ರಾಜಧಾನಿ ದೆಹಲಿ : ಅಂತ್ಯಕ್ರಿಯೆಯಲ್ಲಿ ನರಕ ದರ್ಶನ

ರಾಜಧಾನಿ ದೆಹಲಿ : ಅಂತ್ಯಕ್ರಿಯೆಯಲ್ಲಿ ನರಕ ದರ್ಶನ

ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ 20 ಗಂಟೆ ಕಾದು ಹತಾಶರಾಗುತ್ತಿರುವ ಜನ

ನವದೆಹಲಿ, ಏ. 27 – ದೇಶದ ರಾಜಧಾನಿಯಲ್ಲಿ ಕೊರೊನಾ ಸಾವಿನಂತೆಯೇ ಅಂತ್ಯಕ್ರಿಯೆಯೂ ಸಹ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಕುಟುಂಬದವರ ಅಗಲಿಕೆಯ ದುಃಖದಲ್ಲಿರುವವರು, ಅಂತ್ಯಕ್ರಿಯೆಗಾಗಿ 16ರಿಂದ 20 ಗಂಟೆ ಕಾಲ ಕಾಯುವ ಶೋಚನೀಯ ಸ್ಥಿತಿ ಎದುರಾಗಿದೆ.

ದೆಹಲಿಯ ಚಿತಾಗಾರಗಳಲ್ಲಿ ಹಿಂದಿನ ದಿನಗಳಿಗೆ ಹೋಲಿಸಿದರೆ ಹಲವು ಪಟ್ಟು ಮೃತದೇಹಗಳು ಬರುತ್ತಿವೆ. ಮೃತರಿಗೆ ಗೌರವಯುತವಾಗಿ ವಿದಾಯ ಹೇಳುವುದೂ ಸಹ ಜನರಿಗೆ ಸಂಕಷ್ಟಮಯವಾಗಿ ಪರಿವರ್ತನೆಯಾಗುತ್ತಿದೆ.

ಇಂತಹ ಕೆಟ್ಟ ಸ್ಥಿತಿಯನ್ನು ನಾನು ಜೀವನದಲ್ಲೇ ನೋಡಿಲ್ಲ. ಜನರು ಅಂತ್ಯಕ್ರಿಯೆಗಾಗಿ ಒಂದೆಡೆಯಿಂದ ಮತ್ತೊಂದೆಡೆ ಅಲೆಯುವ ಪರಿಸ್ಥಿತಿ ಬಂದಿದೆ. ಬಹುತೇಕ ಚಿತಾಗಾರಗಳಲ್ಲಿ ಶವಗಳು ತುಂಬಿ ತುಳುಕುತ್ತಿವೆ ಎಂದು ಮೆಸ್ಸಿ ಫ್ಯುನರಲ್ಸ್‌ನ ಮಾಲೀಕರಾದ ವಿನೀತ ಮೆಸ್ಸಿ ಹೇಳಿದ್ದಾರೆ.

ಈ ತಿಂಗಳಲ್ಲಿ 3,601 ಜನರು ದೆಹಲಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ದಾಖಲೆಗಳು ತಿಳಿಸಿವೆ. ಕಳೆದ ಒಂದು ವಾರದಲ್ಲೇ 2,267 ಜನ ಮೃತಪಟ್ಟಿದ್ದಾರೆ. ಕೊರೊನಾದ ಎರಡನೇ ಅಲೆ ರಾಜಧಾನಿಯ ಜನರ ಸ್ಥೈರ್ಯವನ್ನೇ ಉಡುಗಿಸುತ್ತಿದೆ. ಫೆಬ್ರವರಿಯಲ್ಲಿ ಸಾವುಗಳ ಸಂಖ್ಯೆ 57 ಆಗಿದ್ದರೆ, ಮಾರ್ಚ್‌ನಲ್ಲಿ 117ಕ್ಕೆ ಏರಿಕೆಯಾಗಿತ್ತು. 

