ಕೊರೊನಾ ತಡೆಗಟ್ಟುವಲ್ಲಿ ಬಿಎಲ್‌ಒಗಳ ಸಹಕಾರ ಅತ್ಯಗತ್ಯ

ಕೊರೊನಾ ತಡೆಗಟ್ಟುವಲ್ಲಿ ಬಿಎಲ್‌ಒಗಳ ಸಹಕಾರ ಅತ್ಯಗತ್ಯ

ಹರಿಹರ ಬಿಎಲ್ಓಗಳ ಸಭೆಯಲ್ಲಿ ತಹಶೀಲ್ದಾರ್ ರಾಮಚಂದ್ರಪ್ಪ

ಹರಿಹರ, ಏ.24- ನಗರಸಭೆ ಸಭಾಂಗಣ ದಲ್ಲಿ ತಹಶೀಲ್ದಾರ್‌ ಕೆ. ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮಿ, ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ್, ಸೇರಿದಂತೆ, ಇತರೆ ಅಧಿಕಾರಗಳೊಂದಿಗೆ ಕೊರೊನಾ ರೋಗ ತಡೆಗಟ್ಟಲು ಬಿಎಲ್‌ಒರವರ ಮಹತ್ವದ ಸಭೆಯನ್ನು ಆಯೋಜಿಸಿ, ಅವರಿಗೆ ಮಾರ್ಗದರ್ಶನ ನೀಡಲಾಯಿತು.

ಈ ವೇಳೆ ಮಾತನಾಡಿದ ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ದಿನದಿಂದ ದಿನಕ್ಕೆ ಅಧಿಕ ಪ್ರಮಾಣದಲ್ಲಿ ಹರಡುತ್ತಿದ್ದು, ಅದನ್ನು ತಡೆಗಟ್ಟಲು ಬಿಎಲ್‌ಒ ಅವರ ಸಹಕಾರ ಬಹಳ ಅತ್ಯಗತ್ಯವಾಗಿದೆ. 

ನಗರದ ಪ್ರತಿಯೊಂದು ಮನೆ ಮನೆಗಳಿಗೆ ತೆರಳಿ ರೋಗದ ಬಗ್ಗೆ ಮನವರಿಕೆ ಮಾಡಿ ಅವರಿಗೆ ಲಸಿಕೆಯನ್ನು ಹಾಕಿಸುವ ಕೆಲಸವನ್ನು ಮುತುವರ್ಜಿಯಿಂದ ಮಾಡಬೇಕು ಎಂದರು.

ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮಿ ಮಾತನಾಡಿ ನಗರದಲ್ಲಿ ಕೊರೊನಾ ತಡೆಗ ಟ್ಟಲು ಪ್ರತಿಯೊಂದು ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. 

ನಗರದ ಎಲ್ಲಾ ಬಡಾವಣೆಯಲ್ಲಿ ರೋಗ ನಿರೋಧಕ ಔಷಧಿ ಸಿಂಪಡಣೆ ಮಾಡುವುದಕ್ಕೆ ನಗರಸಭೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ನಗರದಲ್ಲಿನ ಎಲ್ಲಾ ಬಡಾವಣೆಗೆ ನಗರಸಭೆ ಕಸದ ವಾಹನಗಳು ಹೋದ ಸಮಯದಲ್ಲಿ ಕೊರೊನಾ ರೋಗದ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಜನರಿಗೆ ತಿಳಿಸಲು ಮೈಕ್ ವ್ಯವಸ್ಥೆ ಮಾಡಲಾಗಿದೆ.

ಆರೋಗ್ಯ ಇಲಾಖೆಯ ಡಾ. ಚಂದ್ರ ಮೋಹನ್ ಮಾತನಾಡಿ, ನಮ್ಮ ಇಲಾಖೆಯ ಜೊತೆಗೆ ಕಳೆದ ಬಾರಿ ಕೊರೊನಾ ರೋಗವನ್ನು ಹೋಗಲಾಡಿಸಲು ಬಿಎಲ್ಓ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅವರ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತರ ಸಹಕಾರ ಬಹಳ ಹೆಚ್ಚಿನ ಪ್ರಮಾಣದಲ್ಲಿ ಇತ್ತು. ಕೆಲಸವನ್ನು ಬಹಳ ಪ್ರಾಮಾಣಿಕತೆಯಿಂದ ಮಾಡಿದ್ದರ ಪರಿಣಾಮ ವಾಗಿ ಕಳೆದ ಬಾರಿ ಕೊರೊನಾ ರೋಗ ತಡೆಗಟ್ಟಲು ಸಾಧ್ಯವಾಯಿತು ಎಂದರು.

ಈ ಸಂದರ್ಭದಲ್ಲಿ ಬಿಇಒ ಬಸವರಾಜಪ್ಪ, ಸಿಡಿಪಿಒ ನಿರ್ಮಲ ಇನ್ನಿತರರು ಹಾಜರಿದ್ದರು.