ಶಿಕ್ಷಣ ಶಿಲ್ಪಿ ಎಂ‌.ಎಸ್‌.ಶಿವಣ್ಣ ಭೌತಿಕವಾಗಿ ಇನ್ನಿಲ್ಲವಾಗಿ ವರ್ಷ

ಶಿಕ್ಷಣ ಶಿಲ್ಪಿ ಎಂ‌.ಎಸ್‌.ಶಿವಣ್ಣ ಭೌತಿಕವಾಗಿ ಇನ್ನಿಲ್ಲವಾಗಿ ವರ್ಷ

ಹಲವಾರು ವರ್ಷಗಳು ನಿರಂತರವಾಗಿ ಮಮತೆಯ ನೆರಳು ಕೊಟ್ಟ, ಅಕ್ಕರೆಯ ಆಶ್ರಯ ಕೊಟ್ಟ, ಅವಿರತ ವಿದ್ಯಾದಾನ ಕೊಟ್ಟ ಹೆಮ್ಮರ ಇಂದಿಗೆ ಧರೆಗುರುಳಿ ಒಂದು ವರ್ಷವಾಯಿತು… ನಮ್ಮೆಲ್ಲರ ಪ್ರೀತಿಯ “ಹೆಡ್ಮಾಸ್ಟರ್” ಅವರಿಲ್ಲದಿರುವ ಸತ್ಯ ಎಷ್ಟೇ ಕಹಿಯಾದರೂ ಅವರು ಹಚ್ಚಿರುವ ಜ್ಞಾನ ಜ್ಯೋತಿ ಅನಂತವಾಗಿರುತ್ತದೆ ಎನ್ನುವ ಸತ್ಯ ಅಷ್ಟೇ ಸಿಹಿ.. ಮಾತುಗಳಲ್ಲಿ ನಮ್ಮ ಹೆಡ್ಮಾಸ್ಟರ್ ಅಗಲಿಕೆಯ ದುಃಖ ವ್ಯಕ್ತಪಡಿಸಲು ಅಸಾಧ್ಯವಾದರೂ, ತಾನುರಿದು ತನ್ನ ಜ್ಞಾನ ಜ್ಯೋತಿಯಿಂದ ಅದೆಷ್ಟೋ ಜ್ಞಾನದೀಪ ಹಚ್ಚಿದ ದಿವ್ಯಾತ್ಮಕ್ಕೆ ನಮ್ಮ ಕೋಟಿ-ಕೋಟಿ ನಮನಗಳು.

ಸಿದ್ದಗಂಗಾ ಶಿವಣ್ಣ ಎಂದೇ ಹೆಸರಾಗಿದ್ದ ಎಂ‌.ಎಸ್.ಶಿವಣ್ಣ ಮೂಲಭೂತವಾಗಿ ವೃತ್ತಿಯಿಂದ ಒಳ್ಳೆಯ ಶಿಕ್ಷಕ… ಶಿಕ್ಷಕನ ಜೊತೆಗೆ ಅವರೊಳಗೊಬ್ಬ ಕಲಾವಿದನಿದ್ದ, ಪತ್ರಕರ್ತನಿದ್ದ, ನಾಡು – ನುಡಿಗೆ ವ್ಯತ್ಯಯ ಬಂದಾಗ,  ತೀವ್ರವಾಗಿ ಪ್ರತಿಭಟಿಸಿ ನಿಲ್ಲುವ ಹೋರಾಟಗಾರನಿದ್ದ. ಎಲ್ಲಕ್ಕೂ ಮಿಗಿಲಾಗಿ  ದಮನಕ್ಕೀಡಾದವರ ನೋವಿಗೆ ಮಿಡಿದು ಕಂಬನಿ ಒರೆಸಿ ಸಾಂತ್ವನ ಹೇಳುವ, ಕೈ ಹಿಡಿದು ಮೇಲೆತ್ತಿ ಆಸರೆಯಾಗಿ ನಿಲ್ಲುವ ಮಾತೃ ಹೃದಯದ ಮಮತಾಮಯಿಯಿದ್ದ.

