ಜೇಡರ ದಾಸಿಮಯ್ಯ ಮೊಟ್ಟಮೊದಲ ಆದ್ಯ ವಚನಕಾರ

ಜೇಡರ ದಾಸಿಮಯ್ಯ ಮೊಟ್ಟಮೊದಲ ಆದ್ಯ ವಚನಕಾರ

ದೇವರ ದಾಸಿಮಯ್ಯ ಸರಿ ಸುಮಾರು 10 ನೇ ಶತಮಾನದವರು. ಸುರಪುರ ಜಿಲ್ಲೆ ಮುದನೂರು ಎಂಬ ಹಳ್ಳಿಯಲ್ಲಿ ಜನನ. ಮುದನೂರು ಹಲವಾರು ದೇವಾಲಯಗಳಿಂದ ಕೂಡಿದ್ದು, ಅಲ್ಲಿನ ರಾಮನಾಥ ದೇವಸ್ಥಾನ ಸ್ವಾಮಿಯ ಆರಾಧಕರು.  ಮಹರ್ಷಿಯು ಶಿವನ ಅಪಾರ ಭಕ್ತರಾಗಿದ್ದ ‘ರಾಮನಾಥ’ ಇವರ ಅಂಕಿತ ನಾಮವಾಗಿತ್ತು.

ದೇವರ ದಾಸಿಮಯ್ಯ ತಮ್ಮ ಯೌವ್ವನಾವಸ್ಥೆಯಲ್ಲಿ ಹೆತ್ತವರ ಇಚ್ಚೆಯಂತೆ ಶಿವಪುರದ ದುಗ್ಗಳೆಯನ್ನು ವರಿಸುತ್ತಾರೆ. ಆಕೆ ಮಹಾನ್ ಸಾಧ್ವಿಮಣಿ. ದಂಪತಿ ಇಬ್ಬರೂ ಸಜ್ಜನರು, ದೈವ ಭಕ್ತರು, ಧಾರಾಳತನವುಳ್ಳವರೂ, ಯಾರೇ ಕಷ್ಟದಲ್ಲಿದ್ದರೂ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ದಾಸಿಮಯ್ಯರಿಗೆ ಬದುಕಿನಲ್ಲಿ ಏನೋ ಶೂನ್ಯತೆ ಕಾಡುತ್ತಿತ್ತು. ಹೀಗೊಂದು ದಿನ ಆಲೋಚಿಸುತ್ತಿರುವಾಗ ದೇವರನ್ನು ಒಲಿಸಿಕೊಳ್ಳಲು ಸನ್ಯಾಸತ್ವವೇ ಸರಿಯಾದ ಮಾರ್ಗವೆಂದು ಅರಿತು, ಅದನ್ನು ಸಿದ್ದಿಸಿಕೊಳ್ಳುವ ಸಲುವಾಗಿ ದಟ್ಟ ಕಾಡಿನೆಡೆಗೆ ಹೊರಟು ಹೋಗುತ್ತಾರೆ. ಹಲವಾರು ವರ್ಷ ಸುದೀರ್ಘ ತಪಸ್ಸನ್ನಾಚರಿಸಿ, ಕಡೆಗೂ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ತಪಸ್ಸಿಗೆ ಮೆಚ್ಚಿದ ಈಶ್ವರ ಪ್ರತ್ಯಕ್ಷನಾಗುತ್ತಾನೆ. ಸದಾಶಿವನು ದಾಸಿಮಯ್ಯರನ್ನು ಕುರಿತು ಹೀಗೆ ಸಂಬೋಧಿಸುತ್ತಾನೆ. ‘ದಾಸಿಮಯ್ಯ’ ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ… ನಿನ್ನ ಕೋರಿಕೆಯನ್ನು ತಿಳಿಸು…  ಮಹದಾನಂದದಿಂದ ಋಷಿವರ್ಯರು ಹೀಗೆ ತಮ್ಮ ಕೋರಿಕೆ ಸಲ್ಲಿಸುತ್ತಾರೆ. ‘ಭಗವಾನ್’ ನಿನ್ನ ದರ್ಶನದಿಂದ ನನ್ನ ಜನ್ಮ ಇಂದಿಗೆ ಸಾರ್ಥಕವಾಯಿತು.. ಕೃಪೆ ತೋರಿ ನನಗೆ ಮೋಕ್ಷವನ್ನು ದಯಪಾಲಿಸು ಮಹಾದೇವ… ಶಿವನು ‘ದಾಸಿಮಯ್ಯ’ ಋಷಿಯಾಗಿ ಮೋಕ್ಷವನ್ನು ಪಡೆಯುವುದೇ ಅಲ್ಲಾ .. . ನೀನು ಮಾಡಬೇಕಾದ ಮಹತ್ಕಾರ್ಯ ಬಹಳಷ್ಟಿದೆ! ದೇವ-ದೇವತೆಯರು ಹಾಗೂ ಮಾನವರಿಗೆ, ತಮ್ಮ ಮಾನ-ಶರೀರ ಸಂರಕ್ಷಣೆಯನ್ನು ಕಾಪಾಡಲು ವಸ್ತ್ರವನ್ನು ತಯಾರಿಸುವ ಕಾರ್ಯ ನಿನ್ನಿಂದ ಆಗಬೇಕಿದೆ. ಪರಮಾತ್ಮನನ್ನು  ಕಾಣಲು ಸನ್ಯಾಸಿಯಾಗಿ ತಪಸ್ಸನ್ನಾಚರಿಸುವ ಅಗತ್ಯವಿಲ್ಲ . . . ಸಂಸಾರಿಯಾಗಿದ್ದೂ ಅಧ್ಯಾತ್ಮಿಕತೆಯನ್ನು ಆಚರಿಸುವವನು ಅದಕ್ಕಿಂತ ಶ್ರೇಷ್ಠನು. ಜನರು ತಮ್ಮ ಕಾಯಕದಲ್ಲಿ ದೇವರನ್ನು ಕಾಣಬೇಕು. ಶ್ರದ್ಧಾ-ಭಕ್ತಿಯಿಂದ ತಮ್ಮ ದೈನಂದಿನ ಕಾರ್ಯಾಚರಣೆಯಲ್ಲಿ ತೊಡಗಬೇಕು. ಅದೇ ನಿಜವಾದ ಮನುಕುಲದ ಉದ್ದೇಶ. ಈ ಸಂದೇಶವನ್ನು ಮಾನವರಿಗೆ ಅರ್ಥವಾಗುವ ರೀತಿಯಲ್ಲಿ ಮನದಟ್ಟು ಮಾಡು. ಇದೇ ನಿನ್ನ ಜನ್ಮದುದ್ದೇಶ. ಶಿವನ ಕೃಪೆಗೆ ಪಾತ್ರನಾದ ಅಸಿತ ದೇವಲನು ರಾಮನಾಥನ ಇಚ್ಚೆಯಂತೆ ತನ್ನ ಹುಟ್ಟೂರಿಗೆ ಹಿಂದಿರುಗುತ್ತಾನೆ.

