ರಾಮ ಮಂದಿರ : ನಿಧಿ ಸಮರ್ಪಣಾ ಅಭಿಯಾನದ ಕಾರ್ಯಾಲಯ ಉದ್ಘಾಟನೆ

ರಾಮ ಮಂದಿರ : ನಿಧಿ ಸಮರ್ಪಣಾ ಅಭಿಯಾನದ ಕಾರ್ಯಾಲಯ ಉದ್ಘಾಟನೆ

ವೈಯಕ್ತಿಕವಾಗಿ 5 ಲಕ್ಷ ರೂ. ನೀಡಲು ಶಾಸಕ ಎಂ.ಪಿ. ರೇಣುಕಾಚಾರ್ಯ ಭರವಸೆ

ಹೊನ್ನಾಳಿ, ಡಿ.20 – ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವುದು ಪ್ರತಿಯೊಬ್ಬ ಹಿಂದುವಿನ ಕನಸಾಗಿದ್ದು, ಇದೀಗ ಅದು ನನಸಾಗುತ್ತಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಪಟ್ಟಣದ ಮಲ್ಲಪ್ಪ ಕಾಂಪ್ಲೆಕ್ಸ್‍ನಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಕಾರ್ಯಾಲಯವನ್ನು ಇಂದು ಉದ್ಘಾಟಿಸಿ  ಅವರು ಮಾತನಾಡಿದರು.

ಅಯೋಧ್ಯಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಒಬ್ಬರಿಂದ ಆಯ್ತು ಎನ್ನುವುದಕ್ಕಿಂತ ದೇಶಾದ್ಯಾಂತ ಜನರಿಂದ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡಲಾಗುತ್ತಿದ್ದು, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ರಾಷ್ಟ್ರೀಯ ಸ್ಮಾರಕವಾಗಲಿದೆ ಎಂದರು.

ಇನ್ನು ಶ್ರೀರಾಮ ಮಂದಿರ ನಿರ್ಮಾಣಕ್ಕೆ ವೈಯಕ್ತಿಕ ಐದು ಲಕ್ಷ ರೂ. ನೀಡುವ ಭರವಸೆ ನೀಡಿ ಸಾಂಕೇತಿಕವಾಗಿ ಒಂದು ಲಕ್ಷ ನೀಡಿದ ರೇಣುಕಾಚಾರ್ಯ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನಾಧ್ಯಂತ ನಿಧಿ ಸಂಗ್ರಹಿಸಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅಳಿಲು ಸೇವೆ ಮರಳು ಭಕ್ತಿಯ ರೀತಿ ನಿಧಿ ಸಂಗ್ರಹಿಸಿ ಕೊಡುವುದಾಗಿ ಹೇಳಿದ ಶಾಸಕರು, ದೇಣಿಗೆ ನೀಡಲು ಸಾರ್ವಜನಿ ಕರಿಗೆ ಯಾವುದೇ ಒತ್ತಾಯವಿಲ್ಲ ಎಂದರು.

ಇದೇ ವೇಳೆ ಮಾತನಾಡಿದ ಜಿಲ್ಲಾ ಅಭಿಯಾನ ಸಹ ಸಂಯೋಜಕ ಜಿ.ರಮೇಶ್, ಐದನೂರು ವರ್ಷಗಳ ಭಕ್ತರ ಬೇಡಿಕೆಯ, ಲಕ್ಷ ಜನರ ತ್ಯಾಗ ಹಾಗೂ ಬಲಿದಾನದ ಪ್ರತಿಫಲದಿಂದಾಗಿ ನಮ್ಮ ಕಾಲದಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಎಲ್ಲರೂ ನಿಧಿ ಸಮರ್ಪಣೆ ಮಾಡುವ ಮೂಲಕ ಕೈ ಜೋಡಿಸಬೇಕಿದೆ ಎಂದು ಕರೆ ನೀಡಿದರು.

200 ಅಡಿ ತಳಪಾಯ ಮೂರು ಅಂತಸ್ತಿನ ಐದು ಗೋಪುರವುಳ್ಳ 46 ಸಾವಿರ ಚದುರ ಅಡಿ ವಿಸ್ತೀರ್ಣದಲ್ಲಿ ಈ ರಾಮಮಂದಿರವು ವಿವಿಧ ಲೋಹಗಳಿಂದ ನಿರ್ಮಾಣಗೊಳ್ಳಲಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಮಾತನಾಡಿದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ್ ಶಿವಾಚಾರ್ಯ ಸ್ವಾಮೀಜಿ, ನಿಧಿ ಸಂಗ್ರಹ ಯೋಜನೆಯು ಸ್ವಾಭಿಮಾನದ ಸಂಕೇತವಾಗಿದ್ದು, ಎಲ್ಲರೂ ಇದಕ್ಕೆ ಕೈಜೋಡಿಸುವ ಮೂಲಕ ಸಹಕಾರ ನೀಡುವಂತೆ ಮನವಿ ಮಾಡಿ ದರು. ನಮ್ಮ ರಾಮ, ನಮ್ಮ ರಾಮ, ನಮ್ಮ ಮನೆ ಎಂಬ ಭಾವನೆಯೊಂದಿಗೆ ನಿಧಿ ಸಂಗ್ರಹಕ್ಕೆ ಸ್ಪಂದಿಸು ವಂತೆ ಕರೆ ನೀಡಿ ಶ್ರೀಮಠದಿಂದ ಒಂದು ಲಕ್ಷ ರೂ.ಗಳ ನಿಧಿಯನ್ನು ಸಮರ್ಪಿಸುವುದಾಗಿ ತಿಳಿಸಿ ಸಾಂಕೇತಿಕವಾಗಿ ಐದು ಸಾವಿರ ರೂ. ನೀಡಿದರು.

ತಾಲ್ಲೂಕು ಸಂಯೋಜಕ ಮಾರುತಿ, ಡಾ.ಜಿತೇಂದ್ರ, ಎಚ್.ಎಂ.ಅರುಣ್ ಕುಮಾರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಕೆ. ಸುರೇಶ್ ಸೇರಿದಂತೆ ಪಕ್ಷದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.