ಲಾಕ್ ಡೌನ್ V/s ಕರ್ಫ್ಯೂ!!!

ಲಾಕ್ ಡೌನ್  V/s  ಕರ್ಫ್ಯೂ!!!

ಏನ್ ಅಂಕಲ್ ಬಹಳ ಸುಸ್ತಾದಂಗೆ ಕಾಣ್ತೀರಿ?

ಹೇ, ಕ್ಯೂನಾಗೆ ನಿಂತು ನಿಂತು ಸಾಕಾಯ್ತು. ಸುಸ್ತಾತು.

ಅದು ಯಾವ ಕ್ಯೂನಾಗೆ ನಿಂತಿದ್ರೀ?

ಎಣ್ಣೇ ಅಂಗಡಿ ಮುಂದೆ!

ಹ್ಞಾಂ! ಎಣ್ಣೆಗೆ ಅಷ್ಟೊಂದು Rush…ಹಾ?

ಲೇ ತಮ್ಮಾ ಅಡುಗೆ ಎಣ್ಣೆಗೆ ಅಲ್ಲಪಾ. ನಾವು ಸಂಜೆ ಗ್ಲಾಸಿನಲ್ಲಿ ಏರಿಸೋ ಎಣ್ಣೆ! ಇನ್ನು ಹದಿನಾಲ್ಕು ದಿನ ಹೊರಗೆ ಹೋಗೋ ಹಾಗಿಲ್ಲ. ಯಾವಾಗ ಚಟ್ಟಕ್ಕೇರ್ತವೋ ಗೊತ್ತಿಲ್ಲ. ಅಷ್ಟರೊಳಗೆ ನಮ್ಮ ಚಟಕ್ಕೆ ವ್ಯವಸ್ಥೆ ಮಾಡಿಕೊಳ್ಳಾಣ ಅಂತ.

ಓಹೋ ಅದಕ್ಕಾ! ಹ್ಞೂಂ ಅವರವರ ಚಿಂತೆ ಅವರವರಿಗೆ.

ಚಿಂತೆ ಅಲ್ಲಪಾ. ಕಷ್ಟ! ಅವರವರ ಕಷ್ಟ ಅವರವರಿಗೆ. ಈಗ ಕರ್ಫ್ಯೂ ಅಂತಾರೆ ನಾಳೆ ಲಾಕ್ ಡೌನ್ ಅಂದ್ರೇ? ಆಮೇಲೆ ಏನೂ ಸಿಗಲ್ಲ. ಅದಕ್ಕೇ ಮುಂಜಾಗರೂಕತೆಯಿಂದ ಸ್ಟಾಕ್ ಮಾಡ್ಕೆಂತಾ ಇದೀನಿ.

ಹೌದೂ ಈ ಲಾಕ್ ಡೌನಿಗೂ ಕರ್ಫ್ಯೂಗೂ ಏನು ವ್ಯತ್ಯಾಸ? 

ನೋಡು ತಮ್ಮಾ ಲಾಕ್ ಡೌನ್ ಅಂದ್ರೇ ಬಾಯಿಗೆ ಪ್ಲಾಸ್ಟರ್ ಹಾಕಿದಂಗೆ. ಬಂದ್. ದೂಸರಾ ಮಾತಾಡಂಗೇ ಇಲ್ಲ. ಕರ್ಫ್ಯೂ ಅಂದ್ರೆ ಮಾಸ್ಕ್ ಹಾಕಿದಂಗೆ. ತುಟಿ ಮಿಸ್ಕ್ಯಾಡಿಸಬಹುದು ಒಳಗೊಳಗೆ ಮಾತಾಡಬಹುದು. ಉದಾಹರಣೆಗೆ ಬೆಳಿಗ್ಗೆ ಒಂದು ನಾಲ್ಕು ತಾಸು ಹೊರಗೆ ಹೋಗಿ ಅಗತ್ಯ ವಸ್ತು ತಗೋಬಹುದು.

ಇಂತಹ ನಿರ್ಬಂಧ ಹೇರಿದರೆ ಕರೊನಾ ಕಂಟ್ರೋಲ್ ಮಾಡಬಹುದಾ?

ಒಂದಷ್ಟು ದಿವಸ ಮನೇಲಿ ಮುಚ್ಗೆಂಡು ಇದ್ದರೆ ಅದು ಹರಡುವುದನ್ನು ತಡೆಯ ಬಹುದು ಅಂತ ಲೆಕ್ಕಾಚಾರ ಸರಕಾರದ್ದು. ನೊಡೋಣ, ಕೊರೊನಾ ನಿಯಂತ್ರಣಕ್ಕೆ ಬರುತ್ತಾ ಇಲ್ಲವೋ ಅಂತ.

ಈಗ ಕೊರೊನಾ ನಿಯಂತ್ರಣಕ್ಕೆ ಪ್ರಾಣಾಯಾಮ ಮಾಡಿ, ನೀರಿನ ಆವಿ ತಗೊಳ್ಳಿ, ಲಿಂಬೆ ರಸ ಮೂಗಿನಲ್ಲಿ ಹಾಕಿಕೊಳ್ಳಿ ಅದು ರಾಮಬಾಣ ಅಂತಾರಲ್ಲ?

ನೋಡೂsss ಮುನ್ನೆಚರಿಕೆ ಕ್ರಮವಾಗಿ ಬಹಳಷ್ಟು ವಿಷಯಗಳನ್ನು ನಾವು ಅಳವಡಿಸ್ಕೆಳ್ಳಬಹುದು. ಮಾಸ್ಕ್ ಹಾಕ್ಯಳ್ಳದು, ಅಂತರ ಕಾಪಾಡ್ಕೆಳ್ಳದು, ಯೋಗ ಮಾಡೋದು ಹೀಗೆ. ಎಲ್ಲವೂ ಒಂದು ರೀತಿಯಲ್ಲಿ ರಾಮಬಾಣನೇ. ಅವನ್ನೆಲ್ಲಾ ನನ್ನಂತವರು ಮಾಡಕ್ಕಾಗಲ್ಲ ಅಂತ ಶ್ಯಾಮಬಾಣ ಇಟ್ಕೆಂಡವಿ.

ಹ್ಞಾಂ! ರಾಮಬಾಣಕ್ಕೆ Alternet ಆಗಿ ಶ್ಯಾಮಬಾಣನಾ! ಏನದು?

ಎಣ್ಣೆ ಹೊಡೆಯೋದು!!!