ಐವತ್ತು ವರ್ಷಗಳ ಹಿಂದೆ ಹೊಟ್ಟೆ ಪಾಡಿಗೆ ಕೆಲಸ ಹುಡುಕಿಕೊಂಡು ದಾವಣಗೆರೆಗೆ ದೂರದ ಬೆಂಗಳೂರಿನ ಮಾಗಡಿಯಿಂದ ಬಂದ ವಿದ್ಯಾವಂತ ಯುವಕ. ಶಿವಣ್ಣ ಮುಂದೊಂದು ದಿನ, ತನ್ನ ಸೇವೆ ಮೆಚ್ಚಿ ನಗರಾಡಳಿತ ತಾನಿದ್ದ ರಸ್ತೆಗೆ ತನ್ನ ಹೆಸರಿನ ನಾಮಕರಣವನ್ನೇ ಮಾಡುವ ಮೂಲಕ ಸ್ಮರಣೆ ಮಾಡುವ ಮಟ್ಟಿಗೆ ತಾನು ಬೆಳೆಯಬಹುದೆಂಬ ಕಲ್ಪನೆ ಇರಿಸಿ ಕೊಂಡಿರಲಾರರೆನಿಸಿದರೂ, ಸಿದ್ದಗಂಗೆಯ `ನಡೆದಾಡುವ ದೇವರು’ ಡಾ.ಶಿವಕುಮಾರ ಸ್ವಾಮಿಗಳ ಕೃಪಾಶೀರ್ವಾದದಿಂದ ಬೆಳೆದು, ಅವರ ಆಣತಿಯನ್ನು ತಲೆಯ ಮೇಲೆ ಹೊತ್ತು ಪಾಲಿಸುತ್ತಿದ್ದ ಶಿವಣ್ಣ ತಾನೂ ಅಂತಹುದೇನಾದರೂ ಸಾಧನೆ ಮಾಡಿಯೇ ತೀರಬೇಕೆಂಬ ಸಂಕಲ್ಪಧಾರಿ ಆಗಿದ್ದುದರಿಂದಲೇ ಮುಂದಿನ ಹಾದಿ ನಿಚ್ಚಳವಾಯಿತೆನ್ನಬಹುದು.

ಸಿದ್ದಗಂಗೆಯ ಶ್ರೀಗಳನ್ನು ನೆನೆಯುತ್ತಾ ದಾವಣಗೆರೆಯ ರೈಲು ನಿಲ್ದಾಣದಲ್ಲಿಳಿದ ಶಿವಣ್ಣ, ಕೆಲಸಕ್ಕಾಗಿ ಬೀದಿ ಬೀದಿ ತಿರುಗಿದರು. ಕೈಲಿದ್ದ ಪುಡಿಗಾಸೂ ಖರ್ಚಾದ ಮೇಲೆ ಹೊಟ್ಟೆ ಹಸಿದಾಗಲೆಲ್ಲಾ ರೈಲ್ವೆ ಸ್ಟೇಷನ್‌ನ ನಲ್ಲಿಯಲ್ಲಿ ಹೊಟ್ಟೆ ಭರ್ತಿ ನೀರು ಕುಡಿಯುವುದು, ರಾತ್ರಿ ಪ್ಲಾಟ್‌ಫಾರಂನಲ್ಲಿ ಮಲಗೋದು…..ಹೀಗೆ ದಿನವೆರಡು ಕಳೆದವು. ಹತಾಶನಾಗಿ
ಬೀದಿ ತಿರುಗುತ್ತಿದ್ದ ಶಿವಣ್ಣರಿಗೆ
ಮನೆಯೊಂದರ ಯಜಮಾನರು ವಿದ್ಯಾಭ್ಯಾಸದಲ್ಲಿ ಹಿಂದಾದ ತಮ್ಮ ಮಕ್ಕಳಿಗೆ ಗದರಿ ಬುದ್ದಿ ಹೇಳುತ್ತಿದ್ದುದು ಕೇಳಿ, ಅನುಮತಿಯಿತ್ತರೆ ತಾವು ಆ ಮಕ್ಕಳಿಗೆ ಮನೆ ಪಾಠ ಹೇಳಿ ಮುಂದಕ್ಕೆ ತರುವುದಾಗಿ ಮಾಡಿದ ಮನವಿ ಫಲ ಕೊಟ್ಟಿತ್ತು. ಅಂದು ಕೈಲಿ ಸೀಮೆಸುಣ್ಣ ಹಿಡಿದ ಶಿವಣ್ಣ ಹಿಂದಿರುಗಿ ನೋಡಲಿಲ್ಲ.

ಮನೆಪಾಠದಿಂದ ಕೋಚಿಂಗ್ ಕ್ಲಾಸ್ ಆಯ್ತು. ಮುಂದೆ ಜಯದೇವ ವೃತ್ತದ ಬಳಿಯ ಬಾಡಿಗೆ ಕಟ್ಟಡದಲ್ಲಿ ಶಾಲೆಯೂ ಶುರುವಾಯಿತು. ಶಾಲೆಗೆ ಶಿಕ್ಷಕಿಯಾಗಿ ಬಂದ ಜಸ್ಟಿನ್‌ ಡಿ’ಸೌಜ ಮುಂದಿನ ದಿನಗಳಲ್ಲಿ ಶಿವಣ್ಣನವರಿಗೆ ಜೊತೆ ಜೊತೆಯಾಗಿ ದುಡಿದು ಶಾಲೆಯನ್ನೂ ಬೆಳೆಸಿದರು. ಶಿವಣ್ಣನವರ ಬಾಳ ಸಂಗಾತಿಯಾಗಿ ಬದುಕನ್ನೂ ರೂಪಿಸಿದರು.

