ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಎಸ್‌4 ನಿಂದ ಸಿಎಂ ಗೆ ಮನವಿ

ಹರಿಹರ, ಏ.6- ಒಳಮೀಸಲಾತಿ ವರ್ಗೀಕರಣ ಮಾಡುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ತಾಲ್ಲೂಕಿನ ಡಿಎಸ್4 ಕರ್ನಾಟಕ ತಾಲ್ಲೂಕು  ಸಮಿತಿ ಅಧ್ಯಕ್ಷ ಎಂ. ಮಂಜುನಾಥ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಬೆಳ್ಳೂಡಿ ಶಾಖಾ ಮಠದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು, ನ್ಯಾ. ಸದಾಶಿವ ಆಯೋಗದ ವರದಿ ನೆನೆಗುದಿಗೆ ಬಿದ್ದಿದ್ದು, ಅಸ್ಪೃಶ್ಯ ಸಮುದಾಯಕ್ಕೆ ತುರ್ತಾಗಿ ಒಳ ಮೀಸಲಾತಿ ವರ್ಗೀಕರಣ ಮಾಡಬೇಕು, ಪರಿಶಿಷ್ಟ  ಜಾತಿ,  ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಸಹಾಯಧನ  ನೀಡಬೇಕು ಎಂದರು.

 ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವಸತಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅನ್ಯಾಯವಾಗಿದ್ದು, ಕೂಡಲೇ ಇದನ್ನು ತನಿಖೆಗೆ ಒಳಪಡಿಸಬೇಕು. ದಲಿತ ಚಳುವಳಿಯ ಸಂಸ್ಥಾಪಕ  ಪ್ರೊ. ಬಿ. ಕೃಷ್ಣಪ್ಪನವರ  ಸ್ಮಾರಕದ ಪಕ್ಕದಲ್ಲಿ ಮದ್ಯದಂಗಡಿ (ಬಾರ್ ಅಂಡ್ ರೆಸ್ಟೋರೆಂಟ್) ಇಡಲಾಗಿದ್ದು, ಕೂಡಲೇ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ತಾಲ್ಲೂಕಿನಲ್ಲಿ ಅಂಬೇಡ್ಕರ್ ಭವನಕ್ಕೆ  7-8 ವರ್ಷಗಳ ಹಿಂದೆಯೇ ಅನುದಾನವನ್ನು ಬಿಡುಗಡೆ ಮಾಡಿದ್ದು, ಕೂಡಲೇ ನಗರದ ಹಳೇ ಕೋರ್ಟ್ ಜಾಗದಲ್ಲಿ  ಅಂಬೇಡ್ಕರ್ ಭವನವನ್ನು ನಿರ್ಮಿಸಬೇಕು. ಜಿಲ್ಲಾ ಮತ್ತು ತಾಲ್ಲೂಕು ಎಸ್ಸಿ ಮತ್ತು ಎಸ್ಟಿ ಕುಂದು ಕೊರತೆ ಸಭೆಗಳನ್ನು   ನಿಗದಿಪಡಿಸಿದ ವೇಳೆಗೆ ನಡೆಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿಎಸ್4 ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷ್.ಎಂ. ನೋಟದವರ್, ಸಮಿತಿಯ ವಿನಾಯಕ ಎನ್. ಹೊಳೆಸಿರಿಗೆರೆ, ಮಂಜುನಾಥ ಹೆಚ್ ಸೇರಿದಂತೆ ಇನ್ನಿತರೆ ಪದಾಧಿಕಾರಿಗಳು ಇದ್ದರು.

Leave a Reply

Your email address will not be published.