ಲಾಕ್‌ಡೌನ್‌ನಲ್ಲೂ ಕೈ ಹಿಡಿದ `ಉದ್ಯೋಗ ಖಾತ್ರಿ ಯೋಜನೆ’

ಲಾಕ್‌ಡೌನ್‌ನಲ್ಲೂ ಕೈ ಹಿಡಿದ `ಉದ್ಯೋಗ ಖಾತ್ರಿ ಯೋಜನೆ’

ಗ್ರಾಮೀಣ ಭಾಗದ ನಿರುದ್ಯೋಗಿ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕಲ್ಪಿಸಲಾಗುತ್ತಿದೆ, ಈ ಸಂಕಷ್ಟಮಯ ಸಂದರ್ಭದಲ್ಲಿ, ಕೊರೊನಾ ಅಟ್ಟಹಾಸದ ಮಧ್ಯೆ ಜೀವನ ನಡೆಸಲು ಈ ಯೋಜನೆ ವರದಾನವಾಗಿದೆ. ಬಡ ಕುಟುಂಬಗಳು ಆರ್ಥಿಕ ಪುನಶ್ಚೇತನ ಹೊಂದಲು ಸಾಧ್ಯವಾಗುತ್ತಿದೆ. 

ಬಿರುಬೇಸಿಗೆ ಹಾಗೂ ಲಾಕ್‌ಡೌನ್ ನಿಂದ ಯಾವುದೇ ಕೆಲಸವಿಲ್ಲದೆ ತೊಂದರೆಯಲ್ಲಿದ್ದ ಗ್ರಾಮೀಣ ಕೃಷಿ ಕಾರ್ಮಿಕರಿಗೆ ಹಾಗೂ ಸಣ್ಣ ರೈತಾಪಿ ಜನರಿಗೆ  ತಾಲ್ಲೂಕಿನ ಕೃಷಿ ಇಲಾಖೆ ಕೈಗೊಂಡಿರುವ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೈಹಿಡಿದಿದೆ.

ಕೃಷಿ ಇಲಾಖೆವತಿಯಿಂದ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಂತರ್ಜಲ ಅಭಿವೃದ್ಧಿಗೆ ಕಂದಕ, ಬದು ನಿರ್ಮಾಣ, ಮಳೆ ನೀರು ಸಂಗ್ರಹಣೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕಾಮಗಾರಿಗಳು ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿದರೆ, ರೈತರಿಗೆ ಅಂತರ್ಜಲ ಅಭಿವೃದ್ಧಿಗೆ ನೆರವಾಗಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ  ಯಾವುದೇ ಕೆಲಸಗಳು ಇರುವುದಿಲ್ಲ. ಅಲ್ಲದೆ ಕೆಲಸ ಅರಸಿ ಹೋಗಿದ್ದ ಕೆಲವರು ಪುನಃ ಗ್ರಾಮಕ್ಕೆ ಹಿಂದಿರುಗಿದ್ದಾರೆ. ಅವರು ಸಹ ಕೆಲಸವಿಲ್ಲದೆ ಪರಿತಪಿಸುವ ಪರಿಸ್ಥಿತಿ ಉಂಟಾಗಿದೆ. ಕಳೆದ ವರ್ಷವೂ ಸಹ ಕೊರೊನಾ ಹಿನ್ನೆಲೆಯಲ್ಲಿ ಉಂಟಾಗಿದ್ದ ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಮೀಣ ಕಾರ್ಮಿಕರು, ಕೃಷಿಕರು, ವ್ಯಾಪಾರಸ್ಥರು ತೀವ್ರ ತೊಂದರೆಗೆ ಒಳಗಾಗಿದ್ದನ್ನು ಮರೆಯುವಂತಿಲ್ಲ.

ಪ್ರಸಕ್ತ ವರ್ಷವೂ ಸಹ ಕೊರೊನಾ ಕಾರಣದಿಂದಾಗಿ ಪುನಃ ಲಾಕ್‌ಡೌನ್ ಉಂಟಾಗಿದ್ದು ಮತ್ತೆ ಕಾರ್ಮಿಕರು,  ಭೂರಹಿತ ಕೃಷಿ ಕಾರ್ಮಿಕರು, ಬಡಜನರು ಉದ್ಯೋಗವಿಲ್ಲದೆ ಪರಿತಪಿಸುವ ಪರಿಸ್ಥಿತಿ ಉಂಟಾಗಿದೆ.

ಬಹುನಿರೀಕ್ಷಿತ ಕೇಂದ್ರ ಸರ್ಕಾರದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಕೃಷಿ ಇಲಾಖೆ ಕೈಗೊಂಡಿರುವ  ಅಂತರ್ಜಲ ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳು ಕೂಲಿ ಕಾರ್ಮಿಕರ ಬದುಕಿಗೆ ನೆರವಾಗಿದೆ.

