35 ಗ್ರಾ.ಪಂ.ಗಳ ಚುನಾವಣಾ ಫಲಿತಾಂಶ ಪ್ರಕಟ

35 ಗ್ರಾ.ಪಂ.ಗಳ ಚುನಾವಣಾ ಫಲಿತಾಂಶ ಪ್ರಕಟ

ಹರಪನಹಳ್ಳಿ: ಹೆಗಲ ಮೇಲೆ ಹೊತ್ತು ಜೈಕಾರ ಹಾಕಿದ ಅಭಿಮಾನಿಗಳು 

ಹರಪನಹಳ್ಳಿ, ಡಿ.31- ತಾಲ್ಲೂಕಿನ 35 ಗ್ರಾಮ ಪಂಚಾಯ್ತಿಗಳ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದ್ದು, ಚುನಾವಣಾ ಕಣದಲ್ಲಿದ್ದ 1,369 ಅಭ್ಯರ್ಥಿಗಳ ಪೈಕಿ ಕೆಲ ಅಭ್ಯರ್ಥಿಗಳು ಗೆದ್ದು ಬೀಗಿದರೆ, ಇನ್ನು ಕೆಲ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.

ಪಟ್ಟಣದ ಹೆಚ್‍ಪಿಎಸ್‍ ಕಾಲೇಜಿನಲ್ಲಿ 18 ಕೊಠಡಿಗಳಲ್ಲಿ 72 ಟೇಬಲ್‍ಗಳನ್ನು ಬಳಸಿಕೊಂಡು ಏಕಕಾಲದಲ್ಲಿ 35 ಗ್ರಾಮ ಪಂಚಾಯ್ತಿಗಳ ಮತ ಎಣಿಕೆ ಕಾರ್ಯವನ್ನು ಬುಧವಾರ ಬೆಳಿಗ್ಗೆ 08 ಗಂಟೆಗೆ ಪ್ರಾರಂಭಿಸಿದ್ದು, ಗುರುವಾರ ಬೆಳಿಗ್ಗೆ 06 ಗಂಟೆ ಸುಮಾರಿಗೆ ಮುಕ್ತಾಯಗೊಂಡಿದೆ.

ಬೆಣ್ಣಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಡಕೋಳ ಕ್ಷೇತ್ರ 2 ರಲ್ಲಿ ಅಭ್ಯರ್ಥಿಗಳಾದ ಸುರೇಶ್ ಹಾಗೂ ಸತೀಶ್‍ ತಲಾ 245 ಮತಗಳನ್ನು ಪಡೆದ ಪರಿಣಾಮವಾಗಿ ಲಾಟರಿ ಮೂಲಕ ಆಯ್ಕೆ ಮಾಡಿದಾಗ ಸುರೇಶ್‍ ಗೆಲುವು ಸಾಧಿಸಿದ್ದಾರೆ.  ಮಾಡ್ಲಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾನಹಳ್ಳಿ ಕ್ಷೇತ್ರದ ಅಭ್ಯರ್ಥಿಗಳಾದ ನಿರ್ಮಲ 340 ಮತಗಳನ್ನು ಹಾಗೂ ಸುಧಾ 341 ಮತಗಳನ್ನು ಪಡೆದ ಪರಿಣಾಮವಾಗಿ ಲಾಟರಿ ಮೂಲಕ ಆಯ್ಕೆ ಮಾಡಿದಾಗ ನಿರ್ಮಲ ಅವರು ಗೆಲುವು ಸಾಧಿಸಿದರು.