ಶಾಲೆಯ ಉಳಿವಿಗಾಗಿ ಶಿವಣ್ಣ ದಂಪತಿ ನಡೆಸಿದ ಹೋರಾಟವೇ ಒಂದು ಸುದೀರ್ಘ ಯಾನ. ಆನಂತರದ ಬಹು ಬೆಳವಣಿಗೆಗಳ ನಡುವೆ ಸಿದ್ದಗಂಗಾ ಈಗಿರುವ ಡಾಂಗೆ ಪಾರ್ಕ್ ಹಿಂಬದಿಯ ವಿಶಾಲವಾದ ಪ್ರದೇಶಕ್ಕೆ ಸ್ಥಳಾಂತರಗೊಂಡಿತು. ಶಿವಣ್ಣ ದಂಪತಿ ಮಕ್ಕಳ ದಶಕಗಳ ಪರಿಶ್ರಮದ ಫಲವಾಗಿ ಮಧ್ಯ ಕರ್ನಾಟಕವೇ ಮೆಚ್ಚುವಂತಹ ಅಭೂತಪೂರ್ವ ವಿದ್ಯಾಸಂಸ್ಥೆಯಾಗಿ ತಲೆ ಎತ್ತಿ ನಿಂತಿತು.

ಸಮಾಜದಲ್ಲಿ ಅಮಾಯಕರ ಮೇಲೆ ಬಲಾಢ್ಯರು ನಡೆಸುತ್ತಿದ್ದ ಅನ್ಯಾಯ – ಅಕ್ರಮಗಳನ್ನು ಕಂಡು ರೋಸಿ ಹೋಗಿದ್ದ ಶಿವಣ್ಣನವರು ಎಂಬತ್ತರ ದಶಕದಲ್ಲಿ `ಕರ್ನಾಟಕ ನಾಗರಿಕ ದೌರ್ಜನ್ಯ ವಿರೋಧಿ ಸಮಿತಿ’ ರಚಿಸಿ, ಅನ್ಯಾಯಕಾರರ ವಿರುದ್ಧ ಕಾನೂನು ಸಮರ ಮತ್ತು ಬೀದಿಗಿಳಿಯುವ ಮೂಲಕ ಹೋರಾಟ ಆರಂಭಿಸಿದರು. ದೌರ್ಜನ್ಯಕ್ಕೀಡಾದವರಿಗೆ ತಮ್ಮ ಮನೆಯಲ್ಲಿಯೇ ಅನ್ನಾಸರೆಯಿತ್ತು ರಕ್ಷಣೆ ನೀಡಿದರು. ಇದಕ್ಕನುಕೂಲವಾಗುವಂತೆ ಪತ್ರಿಕೆಗಳನ್ನೂ ಆರಂಭಿಸಿದರು. ಸ್ವತಃ ರಂಗ ಕಲಾವಿದರಾಗಿದ್ದ ಶಿವಣ್ಣ, ಕಲಾ ಪೋಷಕರಾಗಿ ತಮ್ಮ ಶಾಲೆಯ ಆವರಣವನ್ನೇ ಅನುವು ಮಾಡಿಕೊಟ್ಟರು.

ನಾಡು – ನುಡಿಯ ಅಪ್ರತಿಮ ಅಭಿಮಾನಿಯಾಗಿದ್ದ ಶಿವಣ್ಣ, ಭಾಷಾ ಹೋರಾಟದಲ್ಲಿ ವಹಿಸಿದ ಪಾತ್ರ ಅಮೂಲ್ಯ. ತನು, ಮನ, ಧನಗಳ ಮೂಲಕ ನೆರವಿಗೆ ಧಾವಿಸುತ್ತಿದ್ದ ಶಿವಣ್ಣನವರ ಕೈಲಿ ಆಸ್ತಿಯ ಮೂಲ ಪ್ರಮಾಣ ಪತ್ರ ಹಾಗೂ ಜೇಬಲ್ಲಿ ನೋಟಿನ ಕಿರು ಪೆಂಡಿ ಸದಾ ಸಿದ್ದವಾಗಿರುತ್ತಿತ್ತು. ಕೋರ್ಟ್‌ನಲ್ಲಿ ಕನ್ನಡ ಪರ ಹೋರಾಟಗಾರರಿಗೆ ಜಾಮೀನು ನೀಡಲು ಆಸ್ತಿ ಪತ್ರ ಹಾಗೂ ಅವರುಗಳ ಊಟೋಪಚಾರಗಳಿಗೆಂದು ಪುಡಿಕೆ ಹಣ!.

