ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ಗುಬ್ಬಚ್ಚಿಗಳು

ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ಗುಬ್ಬಚ್ಚಿಗಳು

ನೆನಪಿನ ಇತಿಹಾಸದಲ್ಲಿ, ಕಲಾವಿದರು ತೆಗೆದ ಚಿತ್ರದಲ್ಲಿ ಹಳೆಯ ಛಾಯಾರೂಪದಲ್ಲಿ ಮಾತ್ರ ಕಾಣಿಸುವ ಅಪೂರ್ವ ಪಕ್ಷಿ. ಬಾಲ್ಯದ ಇತರೆ ಪಕ್ಷಿಗಳಿಗಿಂತ ಹೆಚ್ಚು ಪರಿಚಿತ ಹಾಗೂ ಆತ್ಮೀಯ ಪಕ್ಷಿಯಾದ ಇದು ನಮ್ಮ ಜೀವನದ ಭಾಗವೇ ಆಗಿಹೋಗಿದ್ದವು. ಸದಾ ಸರಳ ಜೀವನವನ್ನೇ ಬಯಸುವ ಇವು ಜನವಸತಿ ಪ್ರದೇಶವಿ ರುವಲ್ಲಿ ಒಣಗಿದ ಹುಲ್ಲು, ಹತ್ತಿ, ನಾರುಗಳಿಂದ ಗೂಡು ಕಟ್ಟಿ ತನ್ನ ಸಂತತಿಯನ್ನು ಬೆಳೆಸುತ್ತವೆ. ಅಮ್ಮ ಒಣಗಿಸಿಟ್ಟ ಕಾಳು ಕಡಿಗಳನ್ನು ಕಬಳಿಸುತ್ತಾ ನಮ್ಮ ಕೈಗೆ ಸಿಗದೆ ಪಟ್ಟನೆ ಹಾರಿಹೋಗುವ ಮನಾಕರ್ಷಕ ಪಕ್ಷಿಯೂ ಹೌದು!

ಗುಬ್ಬಿ ಗುಬ್ಬಿ ಚೀಂವ್ ಚೀಂವ್ ಎಂದು
ಕರೆಯುವೆ ಯಾರನ್ನು?
ಆಚೆ ಈಚೆ ಹೊರಳಿಸಿ ಕಣ್ಣು ನೋಡುವೆ ಏನನ್ನು?
ಮೇಲೆ ಕೆಳಗೆ ಕೊಂಕಿಸಿ ಕೊರಳನ್ನು ಹುಡುಕುವೆ ಏನನ್ನು?

ಬಾಲ್ಯವನ್ನು ನೆನಪಿಸುವ ಈ ಸಾಲುಗಳನ್ನು ಮೇಷ್ಟ್ರು ತರಗತಿಯಲ್ಲಿ ಹೇಳುತ್ತಿದ್ದರೆ, ತರಗತಿಯೊಳಗೆ ಗೂಡು ಕಟ್ಟಿ ವಾಸಿಸುವ ಗುಬ್ಬಚ್ಚಿಗಳು ಚೀಂವ್ ಚೀಂವ್ ಎಂದು ಗದ್ದಲ ಮಾಡುತ್ತಾ, ತನ್ನ ಮರಿಗೆ ಕಾಳು ಕಡಿಗಳನ್ನು ತಂದು ಉಣಬಡಿಸುತ್ತಿದ್ದ ನೆನಪುಗಳು ಮರುಕಳಿಸುತ್ತವೆ.

ಸಾಮಾನ್ಯವಾಗಿ ಗುಬ್ಬಚ್ಚಿಯೊಂದು 16 ಸೆಂ.ಮೀ ಎತ್ತರ, 21 ಸೆಂ.ಮೀ ಉದ್ದವಿರುತ್ತದೆ. ಇದರ ತೂಕ 25 ರಿಂದ 40 ಗ್ರಾಮ್‍ನಷ್ಟಿರುವ ಪುಟಾಣಿ ಹಕ್ಕಿ.
ಇದು ಪ್ರಧಾನವಾಗಿ ಬೀಜ, ಕಾಳು ಕಡಿ, ಹುಳು-ಹುಪ್ಪಡಿಗಳನ್ನು ಸೇವಿಸುತ್ತದೆ. ದಪ್ಪ ಹಾಗೂ ಗಟ್ಟಿ ಬೀಜಗಳನ್ನು ಒಡೆಯಲು ಅನುಕೂಲವಾಗುವಂತೆ ಕೊಕ್ಕು ತ್ರಿಕೋನಾಕಾರವಾಗಿ ಮೋಟಾಗಿದೆ. 

