ಸಾವಿರ ಬೆಡ್ ಲಭ್ಯ, ಆಕ್ಸಿಜನ್ ಸಮರ್ಪಕ

ಬಹಳ ಪ್ರಕರಣಗಳು ಬಂದರೂ ನಿಭಾಯಿಸಲು ತಯಾರಿ : ಡಿಸಿ

ದಾವಣಗೆರೆ, ಏ. 27 – ಜಿಲ್ಲೆಯಲ್ಲಿ ಆಕ್ಸಿಜನ್ ಹಾಗೂ ಬೆಡ್‌ಗಳ ಕೊರತೆ ಇಲ್ಲ ಎಂದಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲೆಯಲ್ಲಿ 1,360 ಬೆಡ್‌ಗಳು ಲಭ್ಯವಿವೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ಕೊರೊನಾ ನಿರ್ಬಂಧ ಜಾರಿ ಕುರಿತು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಪ್ರಸಕ್ತ ಜಿಲ್ಲೆಯ ಆಸ್ಪತ್ರೆಗಳಲ್ಲಿ 522 ಕೊರೊನಾ ಸೋಂಕಿತರಿದ್ದಾರೆ.  ಬಹಳ ಪ್ರಕರಣಗಳು ಬಂದರೂ ನಿಭಾಯಿಸಲು ತಯಾರಿ ಮಾಡಿಕೊಂಡಿದ್ದೇವೆ. ಕೊರೊನಾ ಕೇರ್ ಸೆಂಟರ್‌ಗಳನ್ನೂ ಸಹ ತೆರೆಯಲಾಗುವುದು ಎಂದರು.

ಸಿ.ಜಿ. ಆಸ್ಪತ್ರೆಯಲ್ಲಿ ಕೇವಲ ಒಬ್ಬರು, ಎಸ್.ಎಸ್.ಐ.ಎಂ.ಎಸ್.ನಲ್ಲಿ 14 ಹಾಗೂ ಬಾಪೂಜಿ ಆಸ್ಪತ್ರೆಯಲ್ಲಿ ಒಬ್ಬರು ವೆಂಟಿಲೇಟರ್‌ನಲ್ಲಿದ್ದಾರೆ. ಜಿಲ್ಲೆಯ 522 ಕೊರೊನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಅಲೆಯಲ್ಲಿ ಕೊರೊನಾ ಅತಿ ಹೆಚ್ಚಾದಾಗ ಸಿ.ಜಿ. ಆಸ್ಪತ್ರೆಯೊಂದರಲ್ಲೇ 370 ಜನರವರೆಗೂ ಚಿಕಿತ್ಸೆ ನೀಡಿ ಗುಣಪಡಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಸಿ.ಜಿ. ಆಸ್ಪತ್ರೆಯಲ್ಲಿರುವ ಆಕ್ಸಿಜನ್ ಘಟಕ ಹಾಗೂ ಹರಿಹರದ ಸದರನ್ ಗ್ಯಾಸಸ್‌ ಮೂಲಕ ಆಕ್ಸಿಜನ್ ಪಡೆಯಲಾಗುತ್ತಿದೆ. ಇದು ಜಿಲ್ಲೆಗೆ ಪ್ರಸಕ್ತ ಸಾಕಷ್ಟಾಗಿದೆ. ಆಕ್ಸಿಜನ್ ಬಳಕೆಯ ಕುರಿತು ಆಡಿಟ್ ನಡೆಸಿ ಪರಿಣಿತ ರೀತಿಯಲ್ಲಿ ಬಳಸಲಾಗುತ್ತಿದೆ ಎಂದವರು ಹೇಳಿದ್ದಾರೆ.

