ಷಾಮಿಲಾತಿ ಕಳಕಳಿ…

ಷಾಮಿಲಾತಿ  ಕಳಕಳಿ…

‘ವಾಸುಮತಿ ಅಕ್ಕಿ ಹಾಕಿ ಒಂದ್ ಡಬ್ರಿ ಪಲಾಯನವಾದ ಮಾಡಿಟ್ಟು ಡ್ಯೂಟಿಗ್ ಹೋಗಿದಾಳ್ ನಿಮ್ಮವ್ವ. ಆಟಕೊಂದ್ ಪಲಾಯನನ ಯಾರ್ ತಿನ್ಬಕು?’

ದ್ಯಾಮವ್ವ ರೇಗಿದಳು.

ಅದಕ್ಕೆ ಮೊಮ್ಮಗ ಮಂಜ ‘ಅಯ್ಯೋ ಅಜ್ಜಿ, ಅದು ಬಾಸ್ಮತಿ ಅಕ್ಕಿ

ಪಲಾವು. ಅಷ್ಟಕ್ಕೂ ಉಳಿದ್ರೆ ಫ್ರಿಜ್ಜಿನಲ್ಲಿಟ್ಕೊಬಹುದು. ಅದ್ಸರಿ

ನೀನ್ಯಾಕೆ ಪಲಾವ್ ತಿನ್ನಲ್ಲ?’ ಎಂದ.

‘ನಿಮ್ಮ್ ಪಲಾಯನನೆಲ್ಲ ನಾನ್ ತಿನ್ನದುಲ್ಲ. ನಾನೇನಿದ್ರು ಮುಂಜಾನಿಗೆ

ಮುದ್ದಿ ಉಣ್ತನಿ. ಅಷ್ಟೇ ಅಲ್ಲ, ನಿಮ್‌ದ್ವಾಸಿ ಇಡ್ಲಿನೂ ನಂಗ್ ಆಗ್ಬರದುಲ್ಲ.

ಮೈಮುರಿಯಾ ಚಾಕ್ರಿ ಮಾಡಿ ಹಿಟ್ಟುಮುದ್ದಿ ಉಂಡ್ ಬೆಳ್ದಿರೋಳ್ ನಾನು.

ಇವತ್ಗೂ ನಮ್ ಹಳ್ಳಿನೇ ಹಳ್ಳಿ, ನಮ್ ಊಟನೇ ಊಟ, ನಮ್ ಜನಾನೇ ಜನ’

‘ಯಾವಾಗ್ಲು ನಮ್ ಹಳ್ಳಿ, ನಮ್ ಜನ ಅಂತಿರ್ತಿಯಲ್ಲಜ್ಜಿ, ಇದು ಅತಿ ಅಲ್ವ?’

‘ಯಾಕಪ್ಪ ಅತಿ? ನಿಮ್ ಪ್ಯಾಟಿ ಮಂದಿ ಒಂಟಿಗೂಬೆ ಥರ ಬದುಕ್ತಾರೆ.

ನಮ್ಮ್‍ ಹಳ್ಳಿಗ್ ಬಂದ್ ನೋಡಿಪ್ಪಟ್ಟು. ಜಾತ್ರಿ ಮಾರಿಹಬ್ಬ, ಉರುಸು ಎಲ್ಲಾ

ಸೇರ್ಕ್ಯಂದು ಮಾಡ್ತವಿ’

‘ಎಲ್ಲ ಸೇರಿಕೊಂಡು ಹಬ್ಬ ಮಾಡಕೆ ಜಾತಿ ಅಡ್ಡ ಬರ್ತಿರ್ಲಿಲ್ವ?’

‘ಜಾತಿಲ್ಲ ಪಾತಿಲ್ಲ ನಡಿ ಅತ್ಲಾಗೆ. ಎಲ್ರೂ ಕೂಡಿ ಬಾಳ್ತುದ್ದ್ ಹಳ್ಳಿಸುಖ ನಿಮ್ಮ್

ಪ್ಯಾಟೆಗಿಲ್ಕಣಪ್ಪ. ಹನುಮಪ್ಪ ಸಿದ್ದೇಸ್ವರ ಅಲ್ಲಿಪೀರ್ ಈ ಮೂರೇ

ದ್ಯಾವ್ರು ನಮ್ಗೊತ್ತಿದ್ದುದ್ದು. ತಾಯ್ತ ಕಟ್ಸ್‍ಕ್ಯಣದುಕ್ಕೆ

ಎಲ್ರೂ ಎಲ್ಲಾ ದೇವ್ರಿಗೂ ಬರ್ತುದ್ರು’

‘ಮತ್ತೀಗೆಲ್ಲ ಜಾತಿಗೊಂದು ಮಠ ಆಗಿದೆಯಲ್ಲ ಅದಕ್ಕೇನಂತಿ?’

‘ಅದೆಲ್ಲ ನಂಗೊತ್ತುಲ್ಲಾ… ಆದ್ರೆ ಎಲ್ಲ ಶಾಸಕರು ಮಂತ್ರಿಗಿರಿ

ಕೇಳ್ದಂಗೆ ಎಲ್ಲಾ ಜಾತಿಯವ್ರೂ ಈಗ `ಷಾಮಿಲಾತಿ ಕೇಳ್ತದಾರೆ.

ಹಿಂಗೇ ಮುಂದುವರೆದ್ರೆ ಈ ಷಾಮಿಲಾತಿ ಕಳಕಳಿ ರಾಜ್ಯಾದ್ಯಂತ

ದೊಡ್ಡದಾಕ್ಕತಿಪ್ಪಟ್ಟು. ಮುಕ್‍ಮಂತ್ರಿಗಳು ಸರ್ವಪಕ್ಷಸಭೆ

ಕರೆದಂಗೆ ಸದ್ಯದಾಗೇ ಸರ್ವಜಾತಿ ಸಭೆನೂ ಕರಿಬೇಕಾಕ್ಕತಿ’

ಅಜ್ಜಿ ಹೇಳಿದ್ದು ಷಾಮಿಲಾತಿ ಕಳಕಳಿಯೋ ಅಥವಾ ಮೀಸಲಾತಿ

ಚಳವಳಿಯೋ ಎಂದು ಗೊಂದಲಗೊಂಡ ಮಂಜ ಮೊದಲೇ

ಹೊಟ್ಟೆ ಹಸಿದಿತ್ತಾದ್ದರಿಂದ ಮರುಮಾತಾಡದೇ ಪಲಾವ್ ತಿನ್ನಲು

ಅಡಿಗೆಮನೆಗೋಡಿದ.


ಬಿ.ಆರ್.ಸುಬ್ರಹ್ಮಣ್ಯ
sriranga4@rediffmail.com