ರಾಮಕೃಷ್ಣಾಶ್ರಮದಿಂದ ಸ್ವಚ್ಛತಾ ಅಭಿಯಾನ

ರಾಮಕೃಷ್ಣಾಶ್ರಮದಿಂದ ಸ್ವಚ್ಛತಾ ಅಭಿಯಾನ

ರಾಣೇಬೆನ್ನೂರು, ಫೆ.13- ಇಲ್ಲಿನ ರಾಮಕೃಷ್ಣಾಶ್ರಮದ ಪ್ರಕಾಶಾನಂದ ಮಹಾರಾಜರು ಸಮಾಜದ ಅಭಿವೃದ್ಧಿಯ ಚಿಂತನೆಯಲ್ಲಿ ತೊಡಗಿಕೊಂಡಿದ್ದು, ಸ್ವಚ್ಛತೆಯ ಮೂಲಕ ಜನರಲ್ಲಿ ಅರಿವು ಮೂಡಿಸುವುದರೊಂದಿಗೆ ಸ್ವಚ್ಛ ಸುಂದರ ರಾಣೇಬೆನ್ನೂರು ಅಭಿಯಾನ ಆರಂಭಿಸಿದ್ದಾರೆ.

ಮಂಗಳೂರು ರಾಮಕೃಷ್ಣ ಮಿಷನ್‌ನ ಏಕಗಮ್ಯಾನಂದಜಿ ಅವರು ಅಲ್ಲಿ ಆರಂಭಿಸಿರುವ ಮಂಗಳೂರು ಅಭಿಯಾನದ ಪ್ರೇರಣೆಯ ಫಲವೇ ಈ ಅಭಿಯಾನವಾಗಿದ್ದು, ಅದಕ್ಕಾಗಿ ಉತ್ಸಾಹಿಗಳ ತಂಡವೊಂದನ್ನು ರಚಿಸಿದ್ದಾರೆ. 

ತಂಡದಲ್ಲಿ ಸಂಚಾಲಕರಾಗಿ ಡಾ. ಗಿರೀಶ್ ಕೆಂಚಪ್ಪನವರ, ಡಾ. ಚಂದ್ರಶೇಖರ ಕೇಲಗಾರ, ಡಾ. ಪ್ರವೀಣ್ ಖನ್ನೂರ, ಸೋಮಶೇಖರ್ ಮುಂಡರಗಿ, ಮಲ್ಲಿಕಾರ್ಜುನ ಅಂಗಡಿ, ಲತಾ ನಿಟ್ಟೂರ ಹಾಗೂ ಸುಮಾ ಉಪ್ಪಿನ   ಪ್ರಮುಖರಾಗಿದ್ದು, ವಿವೇಕಾನಂದರ ಜಯಂತಿ ದಿನವಾದ ಜನವರಿ 12 ರಿಂದ ಕಾರ್ಯಾಚರಣೆ ನಡೆದಿದೆ.

ತಂಡವು ನಗರಸಭೆ ಸದಸ್ಯರು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ವಾರ ಕ್ಕೊಮ್ಮೆ ನಗರದಾದ್ಯಂತ ಸ್ವಚ್ಛತೆ ಮಾಡುವುದು, ಪ್ರತಿ ಮನೆಯ ಒಣಕಸ ನಗರಸಭೆ ಗಾಡಿಗೆ ಹಾಕಿ ಹಸಿ ಕಸ ದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಲು ತಿಳುವಳಿಕೆ ನೀಡುವುದು, ಹಸಿ ಹಾಗೂ ಒಣಕಸ ವಿಂಗಡಿಸಿ ಮರು ಸಂಸ್ಕರಣೆ ಮಾಡಲು ಘಟಕ ಸ್ಥಾಪಿಸುವುದು ಮತ್ತು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಖಾಲಿ ಇರುವ ಗೋಡೆಗಳ ಮೇಲೆ ಕಲಾವಿದರಿಂದ ಚೆಂದದ ಚಿತ್ತಾರ ಬಿಡಿಸಿ ನಗರದ ಸೌಂದರ್ಯ ಹೆಚ್ಚಿಸುವ ಕೆಲಸ ನಿರ್ವಹಿಸುತ್ತಿದೆ.