ಸೋಂಕಿತರಿಗೆ ಅನ್ನ ದಾಸೋಹ ತರಳಬಾಳು ಜಗದ್ಗುರು ಶ್ಲ್ಯಾಘನೆ

ದಾವಣಗೆರೆ,ಮೇ 6- ಕೊರೊನಾ ಸೋಂಕಿತರು, ಸರ್ಕಾರಿ ಆಸ್ಪತ್ರೆಯ ರೋಗಿಗಳು, ಬಡವರಿಗೆ ಪ್ರತಿದಿನ ಅನ್ನ ದಾಸೋಹ ನಡೆಸುತ್ತಿರುವ ತರಳಬಾಳು ಸೇವಾ ಸಮಿತಿ ಮತ್ತು ಶಿವಸೈನ್ಯ ಯುವಕರ ಸಂಘದ ಸೇವೆಯನ್ನು ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.

ಜನತಾ ಕರ್ಫ್ಯೂ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ರೋಗಿಗಳಿಗೆ ಪ್ರತಿದಿನ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ದಾನಿಗಳ ಸಹಕಾರ ಪಡೆದು ಅನ್ನ ದಾಸೋಹ ಮಾಡುತ್ತಿರುವ ತರಳಬಾಳು ಸೇವಾ ಸಮಿತಿ ಮತ್ತು ಶಿವಸೈನ್ಯ ಯುವಕರ ಸಂಘದ ಕಾರ್ಯಕರ್ತರ ಸೇವೆ ಶ್ಲ್ಯಾಘನೀಯವಾದದ್ದು ಎಂದು ಜಗದ್ಗುರುಗಳು ಹೇಳಿದ್ದಾರೆ. ಕಾರ್ಯಕರ್ತರ ಸೇವೆಯನ್ನು ತಿಳಿದು, ಸಂಘದ ಗೌರವಾಧ್ಯಕ್ಷ ಶಶಿಧರ್ ಹೆಮ್ಮನಬೇತೂರು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಜಗದ್ಗುರುಗಳು, ಈ ಪುಣ್ಯದ ಕಾರ್ಯಕ್ಕೆ ತಮ್ಮ ಮಠದಿಂದಲೂ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.