ಸಾಮಾಜಿಕ ಹೊಣೆಗಾರಿಕೆಯ ಧರ್ಮಸ್ಥಳ ಸಂಸ್ಥೆ

ಸಾಮಾಜಿಕ ಹೊಣೆಗಾರಿಕೆಯ ಧರ್ಮಸ್ಥಳ ಸಂಸ್ಥೆ

ಜಗಳೂರು, ಡಿ.31- ಹಿಂದುಳಿದ ಪ್ರದೇಶದಲ್ಲಿ ಬಡ ಕುಟುಂಬಗಳ ಆರ್ಥಿಕ ಸದೃಢತೆಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಕಾರಿಯಾಗಿದೆ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ಪಟ್ಟಣದ ಶರಣ ಬಸವೇಶ್ವರ ಬಡಾವಣೆ ಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಜಿಲ್ಲಾ ಕಛೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಸಂಸ್ಥೆಯು ಗ್ರಾಮೀಣ ಭಾಗಗಳಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಿ, ವಿವಿಧ ಉದ್ದೇಶಗಳಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಿ, ಸಂಘದ ಪ್ರತಿನಿಧಿಗಳ ಮೂಲಕ ಸ್ವಯಂಪ್ರೇರಿತರಾಗಿ ಸಾಲ ಮರುಪಾವತಿ ಮಾಡುವ ಮೂಲಕ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಹೊಂದಿದೆ ಎಂದು ತಿಳಿಸಿದರು.

ಶೀಘ್ರದಲ್ಲಿಯೇ ತಾಲ್ಲೂಕಿನ ಕೆರೆಗಳು ಮೈದುಂಬಿ ಹರಿಯಲಿವೆ. ಇದರಿಂದ ರೈತರು ಅನುಭವಿಸುತ್ತಿದ್ದ ಬರಕ್ಕೆ ಮುಕ್ತಿ ಸಿಗಲಿದೆ ಎಂದರಲ್ಲದೆ, ಮುಂಬರುವ ಜೂನ್ ಒಳಗಾಗಿ ಕೆರೆಗಳಿಗೆ ನೀರು ಹರಿದು ಬರಲಿದೆ. ಯೋಜನೆಯ ಕಾಮಗಾರಿ ಸಿರಿಗೆರೆ ಶ್ರೀಗಳ ಮಾರ್ಗದರ್ಶನದಲ್ಲಿ ಭರದಿಂದ ಸಾಗಿದೆ ಎಂದು ತಿಳಿಸಿದರು. 

ನೆನೆಗುದಿಗೆ ಬಿದ್ದಿರುವ ಕನಸಿನ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೊಜನೆಯನ್ನಾಗಿಸಿದ್ದು, ಟೆಂಡರ್ ಪ್ರಕ್ರಿಯೆ ನಂತರ  ಕಾಮಗಾರಿ ಉದ್ಘಾಟನೆಗೆ ಹಲವು ಗಣ್ಯರ ಜೊತೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರನ್ನು ಆಹ್ವಾನಿಸಲಾಗುವುದು. ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಕಲ್ಪಿಸಲಾಗುವುದು ಎಂದರು.

ಧರ್ಮಸ್ಥಳ ಸಂಸ್ಥೆಯ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಡಾ. ಮಂಜುನಾಥ ಮಾತನಾಡಿ, ರಾಜ್ಯದಲ್ಲಿ ಧರ್ಮಸ್ಥಳ ಸಂಘದ ಹತ್ತು ಸಾವಿರ ಗ್ರಾಹಕ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.  ಇವುಗಳಿಂದ ಕೃಷಿ ಚಟುವಟಿಕೆ, ಮಹಿಳೆಯರ ಸ್ವಯಂ ಉದ್ಯೋಗಗಳಿಗೆ ಶೇ.14 ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ವಿತರಿಸಲಾಗುತ್ತಿದೆ. ರಾಜ್ಯದಲ್ಲಿ 7 ಲಕ್ಷಕ್ಕೂ ಅಧಿಕ ಮಹಿಳೆಯರು ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ನರೇಂದ್ರ, ಜಿ.ಪಂ. ಸದಸ್ಯ ಎಸ್.ಕೆ.  ಮಂಜುನಾಥ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತ ಶಿವಣ್ಣ, ಸದಸ್ಯ ದೇವರಾಜ್, ಪತ್ರ ಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಎ.ಎಂ. ಕೊಟ್ರೇಶ್, ಧರ್ಮಸ್ಥಳ ಸಂಸ್ಥೆಯ ಜನಾರ್ಧನ್ ಗುಣಕಾರ್, ಷಡಕ್ಷರಪ್ಪ, ದುಗ್ಗೇಗೌಡ, ಮಮತಾ , ಶಿವಾನಂದ್ ಇನ್ನಿತರರಿದ್ದರು.