ಮತ ಎಣಿಕೆ ಕೇಂದ್ರದ ಒಳಗೆ ಅಭ್ಯರ್ಥಿಯ ಜೊತೆಗೆ ಒಬ್ಬ ಬೂತ್‍ ಏಜೆಂಟ್‌ಗೆ ಮಾತ್ರ ಅವಕಾಶ ನೀಡಲಾಗಿದ್ದು, ಹೊರಗಡೆ ನೆರೆದಿದ್ದ ಜನರಿಗೆ ಫಲಿತಾಂಶ ಬಿತ್ತರಿಸಲು ಧ್ವನಿ ವರ್ಧಕಗಳನ್ನು ಅಳವಡಡಿಸಲಾಗಿತ್ತು. ಮತ ಎಣಿಕೆ   ಕೇಂದ್ರಕ್ಕೆ ಆಗಮಿಸುವ ಪ್ರತಿಯೊಬ್ಬರನ್ನೂ ಪೊಲೀಸ್‌ ಸಿಬ್ಬಂದಿಗಳು ಮುಖ್ಯಗೇಟಿನಲ್ಲಿಯೇ ಸ್ಕ್ಯಾನಿಂಗ್ ಮಾಡಿ ಒಳಗಡೆ ಬಿಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜಿನ ಸುತ್ತಮುತ್ತಲೂ ಹಾಗೂ ಮತಎಣಿಕೆ ಕೇಂದ್ರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಚುನಾವಣಾ ಅಧಿಕಾರಿಗಳು ಗೆಲುವು ಸಾಧಿಸಿದ ಅಭ್ಯರ್ಥಿಯ ಹೆಸರು ಪ್ರಕಟಿಸುತ್ತಿದ್ದಂತೆ, ಕಾಲೇಜಿನ ಹೊರಗಡೆ ಬೆಂಬಲಿತ ಅಭ್ಯರ್ಥಿಗಳ ಗೆಲುವಿನ ನಿರೀಕ್ಷೆಯಲ್ಲಿ ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ಬೆಂಬಲಿಗರು, ಗೆದ್ದ ಅಭ್ಯರ್ಥಿ ಹೊರಗಡೆ ಬರುತ್ತಿದ್ದಂತೆ ಅವರಿಗೆ ಹಾರ ಹಾಕಿ, ಬಣ್ಣ ಹಚ್ಚಿ, ಹೆಗಲ ಮೇಲೆ ಹೊತ್ತು ಜೈಕಾರ ಕೂಗುತ್ತಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು.

35  ಗ್ರಾಮ  ಪಂಚಾಯ್ತಿಗಳ  ಚುನಾವಣಾ  ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಗ್ರಾಮಸ್ಥರು ಆಗಮಿಸಿದ್ದರ ಪರಿಣಾಮವಾಗಿ ಕಾಲೇಜಿನ ಆವರಣ, ಪ್ರವಾಸಿ ಮಂದಿರದ ವೃತ್ತ, ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿ 25 ರ ರಸ್ತೆಯಲ್ಲಿ ಅಪಾರ ಜನಸ್ತೋಮ  ನೆರೆದಿದ್ದರಿಂದ ವಾಹನ ಸಂಚಾರಕ್ಕೆ ಆಡಚಣೆ ಉಂಟಾಗಿತ್ತು.

ಮತ ಎಣಿಕೆ ಕೇಂದ್ರಗಳಿಗೆ ಅಪರ ಜಿಲ್ಲಾಧಿಕಾರಿ ಮಂಜುನಾಥ್‍ ಆಗಮಿಸಿ, ಪರಿಶೀಲನೆ ನಡೆಸಿದರು. ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್, ತಹಶೀಲ್ದಾರ್ ಎಲ್.ಎಂ. ನಂದೀಶ್, ಡಿವೈಎಸ್ಪಿ ಹಾಲಮೂರ್ತಿರಾವ್, ಪಿಎಸ್‍ಐಗಳಾದ ಸಿ. ಪ್ರಕಾಶ್, ಕಿರಣ್‍ಕುಮಾರ್, ನಾಗರಾಜ್, ಪ್ರಶಾಂತ್‍ ಉಪಸ್ಥಿತಿಯಲ್ಲಿ   ನಡೆಯಿತು. ಮತ್ತಿಹಳ್ಳಿ ಗ್ರಾಮ ಪಂಚಾಯ್ತಿಯ 3 ಮತ್ತು 4 ನೇ ವಾರ್ಡ್‍ಗಳನ್ನು ಹೊರತು ಪಡಿಸಿ, ತಾಲ್ಲೂಕಿನ 35 ಗ್ರಾಮ ಪಂಚಾಯ್ತಿಗಳ ಚುನಾವಣೆ ಯಶಸ್ವಿಯಾಗಿ ಜರುಗಿದೆ.