ಭಗವಂತನ ಒಂದು ವರಪ್ರಸಾದವೆಂದು ತಿಳಿದು ದಾಸಿಮಯ್ಯ ವಸ್ತ್ರ ನಿರ್ಮಿಸುವ ಕಲೆಯನ್ನು ಪಾರಂಗತಗೊಳಿಸಿಕೊಂಡು ಲೋಕಕ್ಕೆ ಬಟ್ಟೆಯನ್ನು ಅರ್ಪಿಸಿದರು. ದಂಪತಿ ಇಬ್ಬರೂ ಸೀರೆ ನೇಯ್ಗೆ ಉದ್ಯೋಗದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ನೇಯ್ಗೆಯನ್ನು ದೇವರ ಕಾರ್ಯದಂತೆ ಆಚರಿಸುತ್ತಾ ಇತರರಿಗೆ ಮಾದರಿಯಾಗಿ ಇನ್ನೂ ಆನೇಕ ಮಂದಿಗೆ ಉದ್ಯೋಗ ಕಲ್ಪಿಸಿ ಜೀವನೋಪಾಯಕ್ಕೆ ದಾರಿ ತೋರಿಸುತ್ತಾರೆ. ಹೀಗಾಗಿ ಇವರು `ಜೇಡರ ದಾಸಿಮಯ್ಯ’ ರೆಂದೂ ಪ್ರಸಿದ್ಧರಾದರು. ದಾಸಿಮಯ್ಯನ ಚಿತ್ರಗಳನ್ನು ಗಮನಿಸಿ, ಜನಿವಾರ ತೊಟ್ಟು ಮುನಿವರ್ಯರ ಎಡಗೈಯಲ್ಲಿ ಕಮಂಡಲ ಹಾಗೂ ಬಲಗೈಯಲ್ಲಿ ಬಟ್ಟೆ ಕಾಣಬಹುದು. ಪರಶಿವನ ಹಣೆಗಣ್ಣಿನಿಂದ ಮಹರ್ಷಿ ಅವತರಿಸಿದರೆಂಬ ಪ್ರತೀತಿಯೂ ಇದ್ದ ಕಾರಣ ‘ದೇವಾಂಗ’   (ದೇವರ ಒಂದು ಅಂಗ) ಎಂದು ಕರೆಯಲ್ಪಡುತ್ತಾರೆ. ಇಂದಿನ ದೇವಾಂಗ ಜನಾಂಗದ ಕುಲದೇವರು ದೇವರ ದಾಸಿಮಯ್ಯ, ಚೌಡೇಶ್ವರಿ ತಾಯಿ ಈ ಸಮೂಹದ ಕುಲದೇವತೆ, ಈ ಮಹಾತ್ಮರು ಗಾಯತ್ರಿ ಮಂತ್ರದ ಉಪಾಸಕರಾಗಿ ಅದರ ಮಹಿಮೆಯನ್ನು ಸಾರಿದರು. ಪ್ರತಿಯೊಬ್ಬ ಮಾನವನು ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ದಾಸಿಮಯ್ಯ ಪ್ರಪಂಚಕ್ಕೆ ತಿಳಿಸಿ ಹೇಳಿದರು. ಇನ್ನೂ ದೇವಾಂಗ ದಾಸಿಮಯ್ಯರ ಕೃತಿ ಪರಿಚಯಕ್ಕೆ ಬಂದರೆ ರಾಮನಾಥ ಎಂಬ ನಾಮಾಂಕಿತದಿಂದ ಅನೇಕ ವಚನಗಳನ್ನು ರಚಿಸಿದ್ದಾರೆ.

ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಶರಣರಿಗಿಂತಲೂ ಮುಂಚಿತವಾಗಿದ್ದಂತಹ ಮೊಟ್ಟಮೊದಲ ವಚನಕಾರರು. ದಾಸಿಮಯ್ಯನವರ ವಚನಗಳು ಅರ್ಥೈಸಿಕೊಳ್ಳಲು ಬಹಳ ಸರಳವಾಗಿದ್ದು, ಸಮಾಜಕ್ಕೆ ವಿಶೇಷವಾದ ಧಾರ್ಮಿಕ ಪ್ರಜ್ಞೆಯ ಸ್ಫೂರ್ತಿಯ ಚಿಲುಮೆಯಾಗಿವೆ. ಆದರೆ ವಿಷಾದದ ಸಂಗತಿಯೆಂದರೆ ಇವರ ಬಗ್ಗೆ ಹೆಚ್ಚಿಗೆ ಪ್ರಚಾರಗಳಾಗಲಿಲ್ಲ, ತಡವಾಗಿಯಾದರೂ ಈಗೀಗ ಕೆಲವರು ದೇವಲರ ವಚನಗಳನ್ನು ಹೊರತರುತ್ತಿದ್ದಾರೆ.

ಇತಿಹಾಸ ಪುರಾಣದಲ್ಲಿ ಇವರ ಬಗ್ಗೆ ತಿಳಿಯಲು ಪ್ರತಿಯೊಬ್ಬರೂ ಶ್ರಮಿಸಬೇಕು. ದೇವರ ದಾಸಿಮಯ್ಯನವರು ಶತ-ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಪ್ರಸಿದ್ದ ಶರಣರಿಗಿಂತಲೂ ಮೊದಲು ಬಂದಂತಹ ಮೊಟ್ಟಮೊದಲ ಆದ್ಯ ವಚನಕಾರರಾಗಿದ್ದಾರೆ.