ಶಿವಣ್ಣ ಸ್ವಲ್ಪ ಮುಂಗೋಪಿ, ಮೂಡಿ ಎಂದೆಲ್ಲಾ ಹೇಳುವವರಿದ್ದಾರೆ. ಅದಕ್ಕೂ ಮಿಗಿಲಾಗಿ ಅವರೊಬ್ಬ ಸ್ನೇಹಮಯಿ, ಮನೆಗೆ ಬಂದವರಿಗೆ ಆತಿಥ್ಯ ನೀಡುವುದನ್ನು ವ್ರತದಂತೆ ಪಾಲಿಸುತ್ತಿದ್ದ (ಅದು ಅವರಿಗೆ ಸಿದ್ದಗಂಗಾ ಮಠದಲ್ಲಿಯೇ ಮನಗಾಣಿಸಲಾಗಿತ್ತು !) ಶಿವಣ್ಣ ನವರ ಮನೆಯಲ್ಲಿ ಊಟೋಪಚಾರ ಪಡೆಯದವರು ವಿರಳಾತಿ ವಿರಳ. ಸಮಯ ಯಾವುದೇ ಇರಲಿ, ನಾ ಹೋದಾಗಲೆಲ್ಲಾ ಪರಮಾಪ್ತತೆಯಿಂದ ಸ್ವಾಗತಿಸುತ್ತಿದ್ದ ಶಿವಣ್ಣ `ಮೇಡಮ್ಮಾ, ಪ್ರಸಾದ್ ಬಂದಿದ್ದಾರೆ…’ ಎಂದಷ್ಟೇ ಹೇಳಿ ನನ್ನೊಂದಿಗೆ ನಿರರ್ಗಳ ಮಾತುಕತೆ ಆರಂಭಿಸುತ್ತಿದ್ದಂತೆ, ಮಾಡುತ್ತಿದ್ದ ಕೆಲಸವನ್ನ ಅತ್ತ ತಳ್ಳಿ, ದೊಡ್ದದಾದ ಲೋಟಗಳಲ್ಲಿ ಕಾಫಿಯೊಂದಿಗೆ ಮಂದಸ್ಮಿತ ಡಿ’ಸೌಜ ಮೇಡಂ ಬರುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ‌. ಪ್ರತಿ ವರ್ಷ ಶಾಲೆಯಲ್ಲಿ ನಡೆಸುತ್ತಿದ್ದ ಎಡೆಯೂರು ಸಿದ್ಧಲಿಂಗೇಶ್ವರ ಜಾತ್ರಾ ಪ್ರಯುಕ್ತ ಹಾಕುತ್ತಿದ್ದ ರುಚಿಕರ ಹೋಳಿಗೆ ಊಟ (ಅದನ್ನವರು ವಿನಮ್ರರಾಗಿ ಸಿದ್ದಲಿಂಗನ ಪ್ರಸಾದ ಎನ್ನುತ್ತಿದ್ದರು) ದ ಸವಿ ಸವಿಯದವರಾರು? 

ಹೀಗೆ ನಾಲ್ಕೂವರೆ ದಶಕಕ್ಕೂ ಮಿಕ್ಕಿ ನಮ್ಮಗಳಿಗೆ ಮಾದರಿಯಾಗಿದ್ದ, ಅಭಿಮಾನಿಗಳೆಲ್ಲರಿಗೂ `ಮೇಸ್ಟ್ರು’ ಆಗಿದ್ದ ಶಿವಣ್ಣನವರು ನಮ್ಮಗಳ ಮನದಲ್ಲಿ ಸದಾ ಅಜರಾಮರರಾಗಿರುತ್ತಾರೆ. ಅವರು ಹಾಕಿ ಕೊಟ್ಟ ಹಾದಿಯಲ್ಲೇ ಮುಂದುವರೆಯುತ್ತಿರುವ ಜಸ್ಟಿನ್ ಡಿ’ಸೌಜ ಮೇಡಂ ಮತ್ತು ಕುಟುಂಬ ವರ್ಗದವರು ಶಿವಣ್ಣನವರ ಪರಂಪರೆಯನ್ನು ನಿರಾತಂಕವಾಗಿ ಮುಂದುವರೆಸುವ ಭರವಸೆ ಅಭಿಮಾನಿಗಳದು.


ಹಳೇಬೀಡು ರಾಮ ಪ್ರಸಾದ್
sagangaraju@gmail.com