ಲೌಕಿಕ ಅಭಿಲಾಷಿಗಳ ಕಾಮಧೇನು ಶ್ರೀ ಮಹಾಂತ ಸ್ವಾಮೀಜಿ

ಲೌಕಿಕ ಅಭಿಲಾಷಿಗಳ ಕಾಮಧೇನು ಶ್ರೀ ಮಹಾಂತ ಸ್ವಾಮೀಜಿ

ಕರ್ನಾಟಕದಲ್ಲಿ ವಿಜಯಪುರವು ಒಂದು ದೊಡ್ಡ ಜಿಲ್ಲೆ. ಅದು ಗಾತ್ರದಲ್ಲಿ ಹಿರಿದಾಗಿರುವಂತೆ ಸತ್ವದಲ್ಲಿಯೂ ಹಿರಿದಾಗಿದೆ. ಇಲ್ಲಿರುವುದೆಲ್ಲವೂ ದೊಡ್ಡದೇ. ಬರಗಾಲವೂ ದೊಡ್ಡದು. ಬಿಳಿ ಮುತ್ತಿನಂತಹ ಬಿಳಿ ಜೋಳದ ರಾಶಿಯೂ ದೊಡ್ಡದು. ಗೋಲ ಗುಮ್ಮಟ ದೊಡ್ಡದು. ಮಹಾತ್ಮ ಬಸವೇಶ್ವರರಿಂ ದೊಡಗೂಡಿದ ಶಿವಶರಣರ ಸಮೂಹವು ದೊಡ್ಡದು. ಇಂತಹ ಈ ವಿಜಯಪುರ ಜಿಲ್ಲೆಯು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಡಾ. ಮಹಾಂತ ಮಹಾಸ್ವಾಮಿಗಳನ್ನು ಕೊಟ್ಟು ಆ ದೊಡ್ಡತನವನ್ನು ಗಟ್ಟಿಗೊಳಿಸಿದೆ.

ಮನಗೂಳಿಯಲ್ಲಿ ಪಂಚಮಸಾಲಿಯವರ ಜನ ಸಂಖ್ಯೆ ಹೆಚ್ಚು. ಅವರಲ್ಲಿ ತಪಶೆಟ್ಟಿಯವರ ಮನೆತನಗಳು ಹತ್ತಿಪ್ಪತ್ತು. ಅವುಗಳಲ್ಲಿ ಸಂಗನಬಸಪ್ಪ ರೇವಣಸಿದ್ಧಪ್ಪ ತಪಶೆಟ್ಟಿಯವರದು ಒಂದು. ಈ ಸಂಗನಬಸಪ್ಪನ ಧರ್ಮಪತ್ನಿ ಕಾಳಮ್ಮ. ಈ ದಂಪತಿ ಪುಣ್ಯಗರ್ಭದಿಂದ ಜನಿಸಿದವರು ರೇವಣಸಿದ್ಧ. ಈತನು ಅವರಿಗೆ ಎರಡನೆಯ ಮಗ. ಈತನು ಜನಿಸಿದ್ದು ದಿನಾಂಕ 29-09-1938. ಸ್ಫುರದ್ರೂಪಿಯಾದ ಈ ಮಗನಿಗೆ ರೇವಣಸಿದ್ಧ ಎಂದು ನಾಮಕರಣ ಮಾಡಿದರು. ಇದು ಅವರ ಅಜ್ಜನ ಹೆಸರಾಗಿದ್ದುದರಿಂದ ಇವರನ್ನು ಎಲ್ಲರೂ ಅಕ್ಕರೆಯಿಂದಲೇ ಕಾಣುತ್ತಿದ್ದರು.

ವಯಸ್ಸಿಗೆ ಅನುಗುಣವಾಗಿ ಆರನೇಯ ವರ್ಷಕ್ಕೆ ಮನಗೂಳಿಯಲ್ಲಿಯೇ ಶಾಲೆಗೆ ಹಾಕಿದರು. ನಂತರ ವಿಜಾಪುರದ ಶ್ರೀ ಸಿದ್ಧೇಶ್ವರ ಮಾಧ್ಯಮಿಕ ಶಾಲೆಗೆ ಕಳುಹಿಸಿದರು. ಅಲ್ಲಿ ಅವರು ಪ್ರಥಮ ಶ್ರೇಣಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸು ಮಾಡಿದರು. ಅಷ್ಟೊತ್ತಿಗಾಗಲೇ ಅವರನ್ನು ಮನಗೂಳಿಯ ಹಿರೇಮಠಕ್ಕೆ ಪಟ್ಟಾಧಿಕಾರಿಯನ್ನಾಗಿ ಮಾಡಿಕೊಳ್ಳುವ ನಿರ್ಣಯವಾಗಿತ್ತು. ಆದ್ದರಿಂದ ಅವರನ್ನು ಮಠದ ಮರಿಯನ್ನಾಗಿ ಇರಿಸಿಕೊಳ್ಳಲಾಯಿತು. ಮುಂದೆ ದಿನಾಂಕ 14-06-1959 ರಂದು ವಿಧಿವತ್ತಾಗಿ ಪಟ್ಟಾಧಿಕಾರ ಮಹೋತ್ಸವವನ್ನು ನೆರವೇರಿಸಲಾಯಿತು. ಆಗ ವಟು ರೇವಣಸಿದ್ಧನು ಶ್ರೀ ಮಹಾಂತ ಶಿವಾಚಾರ್ಯರಾದರು.

