ಅಜ್ಜಯ್ಯನ `ಶಿವರಾತ್ರಿ’ ಜಾತ್ರೆಗೆ `ಉಕ್ಕಡಗಾತ್ರಿ’ ಸಜ್ಜು

ಅಜ್ಜಯ್ಯನ `ಶಿವರಾತ್ರಿ’ ಜಾತ್ರೆಗೆ `ಉಕ್ಕಡಗಾತ್ರಿ’ ಸಜ್ಜು

ದಕ್ಷಿಣ ಭಾರತದ ಕಾಶಿ ಕ್ಷೇತ್ರವೆನಿಸಿಕೊಂಡು ಪವಾಡಗಳ ಪುಣ್ಯ ಭೂಮಿಯಾಗಿ, ಸುಕ್ಷೇತ್ರವಾಗಿರುವ ಉಕ್ಕಡಗಾತ್ರಿಯಿಂದಾಗಿ ಹರಿಹರ ತಾಲ್ಲೂಕು ರಾಜ್ಯ, ಹೊರ ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿದೆ.

ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಗದ್ದಿಗೆಯ ಮಹಿಮೆ ನಾಡಿನ ಜನಮನದಲ್ಲಿ ಗಟ್ಟಿಯಾಗಿ ಉಳಿದಿದೆ.

ಗಾಳಿ, ದೆವ್ವ, ಭೂತ, ಪಿಶಾಚಿ ಹಿಡಿದವರು ತಮ್ಮ ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವರು. ತುಂಗಭದ್ರಾ ನದಿಯಲ್ಲಿ ಬಿದ್ದು, ಒದ್ದೆ ಬಟ್ಟೆಯಲ್ಲಿ ಮೆಟ್ಟಿಲೇರಿ ಬರುತ್ತಲೇ ಆವರಿಸಿಕೊಂಡಿದ್ದ ಗ್ರಹವು ಬಡಿದಾಡ ತೊಡಗಿ, ಅಜ್ಜಯ್ಯನ ದರ್ಶನವಾದೊಡನೆ ಅವರಿಂದ ಬಿಟ್ಟು ಓಡುವ ಪದ್ಧತಿ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಉಕ್ಕಡಗಾತ್ರಿಗೆ ದುಃಖಿತರಾಗಿ ಬರುವ ಭಕ್ತರು ಬೇನೆ, ಬೇಸರಿಕೆಗಳಿಂದ ಬಳಲಿ ಅಜ್ಜಯ್ಯನ ದರ್ಶನ ಪಡೆದು, ತಮ್ಮ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಲು ಪ್ರತಿ ಅಮಾವಾಸ್ಯೆ, ಹುಣ್ಣಿಮೆ ಸೋಮವಾರ ಮತ್ತು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ತುಂಗಭದ್ರಾ ನದಿ ಉಕ್ಕೇರಿ ಬರುವಂತೆ ಬರುವ ಭಕ್ತರು ಭಕ್ತಿ ಪೂರ್ವಕ ಸೇವೆ ಸಲ್ಲಿಸಿ ದೈಹಿಕ, ಮಾನಸಿಕ, ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಪಡೆಯುತ್ತಾರೆ. ಅನೇಕ ಭಕ್ತರು ಸಂತಾನ ಭಾಗ್ಯ ಮತ್ತು ಮಂಗಳ ಕಾರ್ಯದಲ್ಲಿ ಯಶಸ್ಸು ಹೊಂದಿದ್ದಾರೆ.

ಈ ರೀತಿ ರಾಜ್ಯ-ಹೊರ ರಾಜ್ಯಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ಈ ಸುಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳೂ ನಡೆದಿವೆ. ಶ್ರೀ ಕರಿಬಸವೇಶ್ವರ ಅಜ್ಜಯ್ಯನಿಗೆ 250 ಕೆ.ಜಿ. ತೂಕದ ಬೆಳ್ಳಿ ರಥದಲ್ಲಿ ರಥೋತ್ಸವವೂ ಸಹ ನಡೆಯುತ್ತಾ ಬಂದಿದೆ. ಗರ್ಭಗುಡಿಯ ಸುತ್ತ 30 ಕೆ.ಜಿ. ಬೆಳ್ಳಿ ಕವಚ ನಿರ್ಮಿಸಲಾಗಿದೆ. ಈ ವರ್ಷ 7.50 ಲಕ್ಷ ರೂ. ವೆಚ್ಚದಲ್ಲಿ ಹಳೆಯ ರಥಕ್ಕೆ ಹೊಸ ತಂತ್ರಜ್ಞಾನದ ಸ್ಪರ್ಷ ನೀಡಿ, ಸುರಕ್ಷತೆಯ ದೃಷ್ಟಿಯಿಂದ ರಥಕ್ಕೆ ಪವರ್ ಸ್ಟೇರಿಂಗ್ ಅಳವಡಿಸಲಾಗಿದೆ. 

