ವರದಕ್ಷಿಣೆ ಕಿರುಕುಳ : ಆತ್ಮಹತ್ಯೆ

ದಾವಣಗೆರೆ, ಮಾ.19- ವರದಕ್ಷಿಣೆ ಕಿರುಕುಳದ ಹಿನ್ನೆಲೆ ಮನನೊಂದ ನವ ವಿವಾಹಿತೆಯೋರ್ವಳು ತನ್ನ ತವರು ಮನೆಯಲ್ಲಿ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಂಬೂಬಜಾರ್‍ನಲ್ಲಿ ನಡೆದಿದೆ. 

ಬೀಬಿ ಹಾಜೀರಾ (19) ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ. ಎಸ್‍ಪಿಎಸ್ ನಗರದ ಇಮ್ರಾನ್ ಎಂಬಾತನ ಜೊತೆಗೆ ಕಳೆದ 8 ತಿಂಗಳ ಹಿಂದೆಯಷ್ಟೇ ಹಾಜೀರಾ ಮದುವೆ ಆಗಿತ್ತು. ಮದುವೆ ಸಂದರ್ಭದಲ್ಲಿ 1ಲಕ್ಷ ನಗದು, 30 ಗ್ರಾಂ ಚಿನ್ನಾಭರಣ ವರದಕ್ಷಿಣೆಯಾಗಿ ನೀಡಲಾಗಿತ್ತು. 

ಆದರೆ, ಇಮ್ರಾನ್ ಇತ್ತೀಚೆಗೆ ತಾನು ವ್ಯಾಪಾರ ಮಾಡಲು ತವರು ಮನೆಯಿಂದ ಹಣ ತರುವಂತೆ ಮತ್ತು ಬೈಕ್ ಕೊಡಿಸುವಂತೆ ಪೀಡಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಮನನೊಂದ ಗೃಹಿಣಿ ತನ್ನ ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ವರದಕ್ಷಿಣೆ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. 

ಗಂಡ, ಅತ್ತೆ, ಮಾವ, ನಾದಿನಿ ಹಾಗೂ ಮೈದುನರೂ ಸಹ ಕಿರುಕುಳ ನೀಡಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಬಳಿ ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿತ್ತು. ಜಿಲ್ಲಾಸ್ಪತ್ರೆ ಶವಾಗಾರಕ್ಕೆ ತಹಶೀಲ್ದಾರ್ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.