ಮೃತದೇಹಗಳನ್ನು ಹೊತ್ತು ಅಂತ್ಯಕ್ರಿಯೆಗೆ ಬರುವವರನ್ನು ಚಿತಾಗಾರಗಳಿಂದ ವಾಪಸ್ ಕಳಿಸಲಾಗುತ್ತಿದೆ. ಅಲ್ಲಿಂದ ಅವರು ಮೃತದೇಹದೊಂದಿಗೆ ಇನ್ನೊಂದು, ಮತ್ತೊಂದು ಚಿತಾಗಾರಕ್ಕೆ ಹತಾಶರಾಗಿ ಅಲೆಯುವಂತಾಗಿದೆ. ಕೋವಿಡೇತರ ಸಾವುಗಳಿಗೆ ಗುರಿಯಾದವರ ಪರಿಸ್ಥಿತಿಯೂ ಹೀಗೆಯೇ ಆಗಿದೆ.

ಪಶ್ಚಿಮ ದೆಹಲಿಯ ಯುವ ಉದ್ಯಮಿ ಅಮನ್ ಅರೋರಾ ಅವರು ಹೃದಯಾಘಾತದ ಕಾರಣದಿಂದಾಗಿ ತಮ್ಮ ತಂದೆ ಎಂ.ಎಲ್. ಅರೋರಾ ಅವರನ್ನು ಸೋಮವಾರ ಕಳೆದುಕೊಂಡಿದ್ದರು. 

ಎದೆನೋವಿನಿಂದ ಬಳಲುತ್ತಿದ್ದ ತಂದೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆದರೆ, ಅಲ್ಲಿನ ಸಿಬ್ಬಂದಿ ತಿರುಗಿ ಸಹ ನೋಡದೇ, ಕೋವಿಡ್ – ನೆಗೆಟಿವ್ ಪ್ರಮಾಣ ಪತ್ರ ಬೇಕು ಎಂದರು. ನಂತರ ತಂದೆ ಕೊನೆಯುಸಿರೆಳೆದರು ಎಂದು ಅಮನ್ ಹೇಳಿದ್ದಾರೆ.

ಅಂದು ಸುಭಾಷ್ ನಗರ ಚಿತಾಗಾರಕ್ಕೆ ಮೃತದೇಹವನ್ನು ತಂದ ಅಮನ್, ಅಂತ್ಯಕ್ರಿಯೆಗಾಗಿ ಮಂಗಳವಾರದವರೆಗೆ ಕಾಯಬೇಕಾಯಿತು. ಚಿತಾಗಾರದಲ್ಲಿ ಬೇಡುವುದರಿಂದ ಪ್ರಯೋಜನವಿಲ್ಲ ಎಂಬುದನ್ನು ಅರಿತ ಅವರು, ತಂದೆಯ ಮೃತದೇಹ ರಕ್ಷಿಸಲು ರೆಫ್ರಿಜರೇಟರ್ ಒಂದನ್ನು ತರಿಸಿದ್ದರು.

ಚಿತಾಗಾರದಲ್ಲಿರುವ ಎಲ್ಲಾ 50 ಚಿತೆಗಳು ನಿರಂತರವಾಗಿ ಸುಡುತ್ತಿವೆ. ಹೊರಗಡೆ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಲು ಪರದಾಟವಿದೆ. ಈ ಹಿಂದೆ ಅಂತ್ಯಕ್ರಿಯೆ ನಡೆಸಿದವರು ಬಿಟ್ಟು ಹೋದ ಹೂವು ಇತ್ಯಾದಿಗಳಿಂದ ನೆಲ ಕೊಚ್ಚೆಯಾಗಿದೆ. ಪ್ಲಾಸ್ಟಿಕ್ ಚೀಲ, ಮಡಿಕೆ ಇತ್ಯಾದಿಗಳು ನೆಲದ ಮೇಲೆ ಹರಡಿವೆ. ಆದರೆ, ಸಂಬಂಧಿಗಳಿಗೆ ಇದ್ಯಾವುದರ ಚಿಂತೆ ಇಲ್ಲ. ಚಿತೆ ಹೊತ್ತಿಸಲು ಒಂದಿಷ್ಟು ಜಾಗ ಸಿಕ್ಕರೆ ಸಾಕು ಎಂಬ ಹತಾಶೆ ಇದೆ.

