ಮಾವು ಬೆಳೆ ಬಂಜೆತನಕ್ಕೆ ಜಾರುತ್ತಿದೆ…

ಮಾವು ಬೆಳೆ ಬಂಜೆತನಕ್ಕೆ ಜಾರುತ್ತಿದೆ…

ಕಳೆದ 4-5 ವರ್ಷಗಳಿಂದ ಫಲ ಬಿಡದೆ ಮಾಮರ ಗಳು ಮುಷ್ಕರದಲ್ಲಿದ್ದಂತೆ ಕಾಣುತ್ತೆ. ಏಳು, ಎಂಟು ವರ್ಷಗಳಿಂದ ಸಕಾಲಿಕ ಮಳೆಯಾಗದೆ ಮರಗಳು ತಮ್ಮಲ್ಲಿಯ ಶಕ್ತಿ ಕಳೆದುಕೊಂಡು ಫಲ ಬಿಡುವ ಸ್ಥಿತಿಯಿಂದ ಬಹುದೂರ ಬಂದಿದೆ. ಕಳೆದ ವರ್ಷ ಅಲ್ಪಸ್ವಲ್ಪ ಬೆಳೆಯಾಗಿತ್ತು. ಕೋವಿಡ್ ಕಾರಣದಿಂದ ಬೆಳೆಗಾರ ಮತ್ತು ಮಾರಾಟಗಾರ ಇಬ್ಬರೂ ಸಹ ಅತಂತ್ರ ಸ್ಥಿತಿಯಲ್ಲಿದ್ದಾರೆ.

ನಮ್ಮಲ್ಲಿ ಅತಿ ಹೆಚ್ಚು ಮಾವು ಬೆಳೆ ಬೆಳೆಯುವ ಗ್ರಾಮದ ರೈತರಿಗೆ ಮಾತಾಡಿಸಿದರೆ, ಕೋವಿಡ್ ಬದಲು ಸಾವು ಬಂದರೆ ಒಳಿತು. ಹಿಂಗಾರು ಮಳೆ ಚೆನ್ನಾಗಿದ್ದ ಕಾರಣ ಈ ವರ್ಷ ಒಳ್ಳೆಯ ಬೆಳೆ ಬರುತ್ತದೆ ಎಂಬ ನಿರೀಕ್ಷೆಯಿಂದ   ಒಡಂಬಡಿಕೆ ಮಾಡಿಕೊಂಡಿದ್ದೆವು. ಕಳೆದ ವರ್ಷವೂ ಸಹ ಬೆಳೆಯಿಲ್ಲ.  ಕೋವಿಡ್ ಕಾರಣ ಮಾರಾಟವಿಲ್ಲ ಎಂದು ರೈತನಿಗೆ ಅರ್ಧ ದುಡ್ಡು ಕೊಡುವಲ್ಲಿ ಭೂಮಿಯಾಕಾಶ ಒಂದು ಮಾಡಿದಷ್ಟು ಶ್ರಮವಾಯಿತು. ಈ ವರ್ಷ ಬರೀ 20 ಭಾಗದಷ್ಟು ಮಾತ್ರ ಬೆಳೆ ಬಂದಿರುವ ಸಂದರ್ಭದಲ್ಲಿ ಪುನಃ ಕೋವಿಡ್ ಹೆಚ್ಚಳದಿಂದ  ಸಂಕಷ್ಟ ಎದುರಾಗಿದೆ.

ಸಂತೇಬೆನ್ನೂರು ಸುತ್ತಮುತ್ತಲ ರೈತರು ಸುಮಾರು 22 ಸಾವಿರ ಹೆಕ್ಟೇರ್‌ನಲ್ಲಿ ಮಾವು ಕೃಷಿ ಅಭಿವೃದ್ಧಿ ಪಡಿಸಿಕೊಂಡಿದ್ದರು. ಸರ್ಕಾರದ ಅನೇಕಾನೇಕ ಯೋಜನೆಗಳು ಚಾಲ್ತಿ ಯಲ್ಲಿದ್ದರೂ ಸಹ ತೋಟಗಾರಿಕೆ ಇಲಾಖೆ ಯಿಂದ ಧನಾತ್ಮಕ ಕಾರ್ಯನಿರ್ವಹಣೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಸುಮಾರು ನಾಲ್ಕೈದು ವರ್ಷಗಳಿಂದಲೂ ಸಹ ಮಾವು ಬೆಳೆಗಾರ ಬೆಳೆಯಿಲ್ಲದೆ, ಬೆಲೆಯೂ ಇಲ್ಲದೇ ಅಸ್ಥಿಪಂಜರ ದಂತಾಗುತ್ತಿದ್ದಾನೆ. ಇದಕ್ಕೆ ಪೂರಕವಾದ ಪರಿಹಾರ ಮತ್ತು ಮಾರ್ಗೋಪಾಯಗಳೇನು ಎಂಬುದನ್ನು ಸಂಬಂಧಪಟ್ಟ ಇಲಾಖೆ ಮಾಡದಿರುವುದು ಇಲಾಖೆಯ ನೈತಿಕತೆ, ಕಾರ್ಯ ವೈಖರಿಯ ಬಗ್ಗೆ ಪ್ರಶ್ನೆ ಏಳುವುದು ಸಹಜ. ವರ್ಷಕ್ಕೊಮ್ಮೆ ಗ್ಲಾಸ್‌ಹೌಸ್‌ನಲ್ಲಿ  `ಮಾವು ಮೇಳ’ ಇಲಾಖೆ ಪ್ರಾಂಗಣದಲ್ಲಿ `ಪುಷ್ಪ ಮೇಳ’ ಮಾಡಿದರೆ ತೋಟಗಾರಿಕೆ ಇಲಾಖೆ ಕೆಲಸ ಮುಗಿಯಿತು.