ಜಾತ್ರೆಗೆ ಸಿದ್ಧತೆ : ಇಂದಿನಿಂದ ಒಂದು ವಾರಗಳ ಕಾಲ ನಡೆಯುವ ಅಜ್ಜಯ್ಯನ ಶಿವರಾತ್ರಿ  ಜಾತ್ರಾ ಮಹೋತ್ಸವಕ್ಕೆ ಕ್ಷೇತ್ರದಲ್ಲಿ ಸಿದ್ಧತೆಗಳು ಪೂರ್ಣಗೊಂಡಿದ್ದು, ಜಾತ್ರೆಗೆ ಬರುವ ಭಕ್ತರ ವಾಸ್ತವ್ಯಕ್ಕೆ 350ಕ್ಕೂ ಹೆಚ್ಚು ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ 80 ಪ್ರತ್ಯೇಕ ಶೌಚಾಲಯ ಮತ್ತು ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆ ಅಲ್ಲದೇ, ಗದ್ದಿಗೆಯ ಬೃಹತ್ ಕಲ್ಯಾಣ ಮಂಟಪಗಳು ಸೇವೆಗೆ ಲಭ್ಯವಿದ್ದು, ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಕಲ ರೀತಿಯಲ್ಲೂ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಟ್ರಸ್ಟ್ ಕಮಿಟಿಯ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.

ಬಿಗಿ ಭದ್ರತೆ : ಎಸ್ಪಿ ಹನುಮಂತರಾಯ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಸಿಪಿಐ ಸತೀಶ್ ಅವರ ನೇತೃತ್ವದಲ್ಲಿ ಅಜ್ಜಯ್ಯನ ಜಾತ್ರೆಗೆ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಭಾರೀ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಪಿಎಸ್ಐ ವೀರಬಸಪ್ಪ ಕುಸುಲಾಪುರ ತಿಳಿಸಿದರು. 7 ಪಿಎಸ್ಐ, 22 ಎಎಸ್ಐ, 56 ಪೊಲೀಸ್ ಹೆಡ್ ಕಾನ್‌ಸ್ಟೇಬಲ್, 138 ಪೊಲೀಸ್  ಕಾನ್‌ಸ್ಟೇಬಲ್, 17 ಮಹಿಳಾ ಪೊಲೀಸ್ ಸಿಬ್ಬಂದಿ  ಹಾಗೂ 2 ಡಿಆರ್ ವ್ಯಾನ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ದಳದ ಒಂದು ವಾಹನ, ತುರ್ತು ಆರೋಗ್ಯ ಸೇವೆಗಾಗಿ 3 ಆಂಬುಲೆನ್ಸ್ ಮತ್ತು ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸ್ಥಳ ದಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ.

ರಥೋತ್ಸವ ಜರುಗುವ ಮಾರ್ಗದಲ್ಲಿ, ನದಿ ಪಾತ್ರದಲ್ಲಿ, ದೇವಸ್ಥಾನ, ಕಲ್ಯಾಣ ಮಂಟಪ, ಪಾರ್ಕಿಂಗ್ ಸ್ಥಳಗಳಲ್ಲಿ ಒಟ್ಟು 150 ಸಿಸಿ ಟಿವಿ ಕ್ಯಾಮರಾಗಳನ್ನು ದೇವಸ್ಥಾನದಿಂದಲೇ ಅಳವಡಿಸಲಾಗಿದ್ದು, ಕಳ್ಳತನ ತಡೆಗಟ್ಟುವ ಉದ್ದೇಶದಿಂದ ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಿಂದ ಕ್ರೈಂ ಸಿಬ್ಬಂದಿಗಳನ್ನು ಕರೆಸಲಾಗಿದೆ.

ಉಕ್ಕಡಗಾತ್ರಿಗೆ ಸೇರುವ 3 ಮಾರ್ಗಗಳಲ್ಲಿ ಒಟ್ಟು 70 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಕೂಡಾ 13 ಜನರೇಟರ್ ಮೂಲಕ  ಲೈಟಿಂಗ್ ವ್ಯವಸ್ಥೆ ಮಾಡಿದ್ದೇವೆ. ಜೊತೆಗೆ ತಾತ್ಕಾಲಿಕ ಹೊರ ಪೊಲೀಸ್ ಠಾಣೆ ನಿರ್ಮಿಸಿದ್ದು, 24×7 ಕಾರ್ಯ ನಿರ್ವಹಿಸಲಿದೆ. ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ  ಎಂದು ಪಿಎಸ್ಐ ವೀರಬಸಪ್ಪ ಮಾಹಿತಿ ನೀಡಿದರು.

ಈ ಬಾರಿ ವಿಶೇಷವಾಗಿ ಅಜ್ಜಯ್ಯನ ಗದ್ದುಗೆ ಇರುವ ಗರ್ಭ ಗುಡಿಯ ಗೋಡೆಗಳಿಗೆ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಹಿತ್ತಾಳೆ ಕವಚವನ್ನು ಅಳವಡಿಸಲಾಗಿದೆ. ಕವಚ ತುಂಬಾ ಆಕರ್ಷಣೀಯವಾಗಿದೆ  ಎಂದು ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ. 

