ಕೋವ್ಯಾಕ್ಸಿನ್ ಮೊದಲ ಡೋಸ್‌ಗೆ ತಡೆ

ಜಿಲ್ಲೆಯಲ್ಲಿ 6 ಸಾವಿರ ಕೋವಿಶೀಲ್ಡ್ ಲಸಿಕೆ ವಿತರಣೆ

ದಾವಣಗೆರೆ, ಮೇ 5 – ಜಿಲ್ಲೆಯಲ್ಲಿ ಬುಧವಾರದಂದು ಹಲವಾರು ಸರ್ಕಾರಿ ಲಸಿಕಾ ಕೇಂದ್ರಗಳ ಮೂಲಕ 6,105 ಕೋವಿಶೀಲ್ಡ್ ಲಸಿಕೆಗಳನ್ನು ವಿತರಿಸಲಾಗಿದೆ. ಲಸಿಕೆ ಪಡೆದವರಲ್ಲಿ ಬಹುತೇಕರು ಎರಡನೇ ಡೋಸ್‌ನವರಾಗಿದ್ದಾರೆ.

ಜಿಲ್ಲೆಗೆ ಮಂಗಳವಾರದಂದು 9,500 ಡೋಸ್ ಲಸಿಕೆ ಬಂದಿತ್ತು. ಇದನ್ನು ಲಸಿಕಾ ಕೇಂದ್ರಗಳಿಗೆ ವಿತರಿಸಲಾಗಿದೆ. ಬುಧವಾರದಂದು 6,105 ಡೋಸ್ ಲಸಿಕೆಗಳನ್ನು ವಿತರಿಸಲಾಗಿದೆ. ಈ ಪೈಕಿ 5,000 ಡೋಸ್‌ಗಳನ್ನು ಎರಡನೇ ಬಾರಿ ಪಡೆಯುತ್ತಿರುವವರಿಗೆ ನೀಡಲಾಗಿದೆ. ಉಳಿದ ಸಾವಿರದಷ್ಟು ಡೋಸ್‌ಗಳನ್ನು ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗಿದೆ.

ತಾಲ್ಲೂಕುಗಳಲ್ಲಿ ಇನ್ನೂ ಮೂರೂವರೆ ಸಾವಿರದಷ್ಟು ಲಸಿಕೆ ಇದ್ದು, ಇದನ್ನು ನಾಳೆ ಗುರುವಾರ ನೀಡಲಾಗುವುದು. ಬುಧವಾರ ಜಿಲ್ಲೆಗೆ ಯಾವುದೇ ಲಸಿಕೆ ಬಂದಿಲ್ಲ ಎಂದು ಜಿಲ್ಲೆಯಲ್ಲಿ ಲಸಿಕೆಯ ನೋಡಲ್ ಅಧಿಕಾರಿಯಾಗಿರುವ ಡಾ. ಕೆ.ಎಸ್. ಮೀನಾಕ್ಷಿ ತಿಳಿಸಿದ್ದಾರೆ.

ಪ್ರಸಕ್ತ ರಾಜ್ಯ ಸರ್ಕಾರದಿಂದ ಕೋವಿಶೀಲ್ಡ್ ಲಸಿಕೆಗಳು ಮಾತ್ರ ಬಂದಿವೆ. ಕೋವ್ಯಾಕ್ಸಿನ್ ಲಸಿಕೆ ಇನ್ನೊಂದೆರಡು ದಿನಗಳಲ್ಲಿ ಬರುವ ನಿರೀಕ್ಷೆ ಇದೆ. ಸ್ವಲ್ಪ ಪ್ರಮಾಣದ ಲಸಿಕೆ ಬರುವ ಸಾಧ್ಯತೆ ಇದ್ದು, ಇದನ್ನು ಎರಡನೇ ಡೋಸ್‌ನವರಿಗೆ ನೀಡಲಾಗುವುದು. ಮೊದಲ ಡೋಸ್ ಆಗಿ ಕೋವ್ಯಾಕ್ಸಿನ್ ಸದ್ಯಕ್ಕೆ ನೀಡುವುದಿಲ್ಲ ಎಂದವರು ಹೇಳಿದ್ದಾರೆ.

Leave a Reply

Your email address will not be published.