ಸೋಂಕಿತರು ಬೇರೆ ಜಿಲ್ಲೆಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಜಿಲ್ಲಾಡಳಿತದಿಂದ ಪ್ರತ್ಯೇಕ ಪಾಸ್‌ ಪಡೆಯುವ ಅಗತ್ಯವಿಲ್ಲ. ಆದರೆ, ಜಿಲ್ಲೆಯಲ್ಲೇ ಉತ್ತಮ ಚಿಕಿತ್ಸೆ ಲಭ್ಯವಿದೆ. ನಮ್ಮಲ್ಲಿ ನುರಿತ ವೈದ್ಯರಿದ್ದಾರೆ. ನಮ್ಮ ಮೇಲೆ ವಿಶ್ವಾಸ ಇಡಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಶೇ.75ರಷ್ಟು ಬೆಡ್‌ಗಳನ್ನು ಸರ್ಕಾರ ಪಡೆದುಕೊಂಡಿದೆ. ಕೊರೊನಾ ಸೋಂಕಿತರು ಜಿಲ್ಲಾ ಆರೋಗ್ಯಾ ಧಿಕಾರಿ ಇಲ್ಲವೇ ಜಿಲ್ಲಾ ಸರ್ಜನ್ ಅವರಿಂದ ರೆಫರಲ್ ಲೆಟರ್ ಪಡೆದು ಖಾಸಗಿ ಆಸ್ಪತ್ರೆಗೆ ದಾಖ ಲಾಗಬಹುದು ಎಂದ ಅವರು, ಕೋವಿಡೇತರ ರೋಗಿಗಳೂ ಸಹ ಬಿಪಿಎಲ್ ಕಾರ್ಡ್ ಹೊಂದಿದ್ದರೆ ನಿಯೋಜಿತ ಖಾಸಗಿ ಆಸ್ಪತ್ರೆ ಯಲ್ಲಿ ಉಚಿತ ಚಿಕಿತ್ಸೆ ಪಡೆಯ ಬಹುದು. ಇದಕ್ಕಾಗಿ ಆರೋಗ್ಯ ಮಿತ್ರರನ್ನು ಸಂಪರ್ಕಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಹನುಮಂತರಾಯ, ರೋಗಿಗಳು ಬೇರೆ ಜಿಲ್ಲೆಗೆ ತೆರಳಿ ಚಿಕಿತ್ಸೆ ಪಡೆಯುವ ಅಗತ್ಯ ಎದುರಾದರೆ ಮಾರ್ಗಸೂಚಿಗಳಲ್ಲಿ ಅದಕ್ಕೆ ಅವಕಾಶವಿದೆ ಎಂದ ಹನುಮಂತರಾಯ, ಈ ರೀತಿ ತೆರಳುವವರು ವಿಶೇಷವಾಗಿ ಪಾಸ್ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದರು.

ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಇದುವರೆಗೂ 13 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಮೂರು ಮದುವೆ ಛತ್ರಗಳ ವಿರುದ್ಧ ತೆಗೆದುಕೊಂಡ ಕ್ರಮ ಸೇರಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎ ಶ್ರೀನಿವಾಸ ಚಿಂತಾಲ್, ಕೃಷಿಗೆ ಸಂಬಂಧಿಸಿದ ಪರಿಕರಗಳನ್ನು ಮಾರುವವರಿಗೆ ಹಾಗೂ ಯಂತ್ರಗಳನ್ನು ಬಾಡಿಗೆಗೆ ಕೊಡುವವರಿಗೆ ಗ್ರೀನ್ ಪಾಸ್ ನೀಡಲಾಗುವುದು. ಇವುಗಳನ್ನು ಜಿಲ್ಲಾ ಹಾಗೂ ತಾಲ್ಲೂಕು ಕೃಷಿ ಕಚೇರಿಗಳಲ್ಲಿ ಪಡೆಯಬಹುದು ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ ಬೋಮ್ಮನ್ನರ್ ಮಾತನಾಡಿ, ತೋಟಗಾರಿಕಾ ಉತ್ಪನ್ನಗಳು ಹಾಗೂ ಮಾವುಗಳನ್ನು ಮಾರಾಟ ಮಾಡಲು ಇಲಾಖೆ ನೆರವು ನೀಡಲಿದೆ. ಇದಕ್ಕಾಗಿ ಸಹಾಯವಾಣಿಗಳನ್ನೂ ಸ್ಥಾಪಿಸಲಾಗಿದೆ ಎಂದು ಹೇಳಿದರು.

 ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಆರ್.ಟಿ.ಒ. ಶ್ರೀಧರ್, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್, ಜಿಲ್ಲಾ ಆರ್‌‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ದೂಡಾ ಆಯುಕ್ತ ಕುಮಾರಸ್ವಾಮಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೆಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.