ಕುಡಿಯಲಿಕ್ಕಿರಲಿ ಕುಂದುವಾಡ ಕೆರೆ

ಕುಡಿಯಲಿಕ್ಕಿರಲಿ ಕುಂದುವಾಡ ಕೆರೆ

ಅನ್ಯ ಅಭಿವೃದ್ಧಿಗಳಿಗೆ ಬೇರೆ ಕೆರೆಗಳನ್ನು ಹುಡುಕಿಕೊಳ್ಳಿ

ಕುಂದುವಾಡ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಅದರಲ್ಲಿನ ನೀರು ಖಾಲಿ ಮಾಡುತ್ತಿರುವಂತೆಯೇ ನಗರದ ಜನತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಚಿಂತೆ ಆರಂಭವಾಗಿದೆ. ಜಲಸಿರಿ ಯೋಜನೆಯಿಂದ 24×7 ನೀರು ಬರುವುದು ಎಂದೋ ಗೊತ್ತಿಲ್ಲ, ಆದರೆ ಸದ್ಯಕ್ಕೆ ಎಂದಿನಂತೆ ವಾರಕ್ಕೊಮ್ಮೆ ನೀರು ಸಿಕ್ಕರೆ ಸಾಕು ಎಂದು ಮಾತನಾಡಿಕೊಳ್ಳುವಂತಾಗಿದೆ.

ನಗರದ ಕುಡಿಯುವ ನೀರಿಗಾಗಿ ಕುಂದುವಾಡ ಕೆರೆಯನ್ನು ಪರಿವರ್ತಿಸಲಾಗಿತ್ತು. ಆದರೆ, ಅದರ ಜೊತೆಗೇ ಕುಂದುವಾಡ ಕೆರೆಯನ್ನು ಮುಂಜಾನೆಯ ವಿಹಾರಕ್ಕೂ ಅನುಕೂಲವಾಗುವಂತೆ ದಂಡೆ ನಿರ್ಮಿಸಲಾಯಿತು. ಸಮಸ್ಯೆಯ ಮೂಲ ಇಲ್ಲಿದೆಯೇ ಎಂಬ ಅನುಮಾನಗಳು ಈಗ ಮೂಡುತ್ತಿವೆ.

ಕೆರೆಗೆ ಬಂದವರು ಕುಳಿತುಕೊಳ್ಳಲು ಕುರ್ಚಿ, ಬರುವವರ ಆಶ್ರಯಕ್ಕೆ ಮರ, ಕುಳಿತುಕೊಳ್ಳಲು ಕುರ್ಚಿ, ನೋಡಲು ಚಂದಗಾಣಿಸಲು ಸಿಮೆಂಟ್ ಆಕೃತಿಗಳು,  ಕಾರಂಜಿ… ಹೀಗೆ ಒಂದಕ್ಕೊಂದು ಸೇರಿಕೊಂಡು ಹಲವು ಅ(ನ)ಗತ್ಯಗಳು ಕೆರೆಯಲ್ಲಿ ಸೃಷ್ಟಿಯಾದವು.

ಜೊತೆಗೆ ಹೊರಗಿನಿಂದ ಬಂದ ಪಕ್ಷಿಗಳು ಸೇರಿಕೊಂಡವು. ಈ ಪಕ್ಷಿಗಳಿಗಾದರೂ ಈಗ ಮೀನುಗಳು ಇರಲೇಬೇಕಿದೆ. ಮುಂದಿನ ದಿನಗಳಲ್ಲಿ ದೀಪದ ಬೆಳಕಿಂದ ಕೆರೆ ಝಗಮಗಿಸಲಿದೆಯಂತೆ. ಸೈಕಲ್ ಪಾತ್ ಬರುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತಿನ್ಯಾವ ಪಾತ್‌ಗಳು ಬರುತ್ತವೋ ಗೊತ್ತಿಲ್ಲ.

ಈ ಕೆರೆಯ ನೀರು ಖಾಲಿಯಾದರೆ, ನಗರ ಟಿವಿ ಸ್ಟೇಷನ್ ಕೆರೆ ಹಾಗೂ ಹರಿಹರದ ನದಿಯ ರಾಜನಹಳ್ಳಿ ಜಾಕ್‌ವೆಲ್‌ ಅವಲಂಬಿಸಬೇಕಿದೆ. ಟಿವಿ ಸ್ಟೇಷನ್ ಕೆರೆ ನೀರು ಎಷ್ಟು ದಿನ ಬರುತ್ತದೋ ಗೊತ್ತಿಲ್ಲ. ಬೇಸಿಗೆಯಲ್ಲಿ ನದಿ ನೀರು ಅಲಭ್ಯ. ಸಾಲದೆಂಬಂತೆ ಭದ್ರಾ ಅಣೆಕಟ್ಟೆ ಈಗ ಮೇಲ್ದಂಡೆಗೂ ನೀರು ಹರಿಸಬೇಕಿದೆ. ಹೀಗಾಗಿ ಚಾನಲ್‌ನಲ್ಲಿ ಎಷ್ಟು ನೀರು ಸಿಗುತ್ತದೋ ಗೊತ್ತಿಲ್ಲ.

