ಬದುಕಿನಲ್ಲಿ ಹೊಂದಾಣಿಕೆ, ಸಾಮರಸ್ಯ ಬೇಕು

ಬದುಕಿನಲ್ಲಿ ಹೊಂದಾಣಿಕೆ, ಸಾಮರಸ್ಯ ಬೇಕು

ಮುರುಘಾ ಮಠದಲ್ಲಿನ 31ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಶರಣರು

ಚಿತ್ರದುರ್ಗ, ಜ. 10- ಉಸಿರಾಟ ಜೀವಂತಿಕೆಯನ್ನು ತೋರಿಸುತ್ತದೆ. ಮಾನವ ಉಸಿರಾಟದ ಪ್ರಕ್ರಿಯೆಯಂತೆ ಧರ್ಮ, ಮೌಲ್ಯ, ಸಿದ್ಧಾಂತಗಳನ್ನು ಸದಾ ತನ್ನೊಳಗಿರಿಸಿಕೊಳ್ಳಬೇಕು. ಅಂಥ ವ್ಯಕ್ತಿ ನಡೆದಾಡುವ ದೇವಾಲಯವಾಗುತ್ತಾನೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಿಸಿದರು.

ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ಮೊನ್ನೆ ನಡೆದ ಮೂವತ್ತೊಂದನೇ ವರ್ಷದ ಒಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂತಃಸಾಕ್ಷಿ ಮತ್ತು ಅಂತಃಪ್ರಜ್ಞೆ ಜೊತೆಯಲ್ಲಿ ಸಾಗ ಬೇಕು. ಬದುಕಿನಲ್ಲಿ ಹೊಂದಾಣಿಕೆ ಮತ್ತು ಸಾಮರಸ್ಯ ಬೇಕು. ಸಂಸಾರದಲ್ಲಿ ಸ್ವಾರಸ್ಯ ಉಂಟಾಗಬೇಕು. ದೇಹದಲ್ಲಿ ರಕ್ತ ಹರಿಯಲೇಬೇಕು. ರಕ್ತದಾನ ಶ್ರೇಷ್ಠವಾದುದು. ಎಲ್ಲರು ರಕ್ತದಾನ ಮಾಡಿ, ಇನ್ನೊಬ್ಬರ ಜೀವ ಉಳಿಸಬೇಕು ಎಂದರು.

ಹೃಷಿಕೇಶದ ದಯಾನಂದಾಶ್ರಮದ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಮಾತನಾಡಿ, ನಮ್ಮ ಸಿದ್ಧಾಂತವನ್ನು ನಾವು ಆಚರಿಸಬೇಕು. ಮಾತನಾಡುವುದು ಸುಲಭ, ಆದರೆ ಆಚರಣೆಗೆ ತರುವುದು ಕಷ್ಟ. ಮದುವೆ ಅಂದರೆ ಪರಸ್ಪರ ಅರ್ಥ ಮಾಡಿಕೊಳ್ಳುವುದಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಮಾತನಾಡಿ, ಶ್ರೀಮಠದಲ್ಲಿ ಸರಳ ವಿವಾಹವಾದವರು ಗಟ್ಟಿ ಬದುಕನ್ನು ಕಟ್ಟಿಕೊಳ್ಳಬೇಕು. ಭಾರತ ಇನ್ನು ಮುಂದೆ ವಿಶ್ವಗುರು ಮಟ್ಟಕ್ಕೆ ಹೋಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ರಘು, ವಿ. ಸತೀಶ್ ಮಾತನಾಡಿದರು.  ಈ ಸಂದರ್ಭದಲ್ಲಿ 2 ಜೋಡಿ ಅಂತರ್ಜಾತಿ ಸೇರಿದಂತೆ 17 ಜೋಡಿಗಳು ವಿವಾಹವಾದರು.  

ಛಲವಾದಿ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮೀಜಿ, ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಮಡಿವಾಳ  ಮಾಚಿದೇವ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಉಪಸ್ಥಿತರಿದ್ದರು.