ಆರೋಗ್ಯದ ನಿರ್ಲಕ್ಷ್ಯ ಸಲ್ಲದು

ಆರೋಗ್ಯದ ನಿರ್ಲಕ್ಷ್ಯ ಸಲ್ಲದು

ಜಗಳೂರಿನಲ್ಲಿ ಡಾ.ಚೆನ್ನಾರೆಡ್ಡಿ 

ಜಗಳೂರು, ಮಾ. 28- ದಿನನಿತ್ಯ ಒತ್ತಡದ ಜೀವನದಲ್ಲಿ  ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸುವಂತೆ ಆಗಿದೆ  ಎಂದು ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆ ವೈದ್ಯ ಡಾ. ಚೆನ್ನಾರೆಡ್ಡಿ ಹೇಳಿದರು.

ತಾಲ್ಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಶ್ರೀ ಸೌಖ್ಯ ಯುಮೇನಿಟೇನ್ ಫೌಂಡೇಶನ್ ಹಾಗೂ ಹುಚ್ಚವ್ವನಹಳ್ಳಿ ಗ್ರಾಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿಗೂ ಸಹ ಗ್ರಾಮೀಣ ಭಾಗದ ಜನರಿಗೆ ವಿವಿಧ ಕಾಯಿಲೆಗಳ ಮಾಹಿತಿ ಇರುವುದಿಲ್ಲ. ದುಬಾರಿ ಚಿಕಿತ್ಸಾ ವೆಚ್ಚ ಹಾಗು ಔಷಧಗಳನ್ನು ಕೊಂಡುಕೊಳ್ಳುವ ಶಕ್ತಿ ಇರುವುದಿಲ್ಲ. ಅಂತಹ ಕುಟುಂಬಗಳಿಗೆ ಉಚಿತ ಆರೋಗ್ಯ ಶಿಬಿರದ ಮೂಲಕ ಸಮಾಜಕ್ಕಾಗಿ ಪುಟ್ಟ ಅಳಿಲು ಸೇವೆ ಮಾಡುವ ಇಚ್ಛೆ ಹೊಂದಲಾಗಿದೆ ಎಂದರು.

ಇದೇ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾವುಗಳು ವೈದ್ಯರಾಗಿ ಬಂದು ನಮ್ಮ ಹಳ್ಳಿಯ ಜನರಿಗಾಗಿ ಸೇವೆ ಮಾಡುವ ಮೂಲಕ ಹುಟ್ಟಿದ ಊರಿನ ಋಣ ತೀರಿಸಬೇಕಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮ ಗ್ರಾಮದ ಸಹೋ ದ್ಯೋಗಿಗಳೊಂದಿಗೆ ಸೇರಿ ಸತತ ಎರಡನೇ ಆರೋಗ್ಯ ಶಿಬಿರವನ್ನು ನಡೆಸುತ್ತಿದ್ದೇವೆ ಎಂದರು.

ಮತ್ತೋರ್ವ ವೈದ್ಯ ಡಾ. ಆರ್.ಜೆ. ಹರೀಶ್ ಮಾತನಾಡಿ, ಗ್ರಾಮಸ್ಥರು ಹಾಗು ಸ್ಥಳೀಯ ಜನಪ್ರತಿನಿಧಿ ಗಳ ಸಹಕಾರದಿಂದ ನಮ್ಮ ಸಂಸ್ಥೆಯಿಂದ ಸತತ ಎರಡನೇ ಬಾರಿ ನಡೆಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾಕಷ್ಟು ಮಹಿಳೆಯರು, ಮಕ್ಕಳು, ವಯೋವೃದ್ಧರು, ಜನಸಾಮಾನ್ಯರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಳ್ಳಿಯ ಜನಕ್ಕೆ ಇಂತಹ ಮಹತ್ವದ ಕಾರ್ಯ ಮಾಡಿದ ತೃಪ್ತಿ ನಮಗೆ ಇದೆ. ಇದೇ ಸಹಕಾರ ಮುಂದುವರೆದರೆ ಪ್ರತಿ ತಿಂಗಳ ಕೊನೆ ಭಾನುವಾರ ಆಯೋಜಿಸಿರುವ ಶಿಬಿರಕ್ಕೆ ವಿವಿಧ ಭಾಗಗಳಿಂದ ನುರಿತ ವೈದ್ಯರನ್ನು ಕರೆಸಿ ಹೆಚ್ಚಿನ ತಪಾಸಣೆ ನಡೆಸಲಾಗುವುದು ಎಂದರು.

ಗ್ರಾ.ಪಂ. ಉಪಾಧ್ಯಕ್ಷ  ಎಲ್. ಆರ್.  ಅನೂಪ್ ಮಾತನಾಡಿ, ಇಂದು ಹಳ್ಳಿಯಲ್ಲಿ ಹುಟ್ಟಿ ಬೆಳೆದಂತಹವರು ಮತ್ತೆ ಹಳ್ಳಿಗಳ ಕಡೆ ಮುಖ ಮಾಡುವುದು ತೀರಾ ವಿರಳ. ಅಂತಹದರಲ್ಲಿ ವಿವಿಧ ಜಿಲ್ಲೆಗಳ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಸೇವೆ ಮಾಡಿದ ವೈದ್ಯರು ಇಂದು ನಮ್ಮ ಹಳ್ಳಿಗೆ ಉಚಿತ ಸೇವೆ ಮಾಡಲು ಬಂದಿರುವುದು ಸಂತಸ ತಂದಿದೆ. ನಮ್ಮ ಗ್ರಾಮ ಪಂಚಾಯ್ತಿ ವತಿಯಿಂದ ಅಗತ್ಯ ಸಹಕಾರ ನೀಡು ತ್ತೇವೆ ಎಂದರು. ಟ್ರಸ್ಟ್ ಸದಸ್ಯರಾದ ಅಶ್ವಿನಿ  ಅಭಿಷೇಕ್, ಆರೋಗ್ಯ ಸೇವಾ ಸಿಬ್ಬಂದಿಗಳು, ಗ್ರಾಮಸ್ಥರಿದ್ದರು.