್ದಾರೆ”. ಅದಕ್ಕೆ ಆಶ್ಚರ್ಯಚಕಿತನಾದ ರಾಜನು “ಹೌದೇ? ಎಲ್ಲರೂ ಔಷಧಿ ತೆಗೆದುಕೊಂಡು ಸಾವಿರ ವರ್ಷ ಬಾಳುತ್ತಿರುವರೇ? ಈ ಔಷಧಿ ಅಷ್ಟು ಪರಿಣಾಮಕಾರಿಯೇ? ಇದನ್ನು ತೆಗೆದುಕೊಳ್ಳುವ ರೀತಿ ಹೇಗೆ?” ಎಂದನು. ಆಗ ಮುದುಕನು “ಅಯ್ಯೋ…. ಹುಚ್ಚಪ್ಪಾ ನಿನ್ನ ಹಾಗೆಯೇ ಬಹಳ ಜನ ಬಂದು ಔಷಧಿ ಇಸ್ಕೋತಿದಾರೆ. ಆದರೆ ಯಾರೂ ತಗೋತಿಲ್ಲ. ಇಲ್ನೋಡು ನೂರಾರು ವರ್ಷಗಳ ಕೆಳಗೆ ನಾನೂ ನಿನ್ನ ಹಾಗೆಯೇ ಸಾವಿರಾರು ವರ್ಷ ಬದುಕಬೇಕೆಂಬ ಆಸೆಯಿಂದ ಆ ಔಷಧಿ ಸೇವಿಸಿದೆ ಹಾಗೂ ಬದುಕಿಯೇ ಇದ್ದೇನೆ ನೋಡು. ನನ್ನ ಕಣ್ಣ ಮುಂದೆಯೇ ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಗೆಳೆಯರು, ಬಂಧುಬಾಂಧವರು ಎಲ್ಲಾ ತೀರಿಕೊಂಡರು. ನನ್ನ ಕೈಯ್ಯಲ್ಲಿ ದುಡಿಯಲು ಶಕ್ತಿಯಿಲ್ಲ. ರೋಗ ರುಜಿನಗಳು ಬಾಧಿಸುತ್ತಿವೆ. ಯಾಕಾಗಿ ಬದುಕಿರಬೇಕು, ಯಾರಿಗಾಗಿ ಬಾಳಬೇಕು?. ನನ್ನ ಈ ದುರಾವಸ್ಥೆ ನೋಡಿ ಯಾರೂ ಊರಿನಲ್ಲಿ ಹತ್ತಿರ ಸೇರಿಸುತ್ತಿಲ್ಲ. ಅದಕ್ಕೆ ಬದುಕಲೂ ಆಗದೆ, ಸಾಯಲೂ ಆಗದೇ ನಿಮ್ಮಂಥವರಿಗೆ ಉಪದೇಶ ಹೇಳುತ್ತಾ ಕಾಲ ತಳ್ಳುತ್ತಿದ್ದೇನೆ. ಸಾವಿರಾರು ವರ್ಷ ಬದುಕುವ ಆಸೆ ಬಿಟ್ಟುಬಿಡು. ಇರುವಷ್ಟು ದಿನ ಈ ಗಿಡಮರಗಳ ಹಾಗೆ ಪರೋಪಕಾರಿಯಾಗಿ ಜೀವನ ಮಾಡು” ಎನ್ನುತ್ತಾನೆ. 

ರಾಜನು ಆ ಮುದುಕನ ದೀನಸ್ಥಿತಿ ನೋಡಿ ಹಿಂದೆಮುಂದೆ ಯೋಚಿಸದೇ ಕೈಯಲ್ಲಿರುವ ಔಷಧಿಯನ್ನು ಗಿಡಗಳ ಬುಡಕ್ಕೆ ಚೆಲ್ಲುತ್ತಾನೆ. “ನನ್ನ ಕಣ್ಣು ತೆರೆಸಿದಿರಿ. ತಾತ…. ಹೌದು ಈ ಔಷಧಿ ಈ ಗಿಡಗಳಿಗೇ ಸೇರಬೇಕು. ಇವು ಬದುಕಿದ್ದರೆ ಮನುಷ್ಯರು ಉಳಿಯುತ್ತಾರೆ. ನಾವು ಬದುಕಿದರೆ ಯಾರಿಗೂ ಬೇಡ… ಆದರೆ ಗಿಡಮರಗಳು ಇರಬೇಕು” ಎಂದು ನಮಸ್ಕರಿಸಿ ತನ್ನ ರಾಜ್ಯಕ್ಕೆ ಹಿಂದಿರುಗಿ ತನ್ನ ಉಸಿರಿರುವವರೆಗೂ ಉತ್ತಮವಾಗಿ ರಾಜ್ಯಭಾರ ಮಾಡುತ್ತಾನೆ.

ಅದಕ್ಕೆ ನಾವು ಬದುಕುವುದಕ್ಕೆ ಗಿಡಮರಗಳನ್ನು ಬದುಕಿಸಬೇಕು. ಅವು ನಮಗೆ ಆಮ್ಲಜನಕ ನೀಡುತ್ತವೆ. ಒಂದು ಗಿಡ ನೂರಾರು ಜನಕ್ಕೆ ಜೀವನ ನೀಡುತ್ತದೆ.


ಮಮತ ಹೆಚ್.ಎನ್.
mamathahodigere@gmail.com