ರಾಮರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ‘ಹಿತಾನುಭವ’

ರಾಮರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ‘ಹಿತಾನುಭವ’

ಮೊದಲ ಬಾರಿಗೆ ಕೊರೊನಾ ಸೋಂಕು ಬಂದಾಗ ದೇಶ ಸನ್ನದ್ಧವಾಗಿರಲಿಲ್ಲ. ಮಾಸ್ಕ್ – ವೆಂಟಿಲೇಟರ್ ಇತ್ಯಾದಿಗಳು ದೇಶದಲ್ಲಿ ಉತ್ಪಾದನೆಯಾಗುತ್ತಿರಲಿಲ್ಲ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ – ಟ್ಯಾಂಕ್ ಇರಲಿಲ್ಲ. ರೋಗಕ್ಕೆ ಚಿಕಿತ್ಸೆ ನೀಡುವುದು ಗೊತ್ತಿರಲಿಲ್ಲ. ಹೀಗಾಗಿ ಲಾಕ್‌ಡೌನ್ ಅನಿವಾರ್ಯವಾಗಿತ್ತು. ಈಗ ವರ್ಷದ ಅನುಭವ ಆಗಿದೆ. ಭಾರತದಲ್ಲಿ ಶೇ.90ರಷ್ಟು ಜನರ ವಯಸ್ಸು ಕೊರೊನಾ ಅಪಾಯಕ್ಕಿಂತ ಕಡಿಮೆ ಇದೆ. ಹೀಗಾಗಿ ಸೋಂಕು ನಿಭಾಯಿಸಬಹುದು. 130 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಸೋಂಕಿತರ ಪ್ರಮಾಣ ಕಡಿಮೆ ಎಂದು ಕೆಲ ಅತಿ ಬುದ್ಧಿವಂತರು ಅಂಕಿ-ಅಂಶ ಮುಂದಿಡಬಹುದು. ಆದರೆ, ಅದಕ್ಕೆ ಯಾವುದೇ ಬೆಲೆ ಕೊಡುವ ಅಗತ್ಯವಿಲ್ಲ. ಪೊಲೀಸರು ಲಾಠಿ ಹಿಡಿದು ಹೊಟ್ಟೆ ಪಾಡಿಗೆ ತೆರಳುವವರ ಮೇಲೆ ಪ್ರಹಾರ ನಡೆಸುವ ಸುಂದರ ದೃಶ್ಯಾವಳಿಯ ಎದುರು ಅಂಕಿ- ಅಂಶಗಳೆಷ್ಟು ಒಣ.

ಚಿಕ್ಕ ಮಕ್ಕಳು ಒಂದು ವರ್ಷದ ಶಿಕ್ಷಣದಿಂದ ಈಗಾಗಲೇ ವಂಚಿತರಾಗಿದ್ದಾರೆ. ಈ ಕೊರತೆ ಸರಿದೂಗಿಸಲು ಕೆಲ ವರ್ಷಗಳೇ ಬೇಕಾಗಬಹುದು ಎಂದು ಶಿಕ್ಷಣ ಪರಿಣಿತರು ಗೊಣಗಾಡಬಹುದು. ಮಕ್ಕಳು ಕೊರೊನಾದಿಂದ ಸಾವನ್ನಪ್ಪುವುದಿರಲಿ ಗಂಭೀರವಾಗಿ ಅಸ್ವಸ್ಥರಾಗುವ ಸಾಧ್ಯತೆ ತೀರಾ ತೀರಾ ಕಡಿಮೆ ಎಂದು ಇಲ್ಲಿಯವರೆಗಿನ ದಾಖಲೆಗಳು ತಿಳಿಸುತ್ತವೆ. ಆದರೆ, ಶಾಲೆಯ ನಾಲ್ಕು ಮಕ್ಕಳಿಗೆ ಕೊರೊನಾ ಸೋಂಕು ಎಂದು ಅರ್ಭಟಿಸುವ ಬ್ರೇಕಿಂಗ್ ನ್ಯೂಸ್‌ಗಿಂತ ಮಕ್ಕಳ ಭವಿಷ್ಯ ದೊಡ್ಡದೇ? ಬನ್ನಿ ಲಾಕ್‌ಡೌನ್ ಎಂಬ ರಕ್ಕಸನ ಬಾಯಿಗೆ ನಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಕಿ ಆನಂದಿಸೋಣ.