ಕೃಷಿ ಇಲಾಖೆಯಿಂದ ಜಾರಿಯಲ್ಲಿದ್ದ ಜಲಾಮೃತ ಯೋಜನೆಯ ಮಾದರಿಯಲ್ಲಿಯೇ, ರೈತರ ಹೊಲದಲ್ಲಿ  ಕಂದಕ, ಬದು ನಿರ್ಮಾಣ, ಮಳೆ ನೀರು ಸಂಗ್ರಹ, ನೀರು ಹರಿಯುವುದನ್ನು ತಡೆಹಿಡಿಯುವುದು, ಮಣ್ಣಿನ ಸವಕಳಿ ತಪ್ಪಿಸುವುದು, ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್‌ಜಲ ಹೆಚ್ಚಿಸುವ ಕಾಮಗಾರಿಗಳು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಿವೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಚೀಟಿ ಹೊಂದಿರುವ ಕಾರ್ಮಿಕರು, ರೈತರು ಸ್ವಯಂ ಸ್ಪೂರ್ತಿಯಿಂದ  ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.  ಕೆಲವರು ತಮ್ಮದೇ ಜಮೀನಿನಲ್ಲಿ ಬದು ನಿರ್ಮಾಣ ಕಾಮಗಾರಿ ಕೈಗೊಂಡರೆ, ಇನ್ನೂ ಕೆಲವರು ಬೇರೆ ರೈತರು ತಮ್ಮ ಜಮೀನಿನಲ್ಲಿ ಕೈಗೊಂಡ ಕೆಲಸಕ್ಕೆ ಹಾಜರಾಗುತ್ತಿದ್ದಾರೆಂದು ಕೃಷಿ ಇಲಾಖೆಯ ಮೇಟಿ ಶಿವರಾಜ್ ಹೇಳುತ್ತಾರೆ.

ಬೇಸಿಗೆಯ ಸಂದರ್ಭದಲ್ಲಿ ಕೆಲಸವಿಲ್ಲದ ಕಾರ್ಮಿಕರಿಗೆ ಕೃಷಿ ಇಲಾಖೆ ಕೈಗೊಂಡಿರುವ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ತುಂಬಾ ಅನುಕೂಲವಾಗಿವೆ.

ಪ್ರಸ್ತುತ ಉದ್ಯೋಗ ಖಾತ್ರಿ ನಿಯಮದಂತೆ ಪ್ರತಿ ಕಾರ್ಮಿಕರಿಗೆ  ದಿನಕ್ಕೆ 289 ರೂಪಾಯಿ ಕೂಲಿ ಸಿಗಲಿದೆ. ವಾರಕ್ಕೊಮ್ಮೆ ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ.

ತಾಲ್ಲೂಕಿನ ಹಿರೇಮಲ್ಲನಹೊಳೆ, ಕ್ಯಾಸೇನಹಳ್ಳಿ, ಅಣಬೂರು ಮತ್ತು ದೊಣ್ಣೆಹಳ್ಳಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಏಪ್ರಿಲ್ ತಿಂಗಳಿಂದ ಸುಮಾರು 219 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, 4500 ಮಾನವ ದಿನಗಳು ಸೃಷ್ಟಿಯಾಗಿವೆ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸಲು.

 ಗ್ರಾಮೀಣ ಪ್ರದೇಶದಲ್ಲಿ ಸದ್ಯಕ್ಕೆ ಕೃಷಿ ಚಟುವಟಿಕೆಗಳು ಇಲ್ಲದ ಕಾರಣ ಕಾರ್ಮಿಕರು ರೈತಾಪಿ ಜನರು ತಮ್ಮ ಜಮೀನುಗಳಲ್ಲಿ ಅಂತರ್ಜಲಕ್ಕೆ ಸಂಬಂಧಿಸಿದ ಕಾಮಗಾರಿಗಳು ಕೈಗೊಳ್ಳುವ ಮೂಲಕ ಲಾಕ್‌ಡೌನ್‌  ಸಂದರ್ಭದಲ್ಲೂ ಕೆಲಸ ಸಿಕ್ಕಿದಂತಾಗಿದೆ. ಕೆಲಸಕ್ಕಾಗಿ ಗುಳೇ ಹೋಗುವ ಸಂದರ್ಭವೂ ಇಲ್ಲದ ಈ ಸಮಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ಜನರಿಗೆ ನೆರವಾಗಿದೆ.


ಬಿ.ಪಿ.ಸುಭಾನ್

subhanjvani@gmail.com