ಮೌನ ಮಾತಾಡುತಿದೆ…

ಮೌನ ಮಾತಾಡುತಿದೆ…

ಸ್ಪರ್ಧೆಯ ಬಿಡಿ ಒಗ್ಗಟ್ಟಾಗಿ… ಯಾವುದೇ ಒಂದು ಉತ್ಪನ್ನ ತಯಾರಾಗಬೇಕಾದರೆ ಅದಕ್ಕೆ ಒಂದು ಕಾರ್ಖಾನೆ ಇರುತ್ತದೆ. ಯಾರೋ ಒಬ್ಬರು ತಮ್ಮ ಕಲ್ಪನೆ ಮತ್ತು ಯೋಚನೆಗಳನ್ನು ಮೇಳೈಸಿ ಚಿತ್ರ ಬಿಡಿಸಿಕೊಂಡು (ಡಿಸೈನ್‌ ಮಾಡಿಕೊಂಡು) ಒಬ್ಬ ಉತ್ಪಾದಕನ ಬಳಿ ಬರುತ್ತಾರೆ. ಆ ಉತ್ಪಾದಕ ಮಾಡಿ ಕೊಡುವುದಾಗಿ ಹೇಳುತ್ತಾರೆ. ಅದಕ್ಕೆ ಒಂದು ಬೆಲೆಯನ್ನು ತಿಳಿಸಲು ಹೇಳುತ್ತಾರೆ. ಈಗ ಬೆಲೆ ಎಷ್ಟು ಹೇಳುವುದು?

ಅತಿ ಮುಖ್ಯವಾದ ವಿಷಯ ಇದೆ. ಬೆಲೆ ನಿಗದಿ ಮಾಡುವಾಗ ಹೆಚ್ಚಾಗಿ ಮಾಡಿದರೆ ಅವರು ನಮಗೆ ಕೆಲಸ ಕೊಡುವುದಿಲ್ಲ. ಕಡಿಮೆಯಾದರೆ ನಷ್ಟವಾಗುತ್ತದೆ. ಹಾಗಾದರೆ ಏನು ಮಾಡುವುದು? ಮೊದಲು ನಿಗದಿತ ಬೆಲೆಗಳ ಕುರಿತು ಯೋಚಿಸಬೇಕು. 

ಸಾಧ್ಯವಾದರೆ ಕಾರ್ಖಾನೆ ಮಾಲೀಕರು ಸಂಘಟನೆಯನ್ನು ಮಾಡಿಕೊಳ್ಳಬೇಕು. ಮತ್ತು ಯಾವ ಯಂತ್ರದ ಮೇಲೆ ಯಾವ ವಸ್ತುಗಳಿಗೆ ಯಾವ ಕೆಲಸಕ್ಕೆ ಎಷ್ಟು ಬೆಲೆ ಎಂದು ಚರ್ಚಿಸಬೇಕು. ಎಲ್ಲೇ ಹೋದರು ಅಷ್ಟೇ ಬೆಲೆ ಆಗುವುದು ಎಂಬ ಖಾತ್ರಿ ಆದರೆ ಸ್ವಲ್ಪ ಸ್ಪರ್ಧೆಗಳು ಕಡಿಮೆಯಾಗುತ್ತವೆ. ಸ್ಪರ್ಧೆಗಳು ಉದ್ಯೋಗದಲ್ಲಿ ಹೆಚ್ಚಾದಂತೆ ದುಡಿಯುವವರಿಗೆ ಬರೆ ಎಳೆದಂತಾಗುತ್ತದೆ. ಇಂದು ಹತ್ತು ರೂಪಾಯಿಗೆ ಮಾಡುವುದು ನಾಳೆ ಮತ್ತೊಬ್ಬ ಒಂಬತ್ತು ರೂಪಾಯಿಗೆ ಮಾಡುತ್ತೇನೆ ಎನ್ನುತ್ತಾನೆ. ನಾಡಿದ್ದು ಇನ್ನೊಬ್ಬ ಎಂಟು ರೂಪಾಯಿ ಎನ್ನುತ್ತಾನೆ. ಹೀಗೆ ಬೆಲೆ ಕಡಿಮೆ ಮಾಡಿದಷ್ಟು ದೊಡ್ಡ ಕಾರ್ಖಾನೆದಾರರು ನಿರಾಳರಾಗುತ್ತಾರೆಯೇ ಹೊರತು, ಸಣ್ಣ ಕಾರ್ಖಾನೆದಾರರಲ್ಲ. ಎಷ್ಟೋ ಸಣ್ಣ ಕಾರ್ಖಾನೆಯವರು ದುಡ್ಡಿಲ್ಲದೇ ಪರದಾಡುವುದನ್ನು ನೋಡಿದ್ದೇನೆ. ಹಾಗೆಂದು ಅವರು ದುಡಿಯುವುದಿಲ್ಲ ಎಂದಲ್ಲ. ದುಡಿಮೆಗೆ ಯೋಗ್ಯ ಬೆಲೆ ಪಡೆಯಲಾಗುವುದಿಲ್ಲ ಎಂದು. ಹದಿನೈದು ರೂಪಾಯಿಗೆ ಆಗುತ್ತಿದ್ದ ಒಂದು ಕೆಲಸವನ್ನು ಒಂದುವರೆ ರೂಪಾಯಿಗೆ ಮಾಡುತ್ತೇನೆ ಎಂದು ಹೇಳಿ ಸ್ಪರ್ಧೆಗೆ ಬಂದು ಇಡೀ ಮಾರುಕಟ್ಟೆಯನ್ನೇ ಹಾಳು ಮಾಡಿ, ತಾವೂ ಮಣ್ಣು ತಿಂದು ಹೋದವರಿದ್ದಾರೆ. ನಿಜವಾಗಿಯೂ ಬೆಲೆಗಳ ಬಗ್ಗೆ ಅಧ್ಯಯನವಿರುವುದಿಲ್ಲ. ಒಟ್ಟಾರೆ ದುಡ್ಡು ಬಂದರಾಯ್ತು ಅನ್ನುವಂತೆ ಹೇಳಿ ಬಿಡುವುದು. ಆಳಿರದೆ ಸ್ವತಃ ಮಾಡಿದರೂ  ವಿದ್ಯುತ್ ವ್ಯತ್ಯಯ, ಎಣ್ಣೆ ಇತ್ಯಾದಿ ಉಪಕರಣಗಳ ವೆಚ್ಚಗಳೆಲ್ಲವನ್ನು ತೆಗೆದು ತಮ್ಮ ಸಂಬಳ ಬರುವಷ್ಟಾದರೂ ದುಡ್ಡನ್ನು ನಿಗದಿ ಮಾಡಬೇಕು.

