ಸೊಬಗಿನ ಕಪ್ಪು – ಚುಕ್ಕೆ ಚಿಟ್ಟೆ

ಸೊಬಗಿನ ಕಪ್ಪು – ಚುಕ್ಕೆ ಚಿಟ್ಟೆ

ಪಾತರಗಿತ್ತಿಗಳ ಪ್ರಪಂಚವೇ ಒಂದು ನಿಸರ್ಗದ ಅದ್ಭುತ ಸೃಷ್ಟಿ. ಅವುಗಳ ವರ್ಣ ಸಂಯೋಜನೆ, ಆಕಾರ, ಗಾತ್ರ, ಹಾರಾಡುವಿಕೆ, ಜೀವನ ಶೈಲಿ ಮುಂತಾದವುಗಳು ಮಾನವನ ಕಲ್ಪನೆಗೂ ನಿಲುಕದ್ದು. ಜಗತ್ತು ನಡೆಯುತ್ತಿರುವುದೇ ಕೀಟಗಳಿಂದ ಎಂದರೆ ತಪ್ಪಾಗಲಾರದು.  ನಾವು ಆಹಾರವಾಗಿ ಬಳಸುವ ಕಾಳುಗಳು ಮತ್ತು ತರಕಾರಿ-ಹಣ್ಣುಗಳು ಕೀಟಗಳಿಂದಾಗುವ ಪರಾಗಸ್ಪರ್ಶ ಕ್ರಿಯೆಯ ಕೃಪೆ.  ಕೀಟಗಳಿಲ್ಲದ ಪ್ರಪಂಚವನ್ನು ಊಹಿಸುವುದೂ ಅಸಾಧ್ಯ.  ಕೀಟಗಳು ಒಂದೆಡೆ ಸಸ್ಯಗಳ ಸಂತಾನಾಭಿವೃದ್ಧಿಗೆ ಸಹಾಯ ಮಾಡಿದರೆ ಇನ್ನೊಂದೆಡೆ ಸಾವಿರಾರು ಹಕ್ಕಿ, ಹಲ್ಲಿಗಳಿಗೆ ಆಹಾರವಾಗುವವು. ಚಿಟ್ಟೆಗಳು ಆಕರ್ಷಣೀಯ ಬಣ್ಣಗಳಿಗೆ ಹೆಸರಾಗಿದ್ದು, ಇಲ್ಲೊಂದು ಪ್ರಭೇದ ಕಪ್ಪು-ಬಿಳಿ ಸಂಯೋಜನೆಯಿಂದ ವಿಶಿಷ್ಟತೆ ಪಡೆದಿದೆ.  ಲೈಕಾನಿಡೆ ಕುಟುಂಬಕ್ಕೆ ಸೇರಿದ ನೀಲಿ ಚಿಟ್ಟೆಗಳ ಸದಸ್ಯ ಕಪ್ಪು-ಚುಕ್ಕೆ ಚಿಟ್ಟೆ (Common Pierrot). ಪ್ರಾಣಿಶಾಸ್ತ್ರೀಯ ಹೆಸರು ಕಾಸ್ಟಲಿಯಸ್ ರೋಸಿಮೊನ್ (Castalius rosimon).