ಕೋವಿಡ್ ಕಾರಣದಿಂದಾಗಿ ಈ ವರ್ಷ ಜಾತ್ರೆಯನ್ನು ಸರಳವಾಗಿ ಹಮ್ಮಿಕೊಂಡಿದ್ದು, ಜಾತ್ರೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು ಮತ್ತು ಜಾತ್ರೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರನ್ನು ಹಾಗೂ 10 ವರ್ಷದೊಳಗಿನ ಮಕ್ಕಳನ್ನು ಜಾತ್ರೆಗೆ ಕರೆ ತರಬಾರದೆಂದು ಸುರೇಶ್ ಮನವಿ ಮಾಡಿದ್ದಾರೆ.

ಜಾತ್ರೆಗೆ ಅಗತ್ಯ ಸಿದ್ಧತೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕೈಗೊಳ್ಳಲಾಗಿದೆ. ಗ್ರಾ.ಪಂ.ನಿಂದ ಸ್ವಚ್ಛತಾ ಕಾರ್ಯ ನಡೆದಿದ್ದು, ಆರೋಗ್ಯ ಇಲಾಖೆಯಿಂದಲೂ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗಿದೆ.

ಸ್ವಚ್ಛತಾ ದೃಷ್ಟಿಯಿಂದ ಆವರಣದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಸ್ವಚ್ಛತೆ ಹಿನ್ನೆಲೆಯಲ್ಲಿ ಆವರಣದಲ್ಲಿ ತೆಂಗಿನಕಾಯಿ ಒಡೆಯುವುದು, ಎಲ್ಲೆಂದರಲ್ಲಿ ನಿಂಬೆಹಣ್ಣು ತುಳಿಯುವುದು, ಒದ್ದೆ ಬಟ್ಟೆಯಲ್ಲಿ ಉರುಳು ಸೇವೆ ಮಾಡುವುದು, ನದಿಯಲ್ಲಿ ಬಟ್ಟೆ ಮತ್ತು ಫೋಟೋಗಳನ್ನು ಬಿಸಾಡುವುದನ್ನು ನಿಷೇಧಿಸಲಾಗಿದೆ.

ಜಾತ್ರಾ ಕಾರ್ಯಕ್ರಮಗಳು : ಅಜ್ಜಯ್ಯನ ಜಾತ್ರೆಯ ಮೊದಲ ದಿನವಾದ ಇಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಕರಿಬಸವೇಶ್ವರ ಸ್ವಾಮಿ ಗದ್ದುಗೆಯ ಪೂಜೆ, ನಂದಿ ಧ್ವಜಾರೋಹಣ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುವುದು. ಇದೇ ದಿನ ರಾತ್ರಿ 8.30ಕ್ಕೆ  ಜಾಗರಣೆ, ಭಜನೆ ಮತ್ತು ಕೀರ್ತನೆ ನಡೆಯಲಿವೆ. ದಿನಾಂಕ 14ರ ಭಾನುವಾರ ಬೆಳಿಗ್ಗೆ 8.30ಕ್ಕೆ ಶ್ರೀ ನಂದಿಗುಡಿ ವೃಷಭಪುರಿ ಸಂಸ್ಥಾನ 1108 ಜಗದ್ಗುರು ಶ್ರೀ ಶ್ರೀ ಸಿದ್ಧರಾಮೇಶ್ವರ ದೇಶಿಕೇಂದ್ರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ರಥೋತ್ಸವದ ಮಹಾಪೂಜೆ, ನಂತರ ಸಕಲ ವೈಭವಗಳೊಂದಿಗೆ ಮಹಾ ರಥೋತ್ಸವ ಪ್ರಾರಂಭವಾಗಲಿದೆ.

ದಿನಾಂಕ 15, 16, 17 ರಂದು ಜವಳ, ಹರಕೆ, ಕಾಣಿಕೆ, ಬಯಲು ಜಂಗೀ ಕುಸ್ತಿಗಳು,  18ರ ಗುರುವಾರ ಫಳಾರ ಹಾಕಿಸುವುದು, 19 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಅಜ್ಜಯ್ಯನ ಬೆಳ್ಳಿ ರಥೋತ್ಸವ ಜರುಗಲಿದ್ದು, ರಾತ್ರಿ ಪಾಲಿಕೋತ್ಸವ ನಡೆಯಲಿದೆ. ಇದೇ ದಿನಾಂಕ 20 ರ ಶನಿವಾರ ಬೆಳಿಗ್ಗೆ ಭಕ್ತರಿಗೆ ಫಳಾರ ಹಂಚುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಗುವುದು.


ಜಿಗಳಿ ಪ್ರಕಾಶ್,
jigaliprakash@gmail.com