ಕಾರ್ಖಾನೆ, ಬಾಯ್ಲರ್‌ಗಳ ಇಲಾಖೆ ಉಪನಿರ್ದೇಶಕ, ಕಚೇರಿ, ಮನೆ ಮೇಲೆ ಎಸಿಬಿ ದಾಳಿ

ದಾವಣಗೆರೆ, ಮಾ.9- ಕಾರ್ಖಾನೆಗಳು ಮತ್ತು ಬಾಯ್ಲರ್‌ಗಳ ಇಲಾಖೆಯ ಉಪ ನಿರ್ದೇಶಕರ ಕಚೇರಿ ಹಾಗೂ ಉಪ ನಿರ್ದೇಶಕರ ಬೆಂಗಳೂರಿನ ಸಂಜಯ ನಗರ ನಿವಾಸ ಸೇರಿದಂತೆ ಮೂರು ಕಡೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ತಂಡವು ಇಂದು ಏಕಕಾಲಕ್ಕೆ ದಾಳಿ ನಡೆಸಿದೆ.

ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕ ಜಯಪ್ರಕಾಶ್ ನೇತೃತ್ವದ ತಂಡವು ನಗರದ ಹಳೆ ಪಿ.ಬಿ. ರಸ್ತೆಯ ಹಳೆ ಅಪೂರ್ವ ಹೋಟೆಲ್ ಹಿಂಭಾಗದಲ್ಲಿರುವ ಕಾರ್ಖಾನೆಗಳ ಮತ್ತು ಬಾಯ್ಲರ್‌ಗಳ ಇಲಾಖೆಯ ಉಪ ನಿರ್ದೇಶಕ ಕೆ.ಎಂ. ಪ್ರಥಮ್‌ ಅವರ ನಗರದ ಇಲಾಖೆ ಕಚೇರಿ ಹಾಗೂ ಬೆಂಗಳೂರಿನ ಸಂಜಯ್ ನಗರದಲ್ಲಿ ಸ್ವಂತ ಮನೆ ಹಾಗೂ ಅವರ ತಾಯಿಯ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಅಕ್ರಮ ಆಸ್ತಿ, ದಾಖಲೆ ಪತ್ರ ಗಳು ಪರಿಶೀಲಿಸಿ, ಇತರೆ ಮಾಹಿತಿಯನ್ನು ಕಲೆ ಹಾಕಿತು. ದಾಳಿ ಬಗ್ಗೆ ಯಾವುದೇ ಮಾಹಿತಿ ಬಿಟ್ಟು ಕೊಟ್ಟಿಲ್ಲ. 

ಅಕ್ರಮ ಆಸ್ತಿ ಗಳಿಕೆ, ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಈ ಪೈಕಿ ಕಾರ್ಖಾನೆಗಳ ಮತ್ತು ಬಾಯ್ಲರ್‌ಗಳ ಇಲಾಖೆ
ಉಪ ನಿರ್ದೇಶಕ ಕೆ.ಎಂ. ಪ್ರಥಮ್ ನಿವಾಸದ ಮೇಲೆಯೂ ದಾಳಿಯಾಗಿದ್ದು, ದಾಖಲೆ, ಕಡತಗಳು, ಆಸ್ತಿ ಕುರಿತಂತೆ ಪರಿಶೀಲನೆ ನಡೆಸಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.