14 ರಂದು ಹರಿಹರದಲ್ಲಿ ಭಾವೈಕ್ಯ ಜಾತ್ರೆ

14 ರಂದು ಹರಿಹರದಲ್ಲಿ ಭಾವೈಕ್ಯ ಜಾತ್ರೆ

ರಾಣೇಬೆನ್ನೂರು, ಜ.7-  ಕೃಷಿ ಅವಲಂಬಿತ ಪಂಚಮಸಾಲಿ ಸಮಾಜದಲ್ಲಿ ಶೇ.80 ರಷ್ಟು ಜನರು ಬಡವರಿದ್ದು, ನಮ್ಮ ಸಮಾಜಕ್ಕೂ ಮೀಸಲಾತಿ ಅಗತ್ಯವಿದೆ. ಅನೇಕ ಸಮುದಾಯದವರು ಮೀಸಲಾತಿ ಕೇಳುತ್ತಿದ್ದು, ಸರ್ಕಾರ ಈ ಕುರಿತು ತೀವ್ರ ಚಿಂತನೆ ಮಾಡಬೇಕು ಎಂದು ರಾಜ್ಯ ಪಂಚಮಸಾಲಿ ಸಮಾಜದ ಸಂಘಟನಾ ಕಾರ್ಯದರ್ಶಿ ಹಾಗೂ ಹರ ಜಾತ್ರೆಯ ಮಾಜಿ ಅಧ್ಯಕ್ಷ ಸಿ.ಆರ್. ಬಳ್ಳಾರಿ ಹೇಳಿದರು.

ಇದೇ ದಿನಾಂಕ 14 ಮತ್ತು 15 ರಂದು ಹರಿಹರದಲ್ಲಿ ನಡೆಯುವ ಹರಜಾತ್ರೆ ಕುರಿತು ನಡೆಸಿದ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಜಾತ್ರೆ ಪಂಚಮಸಾಲಿ ಸಮಾಜಕ್ಕೆ ಮೀಸಲಾಗಿಲ್ಲ. ವಾಲ್ಮೀಕಿ, ಕುರುಬ ಸೇರಿದಂತೆ ಅನೇಕ ಸಮಾಜಗಳ ಜನರು ಪಾಲ್ಗೊಳ್ಳುತ್ತಾರೆ. ಇದೊಂದು  ಭಾವೈಕ್ಯತೆಯ ಸಮಾವೇಶದಂತಿದೆ. ಜಾತ್ರೆಯ ಮೂಲಕ ಪಂಚಮಸಾಲಿ ಸಮಾಜದ ಸಂಘಟನೆಗೆ ಪ್ರಯತ್ನ ನಡೆಸಲಾಗುತ್ತದೆ ಎಂದು ಬಳ್ಳಾರಿ ಹೇಳಿದರು. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾನುಸಾರ ಜಾತ್ರೆ ನಡೆಸಲಾಗುತ್ತಿದ್ದು, ಮೆರವಣಿಗೆ, ಮನರಂಜನೆ ಕಾರ್ಯಕ್ರಮಗಳನ್ನು ರದ್ದುಪಡಿ ಸಲಾಗಿದೆ. ಯೋಗ ವಿಜ್ಞಾನ ಶಿಬಿರ, ಯುವಶಕ್ತಿಯ ಸಮಾವೇಶ, ಜಗದ್ಗುರುಗಳ ಪೀಠಾರೋಹಣ ಹಾಗು ಇನ್ನಿತರೆ ಕಾರ್ಯಕ್ರಮಗಳು ನಡೆಯಲಿದ್ದು, ಎರಡೂ ದಿನವೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದರಾದ ಪ್ರಜ್ವಲ್ ರೇವಣ್ಣ, ತೇಜಸ್ವಿ ಸೂರ್ಯ ಸೇರಿದಂತೆ  ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಜಾತ್ರೆ ಸಮಿತಿ ಉಪಾಧ್ಯಕ್ಷರಾದ ವಸಂತ ಹುಲ್ಲತ್ತಿ, ಸಿದ್ದು ಚಿಕ್ಕಬಿದರಿ, ಎಪಿಎಂಸಿ ನಿರ್ದೇಶಕ ಬಸವರಾಜ ಹುಲ್ಲತ್ತಿ ಇನ್ನಿತರರಿದ್ದರು.