ಇದೆಲ್ಲದರ ನಡುವೆ ನೀರಿನ ಸಮಸ್ಯೆ ಭುಗಿಲೆದ್ದರೆ ಬಡ ಜನರೇ ಹೆಚ್ಚಿನ ಕಷ್ಟ ಎದುರಿಸಬೇಕಿದೆ. ಕೊಡಪಾನಗಳನ್ನು ಹಿಡಿದು ನೀರಿಗೆ ಅಲೆದಾಡುವ ಆ ದಿನಗಳನ್ನು ಕಾಣಬೇಕಾಗಬಹುದು ಎಂಬ ಕಳವಳ ಜನಸಾಮಾನ್ಯರಲ್ಲಿದೆ.

ಇದೆಲ್ಲದರ ನಡುವೆ ಮೂಡುವ ಪ್ರಶ್ನೆ ಎಂದರೆ, ಕುಂದುವಾಡ ಕೆರೆ ಇರುವುದು ಏಕೆ? ಮೂಲತಃ ಈ ಕೆರೆ ಇರುವುದು ಕುಡಿಯುವ ನೀರಿನ ಉದ್ದೇಶಕ್ಕೆ. ಹೀಗಿರುವಾಗ ಅಲ್ಲಿ ಬೆಳಕಿದ್ದರೇನು ಇಲ್ಲದಿದ್ದರೇನು? ವಾಕಿಂಗ್ ಪಾತ್ ಇದ್ದರೇನು ಬಿಟ್ಟರೇನು? ಕಾರಂಜಿ – ಕುರ್ಚಿ ಏನು ಮಾಡಬೇಕು?

ಟಿವಿ ಸ್ಟೇಷನ್ ಕೆರೆ ಹಿಂದಿನಿಂದಲೂ ಶುದ್ಧವಾಗಿ ಕುಡಿಯುವ ನೀರಿಗೆ ಮಾತ್ರ ಉಳಿದುಕೊಂಡಿದೆ. ಆದರೆ, ಕುಂದುವಾಡ ಕೆರೆಯನ್ನು ವಿವಿಧೋದ್ದೇಶದ ಕೆರೆಯಾಗಿ ಪರಿವರ್ತಿಸಿರುವುದೇ ಸಮಸ್ಯೆಗೆ ಕಾರಣ ಎನ್ನಿಸುತ್ತಿದೆ. ವಿವಿಧೋದ್ದೇಶದ ಕೆರೆಯಿಂದ ನಿರ್ವಹಣೆಯ ವೆಚ್ಚವೂ ಏರುತ್ತಿದೆ. ಕೆರೆ ನಿರ್ಮಾಣಕ್ಕಿಂತ ಈಗ ಕೆರೆಯ ಉನ್ನತೀಕರಣವೇ ದುಬಾರಿಯಾಗುತ್ತಿದೆ.

ಹಸಿದ ಹೊಟ್ಟೆಯ ಜನರಿಗೆ ನೀರು ಪೂರೈಸಲು ಕೆರೆ ಇರಬೇಕೇ ಅಥವಾ ಹೊಟ್ಟೆ ಭಾರವಾಗಿ ಅದನ್ನು ಕರಗಿಸಿಕೊಳ್ಳಲು ಮುಂಜಾನೆ ಅಲೆದಾಡುವವರಿಗೆ ಕೆರೆ ಇರಬೇಕೇ? ನಗರ ಸಮೀಪ ಇರುವುದು ಇದೊಂದೇ ಕೆರೆ ಅಲ್ಲ. ವಾಕಿಂಗ್, ಸೈಕ್ಲಿಂಗ್, ಡ್ಯಾನ್ಸಿಂಗ್‌ಗಳಿಗೆಲ್ಲ ಬೇಕಾದರೆ ಬೇರೆ ಕೆರೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಲಿ. ವಲಸೆ ಪಕ್ಷಿಗಳನ್ನು ಬೇಕಾದರೆ ಕೊಂಡಜ್ಜಿ ಕೆರೆಯೋ, ಮತ್ತಿನ್ಯಾವುದೋ ಕೆರೆಗೆ ಕಳಿಸಿ. ಕುಂದುವಾಡ ಕೆರೆಯನ್ನು ಕುಡಿಯಲು ಉಳಿಸಿಕೊಳ್ಳುವ ಮೂಲಕ ಬಡ ಜನರು ಪರಿತಪಿಸುವುದನ್ನು ಶಾಶ್ವತವಾಗಿ ತಪ್ಪಿಸಿದರೆ ಅದು ನಿಜವಾದ ಸ್ಮಾರ್ಟ್ ಚಿಂತನೆಯಾಗಲಿದೆ.


– ಅಸ್ಮಿತ ಶೆಟ್ಟರ್