ಬಾಲ್ಯ ವಿವಾಹಕ್ಕೆ ತಡೆ

ದಾವಣಗೆರೆ, ಏ.24- ಚಿತ್ರದುರ್ಗ ಜಿಲ್ಲೆ ಸಿರಿಗೆರೆ ಸಮೀಪ ಗ್ರಾಮದ ಯುವಕನೊಂದಿಗೆ ಅಪ್ರಾಪ್ತೆಯ ವಿವಾಹಕ್ಕೆ ಸಿದ್ಧತೆ ನಡೆಸಿದ್ದ ಬಗ್ಗೆ ದೊರೆತ ಮಾಹಿತಿ ಆಧರಿಸಿ ಬಾಲ್ಯ ವಿವಾಹವನ್ನು ತಡೆಯುವಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡ ಯಶಸ್ವಿಯಾಗಿದೆ. ಜಗಳೂರು ತಾಲ್ಲೂಕಿನ ಬಿಳಿಚೋಡು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪ್ರಾಪ್ತೆಯ ವಿವಾಹವನ್ನು ಚಿತ್ರದುರ್ಗ ಜಿಲ್ಲೆ ಸಿರಿಗೆರೆ ಸಮೀಪದ ಗ್ರಾಮವೊಂದರ 28 ವರ್ಷದ ಯುವಕನೊಂದಿಗೆ ನಾಳೆ ದಿನಾಂಕ 25ರಂದು ನಡೆಸಲು ಎಲ್ಲಾ ಸಿದ್ಧತೆ ನಡೆದಿತ್ತು.

ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರು ಬಂದ ಹಿನ್ನೆಲೆಯಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡದ ಸಂಯೋಜಕ ಟಿ.ಎಂ.ಕೊಟ್ರೇಶ್, ಮಕ್ಕಳ ಸಹಾಯವಾಣಿ ಕಾರ್ಯಕರ್ತರಾದ ಟಿ.ನಾಗರಾಜ, ಕ್ರೀಂ ಯೋಜನೆ ಕಾರ್ಯಕರ್ತ ಬಿ. ಶ್ರೀನಿವಾಸ, ಶಿಶು ಅಭಿವೃದ್ಧಿ ಯೋಜನೆ ಮಹಿಳಾ ಮೇಲ್ವಿಚಾರಕಿ ಎಚ್.ವಿ. ಶಾಂತಮ್ಮ, ಬಿಳಿಚೋಡು ಠಾಣೆ ಎಎಸ್‍ಐ ಎಂ.ಟಿ. ಸ್ವಾಮಿ ಅವರನ್ನು ಒಳಗೊಂಡ ತಂಡವು ಅಪ್ರಾಪ್ತೆಯ ಮನೆಗೆ ಹೋಗಿ ಬಾಲಕಿಯ ತಂದೆ, ತಾಯಿ, ಸಂಬಂಧಿಗಳನ್ನು ಭೇಟಿ ಮಾಡಿ, ಶಾಲಾ ದಾಖಲಾತಿ ಸಂಗ್ರಹಿಸಿ, ಪರಿಶೀಲಿಸಿದಾಗ ಬಾಲ ಕಿಯ ವಯಸ್ಸು 14 ವರ್ಷ 10 ತಿಂಗಳು ಎಂಬುದು ದೃಢಪಟ್ಟಿತು.

ಬಾಲ್ಯವಿವಾಹ ನಿಷೇಧ ಕಾಯ್ದೆ ಪ್ರಕಾರ ಬಾಲ್ಯವಿವಾಹ ಮಾಡಿದರೆ ಪಾಲಕರು, ಮದುವೆಯಲ್ಲಿ ಭಾಗಿಯಾದವರು, ಶಾಮಿಯಾನ ವ್ಯವಸ್ಥೆ ಮಾಡಿದವರು, ಫೋಟೋಗ್ರಾಫರ್, ಸಾಕ್ಷಿಯಾದ ಪುರೋಹಿತರಿಗೆ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ 2 ವರ್ಷಕ್ಕೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ 1 ಲಕ್ಷ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂಬುದಾಗಿ ತಂಡವು ಎಚ್ಚರಿಸಿ, ಕಾನೂನು ಅರಿವು ಮೂಡಿಸಿತು. ಆಗ ಬಾಲಕಿಯ ತಂದೆ ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಲು ಒಪ್ಪದಿದ್ದಾಗ ಪುನಃ ಕಾನೂನು ಶಿಕ್ಷೆಯ ತೀವ್ರತೆ ಬಗ್ಗೆ ಮನವರಿಕೆ ಮಾಡಿಕೊಟ್ಟು, ಒಪ್ಪಿಸಲಾಯಿತು. ಆ ನಂತರವಷ್ಟೇ ಮುಚ್ಚಳಿಕೆ ಪತ್ರಕ್ಕೆ ಸಹಿ ಪಡೆದು ನಡೆಯಲಿದ್ದ ಬಾಲ್ಯ ವಿವಾಹ ತಡೆಯಲಾಯಿತು.