ಸೀರೆ ನೇಯುತ್ತಾ, ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಂಸಾರ ಸಾಗಿಸುತ್ತಾ ಭಕ್ತಿ ಮಾರ್ಗವೇ ಉನ್ನತ ಎಂದು ಸಾರಿದರು.

ದೇವರ ದಾಸಿಮಯ್ಯ ಅವರ ವಚನಗಳು ತುಂಬಾ ಸರಳವಾಗಿ ಮನಸೂರೆಗೊಳ್ಳುತ್ತವೆ. ಕನ್ನಡ ನಾಡಿನ ಶಿವಶರಣರಲ್ಲಿ ದೇವರ ದಾಸಿಮಯ್ಯನವರು 11ನೇ ಶತಮಾನದಲ್ಲಿ ಆಗಿ ಹೋದ ಶರಣರು ಮಹಾ ಶಿವಶರಣರಲ್ಲಿ ಇವರೊಬ್ಬರು ಮತ್ತು ಶರಣ ಸಂಪ್ರದಾಯದಲ್ಲಿ ಮೊದಲಿಗರು. ದೇವರ ದಾಸಿಮಯ್ಯರು ಒಬ್ಬ ಐತಿಹಾಸಿಕ ಪುರುಷನೆಂಬುದಕ್ಕೆ ಶಿಲಾ ಶಾಸನಗಳು ಬಲವಾದ ಪ್ರಮಾಣಗಳಾಗಿವೆ.

ಸಾಕ್ಷಾತ್ ಪರಶಿವನಿಂದ ತಪ ನಿಧಿಯನ್ನು ಪಡೆದ ಶರಣ ಜ್ಞಾನಿ, ವಚನ ಸಾಹಿತ್ಯ ರಚನೆಯಲ್ಲಿಯೂ ಪ್ರಬಲರಾಗಿದ್ದರು. ಅಲಂಕಾರಿಕವಾದ ಸ್ವಲ್ಪ ಶಬ್ಧಗಳ ನಿಧಿಯಲ್ಲಿ ದಿವ್ಯವಾದ, ವಿಶಾಲವಾದ ಅರ್ಥ ಯಾರು ತೆಗೆದುಹಾಕದಂತಹ ಅಭಿಪ್ರಾಯ ಇಂತಹ ಅಮೃತ ಬಿಂದು ಮನೋಜ್ಞವಾಣಿ ಅವರ ವಚನಗಳಾಗಿವೆ.

`ಕಡೇಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾನ್ಬುದೆ?
ಕಡೆಗೀಲು ಬಂಡಿಗಾಧಾರ, ಈ ಕಡುದರ್ಪವೇರಿದ
ಒಡಲೆಂಬ ಬಂಡಿಗೆ ಮೃಢ ಭಕ್ತರ
ನುಡಿಗಣವೆ ಕಡೆಗೀಲು ಕಾಣಾ ರಾಮನಾಥ’.

`ಅನುಭವವಿಲ್ಲದ ಭಕ್ತಿ ತಲೆಕೆಳಗಾದುದಯ್ಯ ಅನುಭವ
ಭಕ್ತಗಾಧಾರ: ಅನುಭವ ಭಕ್ತಿಗೆ ನೆಲವನೆ, ಅನುಭವ
ಉಳ್ಳವರ ಕಂಡು ತುರ್ಯ ಸಂಭಾಷಣೆಯ
ಬೆಸಗೊಳ್ಳದಿದ್ದಡೆ ನರಕದಲ್ಲಿಕ್ಕಯ್ಯ ! ರಾಮನಾಥ’.

ಈ ರೀತಿಯ ನೂರಾರು ವಚನಗಳನ್ನು ವಚನ ಕೋಶದಲ್ಲಿ ಕಾಣುತ್ತೇವೆ. ದೇವರ ದಾಸಿಮಯ್ಯನವರು ತಮ್ಮ ಅಧ್ಯಾತ್ಮ ಸಿರಿವಂತಿಕೆಯಿಂದ ಮೆರೆದಿದ್ದಾರೆ.


ಎಸ್.ಮರಳಸಿದ್ದೇಶ್ವರ ಶಿವಪುರ 
ಹೊಳಲ್ಕೆರೆ.
marulasiddeshwarashivapura72@gmail.com