ಪಾಸ್ಸರ್ ಡೊಮೆಸ್ಟಿಕಸ್ ಪಾಸ್ಸರಿಫಾರ್ಮಿಸ್ ಗಣಕ್ಕೆ ಸೇರಿರುವ ಗುಬ್ಬಿಗಳು ದಂಪತಿಯಂತೆ ಬಾಳುತ್ತವೆ. ಹೆಣ್ಣು ಗುಬ್ಬಿ ಮರಿಗಳು ಬೂದು ಬಣ್ಣದಿಂದ ಕೂಡಿದ್ದು, ರೆಕ್ಕೆಯ ಮೇಲೆ ಕಪ್ಪು ಪಟ್ಟಿಗಳಿಂದ ಕೂಡಿದ್ದರೆ, ಗಂಡು ಹಕ್ಕಿಗೆ ರೆಕ್ಕೆ, ಕೆನ್ನೆ ಹಾಗೂ ತಲೆಯ ಭಾಗ ಕಂದುಗೆಂಪು ಬಣ್ಣವಿದ್ದು, ಪಕ್ಕೆ ಹಾಗೂ ಹೊಟ್ಟೆ ಬಿಳಿ ಬಣ್ಣವಿರುತ್ತದೆ. ಸಾಮಾನ್ಯವಾಗಿ 4 ಮೊಟ್ಟೆಗಳನ್ನು ಇಟ್ಟು, 14 ದಿನ ಕಾವು ಕೊಡುವ ಜವಾಬ್ದಾರಿ ಹೆಣ್ಣು ಗುಬ್ಬಿಯದಾದರೆ, ಮರಿಗಳಿಗೆ ಆಗಾಗ ಸಣ್ಣ, ಮೃದು ದೇಹದ ಕೀಟ, ಹುಳುಗಳನ್ನು ತಿನ್ನಿಸುವುದು ಗಂಡು ಗುಬ್ಬಿಯ ಜವಬ್ದಾರಿಯಾಗಿರುತ್ತದೆ. ಸಹಜವಾಗಿ ಗಂಡು, ಹೆಣ್ಣು ಎರಡೂ ತಮ್ಮ ಮರಿಗಳಿಗೆ ಉಣಿಸುತ್ತವೆ. ಫಿಂಚ್ ಹಕ್ಕಿ, ಮುನಿಯ, ಗೀಜಗಗಳು ಗುಬ್ಬಚ್ಚಿಯ ಸೋದರ ಸಂಬಂಧಿಗಳು. 

ಕಾಂಕ್ರೀಟ್ ಜಂಗಲ್‍ನಲ್ಲಿ ಗುಬ್ಬಚ್ಚಿಯಂತಹ ಸಂವೇದ ನಾಶೀಲ ಪಕ್ಷಿ ಸಂಕುಲವಿಂದು ಅಳಿವಿನ ಅಂಚು ತಲುಪು ವಂತಾಗಿರುವುದು ದುರ್ವಿಧಿ. ವಾತಾವರಣವನ್ನೆಲ್ಲಾ ತುಂಬಿ ಕೊಳ್ಳುತ್ತಿರುವ ಹಲವಾರು ರೀತಿಯ ವಿದ್ಯುತ್‍ಕಾಂತೀಯ ಅಲೆಗಳ ಪರಿಣಾಮದಿಂದ ಗುಬ್ಬಿಗಳು ಸಂಪೂರ್ಣವಾಗಿ ಕಣ್ಮರೆಯಾಗುತ್ತಿವೆ. ಸ್ವಚ್ಚಂದವಾಗಿ ವಿಹರಿಸಿಕೊಂಡಿದ್ದ ಗುಬ್ಬಚ್ಚಿಗಳು ಅವಸಾನದ ಅಂಚಿಗೆ ತಲುಪಿದೆ. 