ಪಂಚಮ ಸಾಲಿ ಸಮಾಜಕ್ಕೆ ಒಂದು ಗುರುಪೀಠ ಇದ್ದರೆ ಒಳ್ಳೆಯದು. ಗುರುವಿನ ಮಾರ್ಗದರ್ಶನದಲ್ಲಿ ಸಮಾಜ ಸಂಘಟನೆ ಮಾಡುವುದು ಸೂಕ್ತ ಎಂಬ ಹಿನ್ನೆಲೆಯಲ್ಲಿ ಸಮಾಜದ ಹಿರಿಯರು 2005ರಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆ  ಮಾಡುವ ನಿರ್ಣಯ ಕೈಗೊಂಡರು. 

ಸಮಾಜದ ಮುಖಂಡರು ಸಾಕಷ್ಟು ಚರ್ಚೆ ನಡೆಸಿ ಶ್ರೀ ಮಹಾಂತ ಶಿವಾಚಾರ್ಯರನ್ನು ಸ್ಥಿರ ಪಟ್ಟಾಧ್ಯಕ್ಷರಾಗಿ ಆಯ್ಕೆ ಮಾಡಿದರು. 2008 ರ ಫೆಬ್ರವರಿ 18 ರಂದು ಹರಿಹರದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿಯವರು ಪಂಚಮ ಸಾಲಿ ಪೀಠದ ಸ್ಥಿರ ಪೀಠಾಧಿಪತಿಗಳಾಗಿ ಪೀಠ ಅಲಂಕರಿ ಸಿದರು. ಡಾ. ಮಹಾಂತ ಶಿವಾ ಚಾರ್ಯ ಸ್ವಾಮೀಜಿ ತಮ್ಮ ಇಳಿ ವಯಸ್ಸಿನಲ್ಲೂ ನಾಡಿನಾ ದ್ಯಂತ ಸಂಚರಿಸಿ ಧಾರ್ಮಿಕ  ಆಚರಣೆಗಳನ್ನು ಉದ್ದೀಪನ ಗೊಳಿಸಿದರು. 

ಡಾ. ಮಹಾಂತ ಮಹಾಸ್ವಾಮೀಜಿ  ದೈಹಿಕವಾಗಿ ನಮ್ಮೊಂದಿಗಿದ್ದರೆ ಅವರಿಗೆ 82 ವರ್ಷಗಳು ಪೂರ್ಣಗೊಳ್ಳು ತ್ತಿದ್ದವು. ಆದರೆ ಜನಮಾನಸದಲ್ಲಿ ಅವರು ಸದಾ ನಮ್ಮೊಂದಿಗಿದ್ದಾರೆ. 

ಅವರ ಮಾಗಿದ ವ್ಯಕ್ತಿತ್ವ. ಅಸ್ಖಲಿತವಾದ ಪಾಂಡಿತ್ಯಪೂರ್ಣ ವಾಗ್ಝರಿ, ಯಾವುದನ್ನಾದರೂ ಧೈರ್ಯದಿಂದ ಎದುರಿಸಿ, ಗುರಿ ಮುಟ್ಟಬಲ್ಲೆನೆಂಬ ಛಲ. ಇವೆಲ್ಲಕ್ಕೂ ಮಿಗಿಲಾದ ದಿವ್ಯಾನುಭವವನ್ನು ಹೊಂದಿದ ಮಹಾಪುರುಷ. ವ್ಯಕ್ತಿಯಾಗಿ ಜನಿಸಿ ಶಕ್ತಿಯಾಗಿ ಪರಿವರ್ತನೆ ಹೊಂದಿ ಕಷ್ಟದಲ್ಲಿರುವವರಿಗೆ ಕಲ್ಪವೃಕ್ಷ ವಾಗಿ, ಲೌಕಿಕ ಅಭಿಲಾಷಿ ಗಳ ಕಾಮಧೇನುವಾಗಿ, ಜಿಜಾಸುಗಳಿಗೆ ಮಾರ್ಗದರ್ಶಿ ಯಾಗಿ, ಮುಮುಕ್ಷಗಳಿಗೆ ದಿವ್ಯ ಜ್ಯೋತಿಯಾಗಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.


ಮಹಾಂತೇಶ್ ವಿ. ಒಣರೊಟ್ಟಿ
ದಾವಣಗೆರೆ.