ಮುನ್ನ…

ಮುನ್ನ…

ನೇಸರ ಮೂಡುವ ಮುನ್ನ
ಹಾಸಿಗೆ ಬಿಟ್ಟು ಏಳಬೇಕು
ಹೊಸಿಲು ದಾಟುವ ಮುನ್ನ
ಪಶುಪತಿಯ ನೆನೆಯಬೇಕು.

ತಾಸು ಕಳೆಯುವ ಮುನ್ನ
ಕಾಸನು ದುಡಿದು ಗಳಿಸಬೇಕು
ಉಸಿರು ನಿಂತು ಹೋಗುವ ಮುನ್ನ
ಹಸುವಂಗೆ ನಾವು ಬಾಳಬೇಕು.

ಐಸಿರಿ ಬರಿದಾಗುವ ಮುನ್ನ
ತುಸು ದಾನಧರ್ಮ ಮಾಡಬೇಕು
ನಸೀಬು ಕೈಕೊಡುವ ಮುನ್ನ
ರಿಸಿಯಂತೆ ನಾವಾಗಬೇಕು.

ಹುಸಿ ನುಡಿಯಾಡುವ ಮುನ್ನ
ವಸಿ ಯೋಚಿಸಿ ಆಡಬೇಕು
ಕೆಸರು ಎರಚುವ ಮುನ್ನ
ಕಸಿವಿಸಿಯಾಗುವುದ ತಿಳಿಬೇಕು.

ಮೊಸರು ಮಜ್ಜಿಗೆ ಮಾಡುವ ಮುನ್ನ
ಕಡೆದು ಬೆಣ್ಣೆಯ ತೆಗೆಯಬೇಕು
ಸಸಿಯ ಬೀಜ ಬಿತ್ತುವ ಮುನ್ನ
ಕೃಷಿ ಭೂಮಿಯ ಸತ್ವವರಿಯಬೇಕು.

ಬಾಳಿನ ಗುರಿಯ ಶಿಖರವೇರುವ ಮುನ್ನ
ಕಲ್ಲುಮುಳ್ಳಿನ ದಾರಿಯ ತುಳಿಯಬೇಕು
ಶಿವನ ಮಾತಿಗೆ ಹೌದೆನ್ನುವ ಮುನ್ನ
ಜೀವನ ತತ್ವಗಳನು ಪಾಲಿಸಬೇಕು.


ಶಿವಮೂರ್ತಿ.ಹೆಚ್., ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವ ಮಂಟಪ, ದಾವಣಗೆರೆ.
shivamurthyh2012@gmail.com