`ನಗುವಿರಲಿ ಎಂದೆಂದೂ’…

`ನಗುವಿರಲಿ ಎಂದೆಂದೂ’…

ಮುಖದ ಸೌಂದರ್ಯಕೆ ಮೇಕಪ್ ಏಕೆ ಬೇಕು,
ಒಳ್ಳೆಯ ನಗುವೊಂದೇ ಸಾಕು.

ಯಾವ ಧರ್ಮೀಯರಾದರೇನು ನಗು ನಗುತಲಿರಲು,
`ನಗುವೇ ಸಹಜ ಧರ್ಮ’ ಡಿವಿಜಿ ಮಾತೇ ಮೇಲು.

ದುಗುಡ ದುಮ್ಮಾನಗಳ ನಗು ದೂರವಾಗಿಸುವುದು,
ಸ್ನೇಹ ಸಂಪಾದನೆಗೆ ಸುಲಭ ಸಾಧನವಿದು.

ಬೇಂದ್ರೆ ಅಂಕಿತವಿದಕೆ `ನಕ್ಕಾವ ಗೆದ್ದಾವ’,
ನಗುವು ದೂರಾಗಿಸುವುದು ಮನಸಿನಾ ನೋವ.

ಅಟ್ಟಹಾಸದ ನಗುವ ಬಿಟ್ಟು ಬಿಡಿ ಬೇಡ,
ಎಂದಿಗೂ ತೋರದಿರಿ ಕುಹಕ ನಗು ಕೂಡಾ.

ಮಂದಹಾಸದ ಅಂದ ಮುಖದಲ್ಲಿ ಚಂದ,
ಮನಸೆಳೆಯಬಹುದೊಂದು ಮುಗುಳು ನಗೆಯಿಂದ.

ಎಷ್ಟಾದರೂ ನಗಿರಿ ಇದಕ್ಕಿಲ್ಲ ತೆರಿಗೆ,
ಮುಖದ ಸ್ನಾಯುಗಳಿಗೆ ವ್ಯಾಯಾಮವೇ `ನಗೆ’.

ನಗುಬಲ್ಲವರಿಗೆಂದೂ ಇರದೆಲ್ಲೂ ವೈರ,
ಗಾಂಧೀಜಿ ಮುಖದಲ್ಲೂ ನಗುವೆ ಮಂದಾರ.

ನಕ್ಕು ನಗಿಸುತಲಿರಿ `ವಿಶ್ವ ನಗು ದಿನ’ವಿಂದು,
ಇಂದೊಂದೇ ದಿನವಲ್ಲ, ನಗುವಿರಲಿ ಎಂದೆಂದೂ.

ಮೊಗ್ಗರಳಿ ಹೂವಾಗಿ ಗಂಧ ಪಸರಿಸುವಂತೆ,
ಮುಖದಲ್ಲಿ ನಗುವರಳೆ ಹಿತವು ಅಹುದಂತೆ.


ಹೆಚ್.ಬಿ.ಮಂಜುನಾಥ್
ಹಿರಿಯ ಪತ್ರಕರ್ತ.