ಸಫಾಯಿ ಕರ್ಮಚಾರಿಗಳ ನಿಗಮಕ್ಕೆ 1500 ಕೋಟಿ ರೂ. ಬೇಡಿಕೆ

ನಿಗಮದ ಅಧ್ಯಕ್ಷ ಹನುಮಂತಪ್ಪ

ದಾವಣಗೆರೆ, ಫೆ. 13- ರಾಜ್ಯ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮಕ್ಕೆ 1,500 ಕೋಟಿ ರೂ.ಗಳ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವೂ ಸೇರಿದಂತೆ ಈ ಹಿಂದಿನ ಸರ್ಕಾರಗಳು ನಿಗಮಕ್ಕೆ ಕೆಲವೇ ಕೋಟಿಗಳ ಅನುದಾನ ನೀಡಿವೆ. ಸುಮಾರು 30 ಲಕ್ಷ ಜನಸಂಖ್ಯೆಯುಳ್ಳ ಸಫಾಯಿ ಕರ್ಮಚಾರಿ ಸಮುದಾಯಕ್ಕೆ ಈ ಅನುದಾನ ಯಾವುದಕ್ಕೂ ಸಾಲದು ಎಂದು ಹೇಳಿದರು.

ನಿಗಮದಿಂದ ಕೇವಲ ಸಾಲ ನೀಡಿದರೆ ಸಾಲದು. ಸಣ್ಣ ಕೈಗಾರಿಕಾ ವಲಯಕ್ಕೆ ಸಬ್ಸಿಡಿ ರೂಪದಲ್ಲಿ ಸಾಲ ನೀಡಬೇಕು. ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕು. ವಸತಿ ಮತ್ತು ಮೂಲ ಸೌಕರ್ಯ ಒದಗಿಸಬೇಕು. ಕೃಷಿಯಲ್ಲಿ ಆಸಕ್ತಿ ಇರುವವರಿಗೆ 1 ಎಕರೆ ನೀರಾವರಿ ಅಥವಾ 2 ಎಕರೆ ಖುಷ್ಕಿ ಭೂಮಿ ನೀಡುವ ಭೂ ಒಡೆತನ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದೆ.

ಸಮುದಾಯದವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ ಮಾಜಿ ಶಾಸಕ ಐಪಿಡಿ ಸಾಲಪ್ಪ ಅವರ ಹೆಸರಿನಲ್ಲಿ ರೂ.3 ಕೋಟಿ ಅನುದಾನದಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಿಸುವ ಚಿಂತನೆ ಇದೆ. ಸಮುದಾಯದ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಅಗತ್ಯವಾದ ಎಲ್ಲಾ ಖರ್ಚುಗಳನ್ನು ನಿಗಮದಿಂದ ಭರಿ ಸಬೇಕೆಂಬ ಆಲೋಚನೆ ಹೊಂದಲಾಗಿದೆ. ಈ ಎಲ್ಲಾ ಖರ್ಚುಗಳಿಗೆ ಕನಿಷ್ಟ 1500 ಕೋಟಿ ರೂ.ಗಳ ಅಗತ್ಯವಿದೆ ಎಂದು ವಿವರಿಸಿದರು.

ಸಫಾಯಿ ಕರ್ಮಚಾರಿಗಳಿಗೆ ತಿಂಗ ಳೊಳಗೆ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ನೀಡುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ. ನಿಗಮ ಹಾಗೂ ಸಫಾಯಿ ಕರ್ಮಚಾರಿ ಅಭಿವೃದ್ದಿ ಆಯೋಗದಿಂದ ಚರ್ಚಿಸಿ, ಸಮುದಾಯಕ್ಕೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುನರ್ ಸಮೀಕ್ಷೆ: 2013ರಲ್ಲಿ  ಸಫಾಯಿ ಕರ್ಮಚಾರಿಗಳ ಸಮೀಕ್ಷೆ ನಡೆದಿತ್ತು. ಇದೀಗ ಪುನರ್ ಸಮೀಕ್ಷೆ ಮಾಡಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಕಾನೂನು ಶಾಲೆಗೆ ಸಮೀಕ್ಷೆ ಮಾಡುವ ಜವಾಬ್ದಾರಿ ನೀಡಲಾಗಿದೆ ಎಂದರು. ಆಸ್ತಿ ತರಿಗೆಯಲ್ಲಿ ಶೇ.1ರಷ್ಟು ಸೆಸ್ ಹಣವನ್ನು ನೇರವಾಗಿ ನಿಗಮಕ್ಕೆ ನೀಡಲು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಅವರು ಹೇಳಿದರು.

ಮುಖಂಡರಾದ ಎಲ್.ಹೆಚ್. ಹನುಮಂತಪ್ಪ, ಎಲ್.ಡಿ. ಗೋಣೆಪ್ಪ, ಗಂಗಾಧರ್, ಶಂಕರ್, ನಿರಂಜನಮೂರ್ತಿ, ನೀಲಗಿರಿಯಪ್ಪ ಹಾಗೂ ಇತರರು ಉಪಸ್ಥಿತರಿದ್ದರು.