ಕೊರೊನಾ ಲಸಿಕೆ ವಿತರಣೆಯು ಬೂತ್ ಮಟ್ಟದಲ್ಲಿ ನಡೆಯುಲಿ

ದಾವಣಗೆರೆ,ಮೇ 6- ಕೊರೊನಾ ಲಸಿಕೆ ವಿತರಣೆಯು ಬೂತ್ ಮಟ್ಟದಲ್ಲಿ ನಡೆಯುವಂತಾಗಲಿ ಎಂದು ಸಲಹೆ ನೀಡಿರುವ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಳ್ಳಿ ರಮೇಶ್, ಇದರಿಂದ ವಿತರಣೆಯಲ್ಲಾಗುತ್ತಿರುವ ಗೊಂದಲ ವನ್ನು ನಿವಾರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ನಡುವೆಯೂ ಜನರು ಅದರಲ್ಲೂ ವಯೋವೃದ್ಧರು ದೊಡ್ಡ ಸಂಖ್ಯೆಯಲ್ಲಿ ಲಸಿಕಾ ಕೇಂದ್ರಗಳ ಎದುರು ಜಮಾಯಿಸುತ್ತಿರುವ ಹಿನ್ನೆಲೆಯಲ್ಲಿ ಜನತಾವಾಣಿಯೊಂದಿಗೆ ಮಾತನಾಡಿದ ಅವರು, ಲಸಿಕೆ ವಿತರಣೆ ಸುಗಮವಾಗಿ ನಡೆಯಬೇಕಾದರೆ ಬೂತ್ ಮಟ್ಟದ ವಿತರಣೆಯೊಂದೇ ಮಾರ್ಗ ಎಂದು ಹೇಳಿದ್ದಾರೆ. 

ಮಹಾನಗರ ಪಾಲಿಕೆಯು ಎಲ್ಲಾ 45 ವಾರ್ಡುಗಳಲ್ಲಿರುವ ಆರೋಗ್ಯ ವಿಭಾಗದ ನಿರೀಕ್ಷಕರ ಮೂಲಕ ಆಯಾ ವಾರ್ಡುಗಳ ಜನರಿಗೆ ಪ್ರತಿದಿನ ನಿಗದಿಪಡಿಸುವ ಲಸಿಕೆ ವಿತರಣೆಯ ಟೋಕನ್ ಗಳನ್ನು ಲಸಿಕೆ ಹಾಕುವ ಹಿಂದಿನ ದಿನ ವಿತರಿಸಿದ್ದಲ್ಲಿ ಯಾವುದೇ ಗೊಂದಲ – ರಶ್ ಇಲ್ಲದಂತೆ ಎಲ್ಲರಿಗೂ ಲಸಿಕೆ ಸಿಗಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.

ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 400 ಕ್ಕೂ ಹೆಚ್ಚು ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡುವ ಬೂತ್ ಗಳಿದ್ದು, ಈ ಬೂತ್ ಗಳಲ್ಲಿ  ಲಸಿಕೆ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದಲ್ಲಿ ಯಾವುದೇ ಸಮಸ್ಯೆಗಳಿಲ್ಲದಂತೆ ಲಸಿಕೆ ಎಲ್ಲಾ ಜನರನ್ನು ತಲುಪುತ್ತದೆ ಎಂದು ಶಿವನಳ್ಳಿ ರಮೇಶ್ ಹೇಳಿದ್ದಾರೆ.