ಕೊನೆಯ ಭಾಗದ ರೈತರಿಂದ ಪವಿತ್ರ ರಾಮಯ್ಯ ಅವರಿಗೆ ಸನ್ಮಾನ

ಕೊನೆಯ ಭಾಗದ ರೈತರಿಂದ ಪವಿತ್ರ ರಾಮಯ್ಯ ಅವರಿಗೆ ಸನ್ಮಾನ

ದಾವಣಗೆರೆ, ಏ.15-  ಭದ್ರಾ ಅಚ್ಚುಕಟ್ಟಿನ  ಕೊನೆ ಭಾಗಗಳಾದ ತ್ಯಾವಣಗಿ ಹಾಗೂ ಕುಕ್ಕುವಾಡ ಗ್ರಾಮಗಳಿಗೆ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು ಭೇಟಿ ನೀಡಿ, ರೈತರೊಂದಿಗೆ ಮಾತುಕತೆ ನಡೆಸಿದರು.

 ಗ್ರಾಮದ ರೈತರು ಮಾತನಾಡಿ, 1980ನೇ ಇಸವಿಯಲ್ಲಿ ಆರಂಭವಾದ ಅಚ್ಚುಕಟ್ಟು ಪ್ರಾಧಿಕಾರವು ಹಲವಾರು ಅಧ್ಯಕ್ಷರನ್ನು ಕಂಡಿದೆ. ಆದರೆ ಕೊನೆಯ ಭಾಗಕ್ಕೆ ನೀರು ತಲುಪಿಸುವಲ್ಲಿ ಯಾವ ಅಧ್ಯಕ್ಷರು ಗೆದ್ದಿರಲಿಲ್ಲ. ನೀವು ಈ ಪರಂಪರೆಯ ಕೊಂಡಿಯನ್ನು ಕಳಚಿ, ಕಾಡಾಗೆ ಅಂಟಿದ್ದ ಆರೋಪವನ್ನು ದೂರ ಮಾಡಿ ನೀರು ಕೊಟ್ಟಿದ್ದೀರಿ ಎಂದರು.

ಪ್ರತಿವರ್ಷ ನೀರು ಪಡೆಯಬೇಕು ಎಂದರೆ ಸಾಕಷ್ಟು ಗದ್ದಲ, ಹೋರಾಟ ಮಾಡುವ ಮೂಲಕ ನೀರು ಪಡೆದುಕೊಳ್ಳುತ್ತಿದ್ದೆವು. ರಾತ್ರಿ, ಹಗಲು ನಿದ್ದೆಗೆಟ್ಟು ಚಾನೆಲ್ ಮೇಲೆ ಓಡಾಡಿಕೊಂಡು ನೀರು ಹಾಯಿಸಿ ಕೊಳ್ಳಬೇಕಾಗಿತ್ತು. ಆದರೆ ನೀವು ಅಧ್ಯಕ್ಷರಾದ ಮೇಲೆ ಸಮಸ್ಯೆಗೆ ಮುಕ್ತಿ ದೊರಕಿದೆ ಎಂದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ಕಾರಿಗನೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯರಾದ ತೇಜಸ್ವಿ ಪಟೇಲ್ ಮಾತನಾಡಿ, ಮಲೇಬೆನ್ನೂರು ನೀರಾ ವರಿ ಇಲಾಖೆಯಲ್ಲಿ ನಡೆದ ಸಭೆಯಲ್ಲಿ ಕೊನೆಯ ಭಾಗಕ್ಕೆ ನೀರು ಕೊಟ್ಟೇ ಕೊಡುತ್ತೇನೆ ಎಂದು ವಾಗ್ದಾನ ಮಾಡಿದಾಗ, ಇದು ಅಪ್ಪಟ ಅನನುಭವಿತನದ ಹೇಳಿಕೆ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆವು. ಪುರುಷರು ಅಧ್ಯಕ್ಷ ಗಾದಿಯಲ್ಲಿ ಕುಳಿತಾಗ ಆಗದಿದ್ದ ಕೆಲಸ ಇವರಿಗೆ ಆಗುವುದೇ ಎಂದು ಆಶ್ಚರ್ಯ ಪಟ್ಟಿದ್ದೆವು.  ಈಗ ನಂಬಲು ಸಾಧ್ಯ ವಾಗದ ರೀತಿಯಲ್ಲಿ ಕಳೆದ 20 ವರ್ಷಗಳಲ್ಲಿ ನಾಲೆಗಳಲ್ಲಿ ತಲುಪದಿದ್ದ ನೀರು ಈಗ ಹರಿಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಭದ್ರಾ ನೀರು ಬಳಕೆದಾರರ ಮಹಾ ಮಂಡಳದ ಅಧ್ಯಕ್ಷ ದ್ಯಾವಪ್ಪ ರೆಡ್ಡಿ, ಅಧೀಕ್ಷಕ ಅಭಿಯಂತರ ಚಂದ್ರಹಾಸ್, ಕಾರ್ಯಪಾಲಕ ಅಭಿಯಂತರ ಮಲ್ಲಪ್ಪ, ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದಪ್ಪ, ಗ್ರಾಮದ ಪ್ರಮುಖರಾದ ದಿನೇಶ್, ಮಂಜುನಾಥ್ ಇನ್ನಿತರರಿದ್ದರು.

Leave a Reply

Your email address will not be published.