ಈ ಚಿಟ್ಟೆಗಳು ಗಾತ್ರದಲ್ಲಿ ಚಿಕ್ಕದಿರುತ್ತವೆ. ರೆಕ್ಕೆ ಅಗಲಿಸಿದಾಗ ಕೇವಲ 24 ರಿಂದ 32 ಮಿ.ಮೀ.ಗಳು. ಬಿಳಿ ರೆಕ್ಕೆಗಳ ಮೇಲೆ ಕಪ್ಪು ಚುಕ್ಕೆಗಳನ್ನು ಹೊಂದಿರುತ್ತವೆ.  ಮೇಲ್ಭಾಗ ಬಿಳಿಯಾಗಿದ್ದು ತಿಳಿ ನೀಲಿ ತಳವಿರುತ್ತದೆ.  ಮುಂದಿನ ರೆಕ್ಕೆಯ ಮೇಲ್ಭಾಗದಲ್ಲಿ ಕಪ್ಪು-ಮಿಶ್ರಿತ ಕಂದು ಪಟ್ಟಿಯಿರುತ್ತದೆ. ಅಂಚಿನಲ್ಲಿಯೂ ಕಪ್ಪು ಗೆರೆಗಳಿರುತ್ತವೆ.  ಒಂದು ದೊಡ್ಡ ಚುಕ್ಕೆಯಿದ್ದು ಹೊರಕ್ಕೆ ಐದು ಚುಕ್ಕೆಗಳು ಸಾಲಾಗಿರುತ್ತವೆ.  ಹಿಂದಿನ ರೆಕ್ಕೆಯ ಕೆಳಗಿನ ಚುಕ್ಕೆಗಳ ಜೊತೆಗೆ ನೀಲಿ ಹುರುಪೆಗಳಿರುತ್ತವೆ.  ಎರಡು ಕಪ್ಪು ಬಣ್ಣದ ಬಾಲಗಳಿದ್ದು ತುದಿ ಮಾತ್ರ ಬಿಳಿಯಾಗಿರುತ್ತದೆ.  ರೆಕ್ಕೆ ಮುಚ್ಚಿ ಕುಳಿತಾಗ ಕಪ್ಪು ಚುಕ್ಕೆಗಳು ಚೆನ್ನಾಗಿ ಕಾಣುತ್ತವೆ.  ಹಿಂದಿನ ರೆಕ್ಕೆಯ ಅಂಚಿನಲ್ಲಿ ಎರಡು ಗೆರೆಗಳಿದ್ದು ಮೂರು ಜೊತೆ ಕಪ್ಪು ಚುಕ್ಕೆಗಳಿರುತ್ತವೆ.  ಎರಡೂ ರೆಕ್ಕೆಗಳ ಅಂಚಿಗಿಂತ ಮುಂಚೆ ಸಣ್ಣ ಕಪ್ಪು ಚುಕ್ಕೆಗಳ ಸಾಲು ಇರುತ್ತದೆ. ಹೆಣ್ಣು ಚಿಟ್ಟೆಯಲ್ಲಿ ಚುಕ್ಕೆಗಳು ಮಿಳಿತಗೊಂಡು ಪಟ್ಟೆಯಾಗಿರುತ್ತದೆ.  ಚುಕ್ಕೆಗಳ ಗಾತ್ರ ಮತ್ತು ಸಂಖ್ಯೆಗಳ ಮೇಲೆ ವಿವಿಧ ಪ್ರಭೇದಗಳನ್ನು ಗುರುತಿಸಲಾಗುತ್ತದೆ.  

ದಕ್ಷಿಣ ಭಾರತಾದ್ಯಂತ ವಾಸಿಸುತ್ತವೆ.  ಮೆಲ್ಲಗೆ ನೆಲದ ಹತ್ತಿರವೇ ಹಾರಾಡುತ್ತಿರುತ್ತವೆ.  ಆಗಾಗ್ಗೆ ಎಲೆಗಳ ಮೇಲೆ ಕೂರುತ್ತಾ ಬಿಸಿಲು ಕಾಯಿಸುತ್ತವೆ. ಹೂಗಳನ್ನು, ಹಕ್ಕಿಗಳ ಪಿಕ್ಕೆಗಳನ್ನು, ತೇವವಾದ ಮಣ್ಣನ್ನು ತಮ್ಮ ಆಹಾರ ಮತ್ತು ಖನಿಜಾಂಶಗಳ ಅಗತ್ಯಕ್ಕಾಗಿ ಸಂದರ್ಶಿಸುತ್ತವೆ.  

ಸೂಕ್ಷ್ಮಜೀವಿಗಳಿಂದ ಪ್ರಾರಂಭವಾದ ಜೀವ ವಿಕಾಸ ಪರಿಸರಕ್ಕನುಗುಣವಾಗಿ ಜೀವಿಗಳಲ್ಲಿ ಹಲವಾರು ಮಾರ್ಪಾಡುಗಳನ್ನು ಸೃಷ್ಟಿಸಿ, ಸಕಲ ಜೀವಿಗಳು ಸಮತೋಲನದಲ್ಲಿ ಜೀವಿಸುವಂತಾಗಿರುವುದು ಮನುಷ್ಯನ ಅರ್ಥಕ್ಕೆ ನಿಲುಕದ ಸಂಗತಿ. ಪ್ರಕೃತಿಯ ಈ ಪರಿಪೂರ್ಣತೆಯನ್ನು ಅರಿತು, ಸಕಲ ಜೀವಿಗಳಿಗೂ ಬದುಕಲು ಅವಕಾಶ ಕಲ್ಪಿಸುವುದು ಮನುಷ್ಯನ ಆದ್ಯ ಕರ್ತವ್ಯ.


ಡಾ. ಎಸ್. ಶಿಶುಪಾಲ,
ದಾವಣಗೆರೆ.
sskumb@gmail.com