ಸಾಗರದಷ್ಟು ವಿಶಾಲವಾಗಿರುವ ಕ್ರೀಡಾ ಕ್ಷೇತ್ರವನ್ನು ಸೀಮಿತಗೊಳಿಸದಂತೆ ನಿರ್ವಹಿಸಬೇಕು

ಸಾಗರದಷ್ಟು ವಿಶಾಲವಾಗಿರುವ ಕ್ರೀಡಾ ಕ್ಷೇತ್ರವನ್ನು ಸೀಮಿತಗೊಳಿಸದಂತೆ ನಿರ್ವಹಿಸಬೇಕು

ಹೊನ್ನಾಳಿ, ಅ.3- ಪಟ್ಟಣದ ಹಿರೇಕಲ್ಮಠದಲ್ಲಿ ನೂತನ ಕರ್ನಾಟಕ ರಾಜ್ಯ ಹ್ಯಾಂಡ್‍ಬಾಲ್ ಅಸೋಸಿಯೇಷನ್ ಪದಾಧಿಕಾರಿಗಳನ್ನು ಪೀಠಾಧ್ಯಕ್ಷ  ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು.

ಸಾಗರದಷ್ಟು ವಿಶಾಲವಾಗಿರುವ ಕ್ರೀಡಾ ಕ್ಷೇತ್ರವನ್ನು ಸೀಮಿತಗೊಳಿಸದಂತೆ ದೈಹಿಕ ಶಿಕ್ಷಕರು ಹಾಗೂ ವಿವಿಧ ಕ್ರೀಡಾ ಸಂಘದ ಪದಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಕ್ರೀಡಾ ಕ್ಷೇತ್ರ ಬಹು ಉಪಯುಕ್ತವಾದ ಕ್ಷೇತ್ರ. ಇತ್ತೀಚೆಗೆ ಯುವಕರಲ್ಲಿ ಕ್ರೀಡಾಸಕ್ತಿ ಕ್ಷೀಣಿಸಿ ಯಾವುದೇ ವೈಯಕ್ತಿಕ ಕ್ರೀಡೆಯಲ್ಲಿ ಬಹು ದೊಡ್ಡ ಸಾಧನೆ ಕಾಣದಂತಾಗಿದೆ ಇದು ಶುದ್ಧ ತಪ್ಪು ಎಂದು ಹೇಳಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಜ್ಞಾನ ಮತ್ತು ಕ್ರಿಯೆ ಎರಡು ಅಂಶಗಳು ಇದ್ದು, ಜ್ಞಾನ ಸತತ ಅಭ್ಯಾಸ ದಿಂದ ಲಭಿಸಿದರೆ, ಕ್ರಿಯೆ ಕ್ರೀಡಾ ಚಟುವಟಿಕೆ ಯಿಂದ ಲಭಿಸಿ ಆರೋಗ್ಯ ವೃದ್ಧಿಸಿ ಮನೋಸ್ಥೈರ್ಯ ತುಂಬುತ್ತದೆ ಎಂದು ಹೇಳಿದರು.

ಒಂದೂವರೆ ವರ್ಷದಿಂದ ರಾಜ್ಯ ಹ್ಯಾಂಡ್‍ಬಾಲ್ ಅಸೋಸಿಯೇಷನ್‍ಗೆ ಮಾನ್ಯತೆ ಇಲ್ಲದೆ ಸಮಸ್ಯೆ ಉಂಟಾಗಿತ್ತು. ಈಗ ರಾಜ್ಯ ಹ್ಯಾಂಡ್‍ಬಾಲ್ ಅಸೋಸಿಯೇಷನ್‍ಗೆ ಹ್ಯಾಂಡ್‍ಬಾಲ್ ಅಸೋಸಿಯೇಷನ್ ಫೆಡರೇಷನ್ ಆಫ್ ಇಂಡಿಯಾದಿಂದ ಮಾನ್ಯತೆ ದೊರೆತಿದ್ದು, ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಎಸ್.ಎಂ.ಎಫ್ ಕಾಲೇಜು ಮತ್ತು ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠದ ಸಹಯೋಗದಲ್ಲಿ ಹೊನ್ನಾಳಿಯಲ್ಲಿ ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್ ಕ್ರೀಡೆಯನ್ನು ನಡೆಸಲು ಅಗತ್ಯ ಸಿದ್ದತೆ ನಡೆಸಲಾಗಿದೆ. ಪೂರ್ಣ ಜವಾಬ್ದಾರಿಯನ್ನು ಕಾಲೇಜಿನ ಕ್ರೀಡಾ ನಿರ್ದೇಶಕ ಪ್ರಕಾಶ್ ನರಗಟ್ಟಿ ಅವರಿಗೆ ನೀಡಲಾಗಿದೆ ಎಂದರು. 

ಕರ್ನಾಟಕ ರಾಜ್ಯ ಹ್ಯಾಂಡ್‍ಬಾಲ್ ಅಸೋಸಿಯೇಷನ್ ನೂತನ ಅಧ್ಯಕ್ಷ ಡಾ.ಮನೋಜ ಸಾಹುಕಾರ ಮಾತನಾಡಿ, ರಾಜ್ಯ ಹ್ಯಾಂಡ್‍ಬಾಲ್ ಅಸೋಸಿಯೇಷನ್‍ಗೆ ಮಾನ್ಯತೆ ದೊರೆಯಲು ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ ಬಲವಾದ ಆಶೀರ್ವಾದ ಕಾರಣ ಎಂದು ಹೇಳಿದರು.

ಕರ್ನಾಟಕ ರಾಜ್ಯ ಹ್ಯಾಂಡ್‍ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ
ಬಿ.ಎಲ್.ಲೋಕೇಶ್, ಖಜಾಂಚಿ ಪ್ರಕಾಶ್‌ ನರಗಟ್ಟಿ, ಉಪಾಧ್ಯಕ್ಷ ಕೆ.ಜಿ.ಮಾದಪ್ಪ, ಎಸ್.ವಿನೋದ್, ಎಸ್‍ಎಂಎಸ್‍ಎಫ್ ಕಾಲೇಜು ಉಪನ್ಯಾಸಕ ಡಾ. ಪ್ರವೀಣ್‌ ದೊಡ್ಡಗೌಡ್ರು, ನಾಗೇಶ್, ಸಿದ್ದಲಿಂಗಸ್ವಾಮಿ, ಆಡಳಿತಾತ್ಮಕ ಸಿಬ್ಬಂದಿ ಎನ್. ಲೋಕೇಶ್ವರ ಮತ್ತು
ಇತರರು ಇದ್ದರು.