ಇನ್ನೂ ಆಳುಗಳಿದ್ದರೆ ಆಳಿನ ಸಂಬಳ ಕೊಟ್ಟು ಮಾಲೀಕರಿಗೆ ಉಳಿಯುವಂತಿರಬೇಕು. ಒಂದು ವೇಳೆ ಸುಖಾ ಸುಮ್ಮನೆ ಬೆಲೆ ಇಳಿಸುತ್ತಾ ಹೋದರೆ ಅದು ಕೂಡ ಅಪಾಯವೇ. ಇದು ಮಾರುಕಟ್ಟೆ ಹಾಳು ಮಾಡುವುದಲ್ಲದೇ ಮತ್ತೇನೂ ಅಲ್ಲ. ಸರಿಯಾದ ಬೆಲೆ ಸಿಕ್ಕರೆ ಕೆಲಸಗಾರರಿಗೆ ಹೆಚ್ಚಿನ ಸಂಬಳ ಸಿಗುವುದು. ಅವರಿಗೆ ಇಎಸ್‍ಐ, ಪಿಎಫ್‍ನಂತಹ ಸೌಕರ್ಯಗಳನ್ನು ಒದಗಿಸಬಹುದು. ಅವರಿಗೂ ಖುಷಿಯಾಗುತ್ತದೆ. ಅವರಲ್ಲೂ ಒಂದು ವಿಶ್ವಾಸ ಜಾಗೃತವಾಗುತ್ತದೆ. ಅವರು ಕೂಡ ಉತ್ಪನ್ನ ಕ್ಷೇತ್ರವನ್ನು ತ್ಯಜಿಸಿ ಹೊರ ಹೋಗುವುದಿಲ್ಲ.

ಈಗಂತೂ ದಿನೇ ದಿನೇ ಎಲ್ಲದರ ಬೆಲೆ ಹೆಚ್ಚಾಗುತ್ತಿದೆ. ಉತ್ಪಾದಕರು ಬದುಕಬೇಕೆಂದರೆ ಬೆಲೆ ಹೆಚ್ಚಿಸಿಕೊಳ್ಳುವ ಅವಶ್ಯಕತೆ ತಲೆದೋರಿದೆ. ಈಗ ಸ್ಪರ್ಧೆಗೆ ನಿಂತರೆ ಮೊದಲೇ ಎಲ್ಲವನ್ನು ಕಳಚಿ ಚಡ್ಡಿ ಮೇಲೆ ನಿಂತ ಬದುಕು ದಿಗಂಬರವಾಗುತ್ತದೆ ಅಷ್ಟೇ. “ಹಿಡಿ ಕಾಳಾದರೆ ಬಾಳುವೆವು ಬಿಡಿ ಕಾಳಾದರೆ ಸಾಯುವೆವು.” ಎಂದು ರಾಣಿ ಚೆನ್ನಮ್ಮ ಸೈನಿಕರನ್ನು ಹುರಿದುಂಬಿಸಿ ಯುದ್ದ ಮಾಡಿದ್ದಳು. ನಾವು ಬದುಕಬೇಕೆಂದರೆ ಹಿಡಿ ಕಾಳಾಗುವ ಅವಶ್ಯಕತೆ ತುಂಬಾ ಇದೆ. ಒಂದು ವೇಳೆ ಸ್ಪರ್ಧೆಯೇ ಮುಖ್ಯವೆನ್ನುವುದಾದರೆ ನಗ್ನವಾಗಲು ಸಿದ್ದರಾಗಿರಿ. ಕೆಲಸ ನೀಡುವವರು ಧನಿಕರಾಗಿಯೇ ಇರುತ್ತಾರೆ. ಮತ್ತೂ ಧನಿಕರಾಗುತ್ತಾರೆ.


ಇಂದ್ರ (ಧರಣೇಂದ್ರ ದಡ್ಡಿ)
ಬೆಳಗಾವಿ.
dharanendradaddi543@gmail.com