ಹಿಂದೆರಡು ವರ್ಷಗಳಿಂದ ಶೈತ್ಯಾಗಾರ ಗಳನ್ನು ಅಲ್ಲಿ ನಿರ್ಮಿಸಲಾಗುತ್ತದೆ, ಇಲ್ಲಿ ನಿರ್ಮಿಸಲಾಗುತ್ತದೆ ಎಂದು ಚುನಾಯಿತ ಪ್ರತಿನಿಧಿಗಳು ಹೇಳಿಕೊಂಡಿದ್ದುಂಟು. ಆದರೆ ಇಲ್ಲಿಯವರೆಗೂ ಯಾವ ಕಾರ್ಯ ಗಳು ಆಗಿಲ್ಲ. ಶೈತ್ಯಾಗಾರಗಳು ನಿರ್ಮಿಸಿ ಕೊಟ್ಟಿದ್ದರೆ ಅವು ಇಂತಹ ಸಂದರ್ಭದಲ್ಲಿ ರೈತರಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದವು. ಧಾರಣೆ ಕುಸಿತ ಕಂಡಾಗಲೂ ಸಹ ಶೈತ್ಯಾಗಾರಗಳು ರೈತನ ಬೆಳೆಗೆ ಸೂಕ್ತ ಬೆಲೆ ನೀಡುವ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂಬುದರಲ್ಲಿ ಸಂದೇಹವೇ ಇಲ್ಲ. 

ಮಾವು ಬೆಳೆಯನ್ನು ರೈತ 6-7 ವರ್ಷ ನೀರೆರೆದು ಪ್ರತಿವರ್ಷ ಎಕರೆಗೆ 80 ಸಾವಿರದಿಂದ ಒಂದು ಲಕ್ಷ ಖರ್ಚು ಮಾಡಿ ಬೆಳೆಸುತ್ತಾನೆ . ಬಡವ 1 ಎಕರೆ ಎರಡು ಎಕರೆಯಲ್ಲಿ ಗಿಡನೆಟ್ಟು ಫಸಲಿಗೆ ಬಂದಾಗ ಬಂಜೆ ರೂಪ ನೋಡಿ ಕಂಗಾಲಾಗುತ್ತಿರುವುದಂತೂ ಸತ್ಯ. 

ವಿಶ್ವಾಸವನ್ನು ಕಳೆದುಕೊಂಡು ಮಾವು ಬೆಳೆಗಾರ ಬರುಬರುತ್ತಾ ಆರ್ಥಿಕವಾಗಿ ತೀರ ಕೆಳ ಹಂತಕ್ಕೆ ತಲುಪಿದ್ದು, ಬೇರೆಯವರ ಅಡಿಕೆ ತೋಟ, ಗದ್ದೆಗಳಲ್ಲಿ ಕೂಲಿಗೆ ಕೇಳುವ ಸ್ಥಿತಿಗೆ ತಲುಪಿದ್ದಾನೆ. ಮಾವು ಬೆಳೆಗಾರರ ಬಗ್ಗೆ ಸರ್ಕಾರವಾಗಲಿ, ತೋಟಗಾರಿಕೆ ಇಲಾಖೆ ಅಧಿಕಾರಿ ವರ್ಗವಾಗಲೀ ಗಮನ ಹರಿಸಿ, ಮಾವು ಬೆಳೆಗೆ ಉತ್ತೇಜಿಸಬಹುದೇ ಎಂಬ ನಿರೀಕ್ಷೆ ನಮ್ಮದಾಗಿದೆ.


ಕೆ. ಸಿರಾಜ್ ಅಹಮ್ಮದ್
ಸಂತೇಬೆನ್ನೂರು.
sirajahmedsk0@gmail.com