40 ವರ್ಷದ ಮನ್‌ಮೀತ್ ಸಿಂಗ್ ಅಧ್ಯಾಪಕರಾಗಿದ್ದು, ಅವರು ತಮ್ಮ ತಂದೆ ಗುರ್ಪಾಲ್ ಸಿಂಗ್ ಅವರನ್ನು ಕಳೆದುಕೊಂಡಿದ್ದಾರೆ. ಮೃತದೇಹ ಚಿತಾಗಾರಕ್ಕೆ ತಂದಾಗ 24 ಗಂಟೆಗೂ ಹೆಚ್ಚು ಕಾಲ ಕಾಯಬೇಕು ಎಂದು ತಿಳಿಸಲಾಗಿತ್ತು

ತಕ್ಷಣವೇ ಅವರು ಅಲ್ಲಿಗೆ ಆರು ಕಿಮೀ. ದೂರದ ಪಶ್ಚಿಮ ವಿಹಾರಕ್ಕೆ ತೆರಳಿದರು. ಅದೃಷ್ಟವಶಾತ್ ಅಲ್ಲಿ ಅಂತ್ಯಕ್ರಿಯೆಗೆ ಅವಕಾಶ ದೊರೆಯಿತು. ಈ ಬಗ್ಗೆ ಮಾತನಾಡಿರುವ ಮನ್‌ಮೀತ್, ¬ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಕ್ಸಿಜನ್ ಕೊಡಲು ನಿಮ್ಮಿಂದ ಆಗುತ್ತಿಲ್ಲ. ಕನಿಷ್ಠ ಅಂತ್ಯಕ್ರಿಯೆಗಾದರೂ ಸ್ವಲ್ಪ ಜಾಗ ಕಲ್ಪಿಸಿ. ಜನ ಈ ಲೋಕವನ್ನು ನೆಮ್ಮದಿಯಿಂದ ತೊರೆಯಲು ಅವಕಾಶ ಕೊಡಿ¬ ಎಂದಿದ್ದಾರೆ.

ನಿಯಮಗಳ ಪ್ರಕಾರ ಯಾರಾದರೂ ಕೋವಿಡ್‌ನಿಂದ ಮೃತಪಟ್ಟರೆ ಸರ್ಕಾರದಿಂದ ಶವ ಸಾಗಿಸಲು ವಾಹನದ ವ್ಯವಸ್ಥೆ ಮಾಡಬೇಕು. ಆದರೆ, ಆಸ್ಪತ್ರೆಗಳ ಮೇಲಿನ ಒತ್ತಡ ಎಷ್ಟಾಗಿದೆ ಎಂದರೆ, ಸಂಬಂಧಿಕರು ತಮ್ಮ ವಾಹನಗಳಲ್ಲೇ ಮೃತದೇಹ ತೆಗೆದುಕೊಂಡು ಬರುತ್ತಿದ್ದಾರೆ.

ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ನೂರು ಹೆಚ್ಚುವರಿ ಚೇಂಬರ್‌ಗಳನ್ನು ರೂಪಿಸಿದ್ದೇವೆ. ಹಗಲೂ – ರಾತ್ರಿ ಪರಿಶ್ರಮದಿಂದ ದೇಹ ಬಿದ್ದು ಹೋದಂತಾಗಿದೆ ಎಂದು ಪಾಲಿಕೆಯ ಚಿತಾಗಾರದಲ್ಲಿ ಕೆಲಸ ಮಾಡುವ ಅಜೀತ್ ಹೇಳಿದ್ದಾರೆ.

ಎಲ್ಲ ಸಂಕಷ್ಟಗಳಿಂದ ಪಾರಾಗಬಹುದು ಎಂದು ಹಣವುಳ್ಳವರು ಹಾಗೂ ಪ್ರಭಾವಿಗಳು ಭಾವಿಸಿದ್ದರು. ಆದರೆ, ಈ ಮಹಾಮಾರಿಯ ಕಾಲದಲ್ಲಿ ನಾವೆಲ್ಲರೂ ಒಂದೇ ಸಾಲಿಗೆ ಬಂದಿದ್ದೇವೆ. ಈ ಸಂದರ್ಭದಲ್ಲಿ ನಾವು ಸಂಕಷ್ಟದ ವಿರುದ್ಧ ಹೋರಾಡುತ್ತಿರುವ ಬಡಪಾಯಿ ಜನರ ಜೊತೆ ನಿಲ್ಲಬೇಕು ಹಾಗೂ ಸಹಾನುಭೂತಿ ತೋರಬೇಕು ಎಂದು ಮಾಜಿ ಐಎಎಸ್ ಅಧಿಕಾರಿ ಹಾಗೂ ನಾಗರಿಕ ಹಕ್ಕುಗಳ ಕಾರ್ಯಕರ್ತ ಹರ್ಷ ಮಂದರ್ ಹೇಳಿದ್ದಾರೆ.