ವಾಸ್ತವವಾಗಿ ಕೊರೊನಾದಿಂದ ಇರುವ ಅಪಾಯ ಎಷ್ಟು? ಈ ಪ್ರಶ್ನೆ ಸ್ಪಷ್ಟವಾಗಿಲ್ಲ. ಏಕೆಂದರೆ ಸರ್ಕಾರಿ ಅಂಕಿ-ಅಂಶಗಳನ್ನು ಮೀರಿ ಸಾಕಷ್ಟು ಜನರಿಗೆ ಕೊರೊನಾ ಬಂದಿದೆ. ಏಕೆಂದರೆ, ಕೊರೊನಾ ಸೋಂಕಿತರಿಗೆಲ್ಲ ಲಕ್ಷಣಗಳು ಬರುವುದಿಲ್ಲ. ಸರ್ಕಾರ ನಡೆಸಿದ ಇತ್ತೀಚಿನ ಸೆರೋ ಸಮೀಕ್ಷೆ ಪ್ರಕಾರ ದೇಶದ ಐದರಲ್ಲಿ ಒಬ್ಬರಿಗೆ, ಅಂದರೆ ಸುಮಾರು 25 ಕೋಟಿ ಜನರಿಗೆ ಕೊರೊನಾ ಸೋಂಕು ಬಂದಿದೆ. ಈ ಹಿಂದೆ ಲಾಕ್‌ಡೌನ್ ಹೇರಿದರೂ ಈ ಸೋಂಕು ತಡೆಯಲು ಆಗಲಿಲ್ಲ. ಈಗ ಮತ್ತೆ ಲಾಕ್‌ಡೌನ್ ಹೇರಿದರೂ ಆಗುವ ಪ್ರಯೋಜನ ಏನು? ಎಂದು ಕೆಲವರು ಕೇಳಬಹುದು.

ಆದರೆ, ಲಾಕ್‌ಡೌನ್ ರೀತಿಯ ಭಯಂಕರ ಅಸ್ತ್ರ ಬತ್ತಳಿಕೆ ಯಲ್ಲಿ ಇರುವಾಗ ಬಳಸದೇ ಇದ್ದರೆ ಆಗುತ್ತದೆಯೇ? ಕೊರೊನಾ ದಿಂದ ಜನರನ್ನು ಉಳಿಸಲಿಕ್ಕಾಗಿಯೇ ಸರ್ಕಾರ ಇದೆ. ಕೊರೊನಾ ದಿಂದ ಶತಾಯಗತಾಯ ಜನರನ್ನು ಉಳಿಸಿಯೇ ತೀರಲಿದೆ ಸರ್ಕಾರ. ಹೀಗಾಗಿ ತಾಳ, ತಂಬೂರಿ, ಗಂಟೆ, ಜಾಗಟೆ, ಮೊಬೈಲ್ ಟಾರ್ಚು, ದೀಪಾರತಿ ಎಲ್ಲದಕ್ಕೂ ಸಿದ್ಧರಾಗಿ. ಆದರೆ, ಯಾವುದೇ ಕಾರಣಕ್ಕೂ ಲಾಕ್‌ಡೌನ್ ವೇಳೆ ಕೆಲಸ ಇಲ್ಲ ಎಂದು ಮನೆಯಲ್ಲಿ ಪಕೋಡ ಮಾಡಲು ಹೋಗಬೇಡಿ, ಎಣ್ಣೆ ರೇಟು ಬಲು ಏಟು!


 ಅಸ್ಮಿತ ಎಸ್. ಶೆಟ್ಟರ್‌