ಪುಣ್ಯ ಕಾರ್ಯಗಳಿಂದ ಪಾಪ ಕಳೆದುಕೊಳ್ಳಿ

ಪುಣ್ಯ ಕಾರ್ಯಗಳಿಂದ ಪಾಪ ಕಳೆದುಕೊಳ್ಳಿ

ರಾಣೇಬೆನ್ನೂರು, ಜ.20- ಅರಿತೋ ಅಥವಾ ಅರಿಯದೇ ಮಾಡಿದ  ತಪ್ಪುಗಳಿಂದ ಆದ ಪಾಪವನ್ನು  ದಾನ, ಧರ್ಮ ಮುಂತಾದ ಪುಣ್ಯ ಕಾರ್ಯಗಳನ್ನು ಮಾಡಿ ಕಳೆದುಕೊಳ್ಳಬೇಕು ಎಂದು ಕಣ್ವಕುಪ್ಪೆ ಗವಿಮಠದ  ನಾಲ್ವಡಿ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶಾಸಕ ಅರುಣಕುಮಾರ್ ಗುತ್ತೂರ ಅವರ ನಿವಾಸದಲ್ಲಿ ಇಂದು ಏರ್ಪಾಡಾಗಿದ್ದ ಕ್ಷೇತ್ರದ ಕಲ್ಯಾಣಾ ರ್ಥವಾಗಿ ಮಹಾಪೂಜೆ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಪರಂಪರೆಗಳಿಂದ ಕೂಡಿದ ನಮ್ಮದು ವೈಶಿಷ್ಟ್ಯಪೂರ್ಣ ದೇಶ. ಹಾಗಾಗಿ ಭಾರತ ಜಗತ್ತಿಗೇ ಗುರುವಾಗಿ ನಿಲ್ಲುತ್ತದೆ. ಇಲ್ಲಿ ಎಷ್ಟು ಕಾಲ ಬದುಕು ನಡೆಸಿದೆವು ಅನ್ನುವುದಕ್ಕಿಂತ ಹೇಗೆ  ಬದುಕಿದೆವು ಅನ್ನುವುದಕ್ಕೆ ಮಹತ್ವ ದೊರಕಲಿದೆ. ಅಂತಹ ಪುಣ್ಯಭೂಮಿ ಭಾರತ ಎಂದು ಶ್ರೀ ಗಳು ಹೇಳಿದರು.

ಯೌವ್ವನ, ಧನಕನಕಗಳಾ ಗಮನ, ಅಧಿಕಾರ ಹಾಗೂ ಅಹಂಕಾರ ಬಂದಾಗ ಮನುಷ್ಯ ಧರ್ಮವನ್ನು ಮರೆತು ಪಾಪ ಕಾರ್ಯಗಳನ್ನು ಮಾಡುತ್ತಾನೆ. ಆ ಸಂದರ್ಭಗಳಲ್ಲಿ ಎಚ್ಚರದ ಬದುಕು ನಡೆಸಿ ಪುಣ್ಯ ಸಂಪಾದನೆ ಮಾಡಿರಿ ಎಂದು ಶ್ರೀ ಗಳು ನುಡಿದರು.

ನನ್ನ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹಾಗೂ ಇಲ್ಲಿನ ಜನರ ಆರೋಗ್ಯದ ರಕ್ಷಣೆಯ ಮಹತ್ವಾ ಕಾಂಕ್ಷೆಯೊಂದಿಗೆ ಶ್ರೀಗಳಿಂದ ಮಹಾಪೂಜೆ ಮಾಡಲಾಯಿತು. ಶ್ರೀಗಳ ಕೃಪೆ ನಮ್ಮ ಮನೆತನದ ಮೇಲೆ ಅಪಾರವಾಗಿದ್ದು, ನನ್ನ ಬೆಳವಣಿಗೆ ಯಲ್ಲಿ ಅವರ ಆಶೀರ್ವಾದ ಇದೆ ಎಂದು ಪ್ರಾಸ್ತಾವಿಕ ನುಡಿಗಳಲ್ಲಿ ಶಾಸಕ ಅರುಣಕುಮಾರ್ ಪೂಜಾರ್ ಹೇಳಿದರು. 

ಮಂಜುನಾಥ ಓಲೇಕಾರ ಸ್ವಾಗತಿಸಿದರು. ಶಾಸಕರ ಪತ್ನಿ ಮಂಗಳಗೌರಿ ಪೂಜಾರ್, ನಗರಸಭೆ ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಮುಖಂಡರುಗಳಾದ ಎಸ್.ಎಸ್.ರಾಮಲಿಂಗಣ್ಣನವರ, ಪ್ರಕಾಶ ಪೂಜಾರ್, ಬಾಬು ಶೆಟ್ಟರ್ ಇದ್ದರು.ಶಾಸಕರ ಆಪ್ತಸಹಾಯಕ ಚಂದ್ರು ಕಾರ್ಯಕ್ರಮ ನಿರೂಪಿಸಿದರು.