ವಚನ ಸಾಹಿತ್ಯ ಎಲ್ಲಾ ಕಾಲದಲ್ಲೂ ಅತ್ಯವಶ್ಯಕ

ವಚನ ಸಾಹಿತ್ಯ ಎಲ್ಲಾ ಕಾಲದಲ್ಲೂ ಅತ್ಯವಶ್ಯಕ

ಹೊನ್ನಾಳಿ : ವಿವಿಧ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ್ ಕುರ್ಕಿ

ಹೊನ್ನಾಳಿ,ಜ. 10- ಸಮ-ಸಮಾಜ ನಿರ್ಮಾಣ ಮಾಡಲು ವಚನ ಸಾಹಿತ್ಯ ಎಲ್ಲಾ ಕಾಲಘಟ್ಟಗಳಲ್ಲೂ ಅತ್ಯವಶ್ಯಕವಾಗಿದೆ ಎಂದು  ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ್ ಕುರ್ಕಿ ಹೇಳಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಎಸ್‍ಜೆವಿಪಿ ಶಿಕ್ಷಣ ಮಹಾವಿದ್ಯಾಲಯ ಹಿರೇಕಲ್ಮಠ ಇವರ ಸಂಯು ಕ್ತಾಶ್ರಯದಲ್ಲಿ ಈ ಸಾಲಿನ ಹತ್ತೂರು ಭರಮಮ್ಮ ಪಂಡಿತ್ ಬಿ.ಎಸ್. ಭರಮಗೌಡ, ದಾವಣಗೆರೆ ಸರ್ವಮಂಗಳಮ್ಮ ಮಹಾಶರಣ ಮಾಗನೂರು ಬಸಪ್ಪ, ಲಕ್ಷ್ಮಣ ಶೇಷಪ್ಪ ವೈಶ್ಯರ ದತ್ತಿ ಉಪನ್ಯಾಸ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 

ಇಂದಿನ ಜಗತ್ತಿನಲ್ಲಿ ಮನುಷ್ಯ-ಮನುಷ್ಯನಾಗಿ ಬಾಳಲು ಆಗುತ್ತಿಲ್ಲ. ಬಸವಣ್ಣನ ಸಪ್ತಸೂತ್ರಗಳನ್ನು ಯಾರು ಬೆಳೆಸಿಕೊಳ್ಳುತ್ತಾರೆಯೋ, ಬದುಕಿನ ದಾರಿ ಮತ್ತು ಉತ್ತಮ ಮೌಲ್ಯಗಳನ್ನು ರೂಪಿಸಿಕೊಳ್ಳಲು ವಚನ ಸಾಹಿತ್ಯ ದಾರಿದೀಪವಾಗುತ್ತದೆ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪ ಮಾತನಾಡಿ, 1905 ರಲ್ಲಿ ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್‌ರಿಂದ ಸ್ಥಾಪಿತವಾದ ಕಸಾಪದಲ್ಲಿ ಇಂದು 5 ಲಕ್ಷಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಇದ್ದಾರೆ. ತಾಲ್ಲೂಕು ಕನ್ನಡ ಭವನ ನಿರ್ಮಾಣ ಮಾಡಲು ಹಿರೇಕಲ್ಮಠ ಶ್ರೀಗಳು ನಿವೇಶನ ನೀಡಿದ್ದಾರೆ. ಮುಂದೆ ಭವನ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ವಚನ ಸಾಹಿತ್ಯದ ಪಾತ್ರ ಕುರಿತು ದತ್ತಿದಾನಿ, ನಿವೃತ್ತ ಇಂಜಿನಿಯರ್ ಎಲ್.ಎಸ್. ವೈಶ್ಯರ್ ಉಪನ್ಯಾಸ ನೀಡಿದರು.

ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಾ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿರುವ  ನಾಡಿಗೆ ಕನ್ನಡ ಸಂಸ್ಕೃತಿ, ನಾಡು-ನುಡಿ ಬೆಳವಣಿಗೆಗೆ ಎಲ್ಲರು ನಿತ್ಯ ಶ್ರಮಿಸಬೇಕು ಎಂದರು.

ಇದೇ ವೇಳೆ ಡಾ.ಎಚ್.ಎಸ್. ಮಂಜುನಾಥ್ ಕುರ್ಕಿ ಅವರನ್ನು  ಸನ್ಮಾನಿಸಲಾಯಿತು. ಶ್ರೀ ಚನ್ನಪ್ಪ ಸ್ವಾಮಿ ವಿದ್ಯಾಪೀಠದ ಆಡಳಿತಾಧಿಕಾರಿ ಡಾ.ಎಚ್.ಎಸ್. ಜಯಪ್ಪ ಮಾತನಾಡಿದರು. ಜಿಲ್ಲಾ ಕಸಾಪ ಕಾರ್ಯದರ್ಶಿ ದಿಳ್ಯಪ್ಪ, ಜಿ.ಪಂ. ಮಾಜಿ ಸದಸ್ಯ ಎ.ಬಿ. ನೇಮಿಚಂದ್ರಪ್ಪ, ಜಯಮ್ಮ, ದಾವಣಗೆರೆಯ ಸುನಂದಾದೇವಿ, ಎಂ.ಬಿ. ಸಂಗಮೇಶ್ವರಗೌಡ, ಕಸಾಪ ಗೌರವ ಕಾರ್ಯದರ್ಶಿ ಕೆ. ಶೇಖರಪ್ಪ, ಎಂ.ಎಸ್. ರೇವಣಪ್ಪ, ಪಿ.ಎಂ. ಸಿದ್ದಯ್ಯ, ಕತ್ತಿಗೆ ನಾಗರಾಜ್, ಶಾರದ ಕಣಗಟಿಗಿ, ಧನಂಜಯ, ಜಯಪ್ಪ, ಶಾಂತರಾಜ್  ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.