ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವೈಚಾರಿಕತೆ ಇದೆ

ಅಂಬಿಗರ ಚೌಡಯ್ಯನವರ ವಚನಗಳಲ್ಲಿ ವೈಚಾರಿಕತೆ ಇದೆ

ಕೂಡ್ಲಿಗಿ ತಾಲ್ಲೂಕು ಕಚೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹಾಬಲೇಶ್ವರ

ಕೂಡ್ಲಿಗಿ, ಜ. 21- ಅಂಬಿಗರ ಚೌಡಯ್ಯ 12ನೇ ಶತಮಾನದಲ್ಲಿ ಬಸವಾದಿ ಶರಣರಲ್ಲಿ ಪ್ರಮುಖರಾಗಿದ್ದು, ಇವರು ತಮ್ಮ ಕಠೋರ ವಚನಗಳ ಮೂಲಕ ಸಮಾಜದಲ್ಲಿದ್ದ ಮೂಢನಂಬಿಕೆ, ಮೋಸ, ವಂಚನೆಗಳನ್ನು ಬಯಲಿಗೆಳೆದವರಾಗಿದ್ದು, ಇವರ ವಚನಗಳಲ್ಲಿ ವೈಚಾರಿಕತೆ ಇದೆ ಎಂದು ಕೂಡ್ಲಿಗಿ ತಹಶೀಲ್ದಾರ್ ಮಹಾಬಲೇಶ್ವರ ಅಭಿಪ್ರಾಯಪಟ್ಟರು. 

ಅವರು ಈಚೆಗೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತ್ಯೋ ತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಅಂಬಿಗರ ಚೌಡಯ್ಯ ಅವರು ಶೋಷಿತ ಸಮುದಾಯಗಳ ಪ್ರತಿನಿಧಿಯಾಗಿ 12ನೇ ಶತಮಾನದಲ್ಲಿ ತುಳಿತಕ್ಕೊಳಗಾಗಿರುವ ಸಮುದಾಯಗಳ ಜನತೆಯಲ್ಲಿದ್ದ ಮೂಢನಂಬಿಕೆಗಳನ್ನು ತೊರೆಯುವಂತೆ ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸಿದವರು. 

ವೃತ್ತಿಯಲ್ಲಿ ದೋಣಿ ನಡೆಸುವ ಅಂಬಿಗನಾಗಿದ್ದರೂ ಚೌಡಯ್ಯ ತಮ್ಮ ವಚನಗಳ ಮೂಲಕ ಭವವೆಂಬ ಸಾಗರವನ್ನು ದಾಟಿಸಿದ ಪರಿ ಮಾತ್ರ ಸೋಜಿಗ ಮೂಡಿಸುತ್ತದೆ ಎಂದರು. 

ಕೂಡ್ಲಿಗಿ ತಾಲ್ಲೂಕು ಗಂಗಾಮತಸ್ಥರ ಸಂಘದ ಅಧ್ಯಕ್ಷ ಗುಡೇಕೋಟೆ ಶ್ರೀನಿವಾಸ್ ಮಾತನಾಡಿ, ಅಂಬಿಗರ ಚೌಡಯ್ಯ ತಳಸಮುದಾಯಗಳ ಧ್ವನಿಯಾಗಿ, ಅನುಭವ ಮಂಟಪದಲ್ಲಿ ತಮ್ಮ ವಚನಗಳ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದರು ಎಂದರು. 

ಈ ಸಂದರ್ಭದಲ್ಲಿ ಗಂಗಾಮತ ಸಂಘದ ಮಹಿಳಾ ಮುಖಂಡರಾದ ವಿಜಯಲಕ್ಷ್ಮಿ, ಗಂಗಾಮತ ಸಂಘದ ತಾಲ್ಲೂಕು ಮಾಜಿ ಅಧ್ಯಕ್ಷ ಬೇಕರಿ ಸುರೇಶ್, ಕೂಡ್ಲಿಗಿಯ ಪ್ರಕಾಶ, ಎಂ.ಬಸವರಾಜ, ಗುಡೇಕೋಟೆ ಪವನ್  ಮತ್ತಿತರರು ಹಾಜರಿದ್ದರು.