 ಒಂದು ಅಧ್ಯಯನದ ಪ್ರಕಾರ ಅಭಿವೃದ್ಧಿ ಹೊಂದುತ್ತಿರುವ ಎಲೆಕ್ಟ್ರಾನಿಕ್ ತರಂಗಗಳು, ರೇಡಿಯೋ ತರಂಗಗಳು, ವಿದ್ಯುತ್‍ಕಾಂತೀಯ ಅಲೆಗಳು ಗುಬ್ಬಚ್ಚಿಗಳ ಸೂಕ್ಷ್ಮ ಹೃದಯಕ್ಕೆ ಹಾಗೂ ಅವುಗಳ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಹಾನಿಯುಂಟು ಮಾಡುತ್ತಿವೆ. ಈಗ ಸಾಮಾನ್ಯವಾಗಿ ಎಲ್ಲ ಪ್ರದೇಶಗಳಲ್ಲಿಯೂ ಎಲೆಕ್ಟ್ರಾನಿಕ್ ತರಂಗಗಳು ಆವರಿಸಿಕೊಂಡಿದ್ದು, ಬದಲಾದ ಪರಿಸರ, ಬದಲಾದ ವಾತಾವರಣ ಹಾಗೂ ನಗರೀಕರಣದ ಹೆಸರಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಿಡ, ಮರಗಳ ಮಾರಣಹೋಮ, ಕೀಟನಾಶಕಗಳ ಅತಿಯಾದ ಬಳಕೆಯ ಕಾರಣಗಳಿಂದಾಗಿ  ಗುಬ್ಬಚ್ಚಿಗಳ ಸಂತತಿ ಕಾಣೆಯಾಗುತ್ತಿದೆ. 

ಅತಿಯಾದ ಶಬ್ಧ ಮಾಲಿನ್ಯ, ಮೊಬೈಲ್ ಫೋನ್‍ಗಳ ತರಂಗಗಳು, ಕೃಷಿಯಲ್ಲಿ ರಾಸಾಯನಿಕ ಬಳಕೆ, ವಾಹನಗಳ ಮಾಲಿನ್ಯ, ಕಟ್ಟಡಗಳ ಆಧುನಿಕ ವಿನ್ಯಾಸದಿಂದಾಗಿ ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳ ಸಂತಾನವನ್ನು ಉಳಿಸುವ ನಿಟ್ಟಿನಲ್ಲಿ 2010 ರಿಂದ ಪ್ರತಿ ವರ್ಷ ಮಾರ್ಚ್ 20 ರಂದು `ವರ್ಲ್ಡ್ ಸ್ಪ್ಯಾರೋ ಡೇ’ ಹೆಸರಿನಲ್ಲಿ ಗುಬ್ಬಿಗಳಿಗಾಗಿ ಪ್ರಪಂಚದಾದ್ಯಂತ ಒಂದು ದಿನದ ಆಚರಣೆ ನಡೆಸಲಾಗುತ್ತಿದೆ. 

ಗುಬ್ಬಚ್ಚಿಗಳು ಕಾಣೆಯಾಗುತ್ತಿರುವುದು ನಿಜವಾಗಿಯೂ ನಮ್ಮ ಪರಿಸರ ವ್ಯವಸ್ಥೆ ಹದಗೆಡುತ್ತಿರುವುದರ ಎಚ್ಚರಿಕೆಯ ಗಂಟೆ ಎನ್ನಬಹುದು.  ಪಕ್ಷಿ ಸಂಕುಲದ ಪ್ರತಿನಿಧಿಯಾಗಿರುವ ಗುಬ್ಬಚ್ಚಿಯೇ ನಾಶವಾದರೆ, ಅತ್ಯಂತ ಅವಶ್ಯಕವಾಗಿ ಬೇಕಾಗಿರುವ ಜೀವ ವೈವಿಧ್ಯ ಇಲ್ಲವಾಗಿ ಮನುಷ್ಯನ ಅಸ್ತಿತ್ವಕ್ಕೆ ಕುತ್ತು ಬರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ವಿಶ್ವ ಗುಬ್ಬಚ್ಚಿ ದಿನಾಚರಣೆ ಆಚರಿಸುತ್ತಿರುವ ನಿಟ್ಟಿನಲ್ಲಿ ಪರಿಸರ ಸಮತೋಲನ ಕಾಪಾಡಲು ಪ್ರಯತ್ನಿಸಬೇಕು. ಕಳೆದು ಕೊಳ್ಳುತ್ತಿರುವ ಬಾಂಧವ್ಯ, ಪರಿಸರ ಕೊಂಡಿ ಮತ್ತೆ ಕೂಡಿಸಲು ಪ್ರಯತ್ನಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯವಾಗಿದೆ.


ಪ್ರೀತಿ ಟಿ.ಎಸ್, ದಾವಣಗೆರೆ.
preethimodaliyar@gmail.com