ಮಾನವನ ಬದುಕಿಗೆ ವರವಾಗಿರುವ ಮರಗಳನ್ನು ಬೆಳೆಸಿ : ಶ್ರೀ ಮುರುಘಾ ಶರಣರ ಕರೆ

ಮಾನವನ ಬದುಕಿಗೆ ವರವಾಗಿರುವ ಮರಗಳನ್ನು ಬೆಳೆಸಿ : ಶ್ರೀ ಮುರುಘಾ ಶರಣರ ಕರೆ

ಚಿತ್ರದುರ್ಗ, ಆ.19-  ಪರಿಸರವನ್ನು ಯಾರೂ ನಿರ್ಲಕ್ಷಿಸಬಾರದು. ಅಂತಹ ದೇಶದಲ್ಲಿ ಪ್ರಾಕೃತಿಕ ವೈಪರೀತ್ಯಗಳು ಉಂಟಾಗುತ್ತವೆ. ಮರಗಳಿದ್ದರೆ ಮಾನವ. ಮರ ಮಾನವನ ಬದುಕಿಗೆ ವರ. ವರವಾಗಿರುವ ಮರಗಳನ್ನು ಬೆಳೆಸಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಬೆಂಗಳೂರು, ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯ, ಜಿಲ್ಲಾ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷತಾ ಕೇಂದ್ರ, ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿ ಮತ್ತು ಸ್ಪೀಚ್ ಮುಂದಾಳು ಸ್ವಯಂ ಸೇವಾ ಸಂಸ್ಥೆ ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ವಿಶ್ವ ಜೈವಿಕ ಇಂಧನ ದಿನಾಚರಣೆಯಲ್ಲಿ ಜೈವಿಕ ಇಂಧನ ಗಿಡನೆಟ್ಟು ಮತ್ತು ವಾಹನಕ್ಕೆ ಜೈವಿಕ ಇಂಧನ ಹಾಕುವುದರ ಮೂಲಕ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.

  ಸ್ವಾರ್ಥದ ಕಾರಣದಿಂದ ಫಲ ಕೊಡುವ ಮರಗಳನ್ನು ಬೆಳೆಸುತ್ತಾರೆ. ಅದರ ಜೊತೆಗೆ ನೆರಳು ಕೊಡುವ, ಆಮ್ಲಜನಕ ನೀಡುವ ಪ್ರಾಣಿಪಕ್ಷಿಗಳಿಗೆ ಆಹಾರ ಕೊಡುವ ಮರಗಳನ್ನೂ ಬೆಳೆಸಬೇಕು. ಮಾನವ ಮಾನವ ಸಂತತಿಯನ್ನು ಮಾತ್ರ ನೋಡುತ್ತಾನೆ. ಮಾನವ ಕುಲ ತನ್ನ ಉಳಿವಿಗಾಗಿ ಹೇಗೆ ಹೋರಾಡುತ್ತದೋ ಅದರಂತೆ ವೃಕ್ಷ ಸಂತತಿಯ ಉಳಿವಿಗಾಗಿಯೂ ಶ್ರಮಿಸಬೇಕು. ಪರಿಸರವನ್ನು ಯಾರೂ ನಿರ್ಲಕ್ಷಿಸಬಾರದು ಎಂದರು.

 ಜೈವಿಕ ಇಂಧನಕ್ಕೆ ಸಂಬಂಧಿಸಿದ ಮರಗಳು ಬೇಕಿದೆ. ಬರಿದಾಗುವ ಇಂಧನಕ್ಕೆ ಪರ್ಯಾಯವಾಗಿ ಬದಲಿ ಇಂಧನವನ್ನು ಮಾಡಿಕೊಳ್ಳಬೇಕಿದೆ. ದುಬೈ, ಮಸ್ಕಟ್ ಮೊದಲಾದ ಇಂಧನವಿರುವ ರಾಷ್ಟ್ರಗಳು ನಮ್ಮದು ಮುಗಿದುಹೋಗುವ ಸಂಪನ್ಮೂಲಗಳೆಂದು ಅರಿತು ಮರ, ಗಿಡ, ಕೃತಕ ಬೆಟ್ಟಗಳನ್ನು ಪರ್ಯಾಯ ಇಂಧನಕ್ಕಾಗಿ ಬೆಳೆಸುತ್ತಿದ್ದಾರೆ. ಸಂಪನ್ಮೂಲದ ಬಗ್ಗೆ ಗಂಭೀರವಾಗಿ ಅವರು ಚಿಂತನೆ ಮಾಡುತ್ತಿದ್ದಾರೆ. ಅವರಂತೆ ನಾವೂ ಬದಲಿ ಇಂಧನದ ಬಗ್ಗೆ ಜಾಗರೂಕರಾಗಬೇಕಿದೆ ಎಂದರು.

ಉಪಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ.ಚೋಳರಾಜಪ್ಪ ಮಾತನಾಡಿ, ಚಿತ್ರದುರ್ಗದ ಜನ ಬೇವಿನ ಗಿಡಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಬೆಳೆಸುತ್ತಿದ್ದಾರೆ. ಗಿಡಗಳನ್ನು ಬೆಳೆಸಬೇಕು, ಉಳಿಸಬೇಕು. ಕಚ್ಚಾ ತೈಲವನ್ನು ನಾವು ವಾಪಾಸ್ ಪಡೆಯಲು ಸಾಧ್ಯವಿಲ್ಲ. ಇಂಧನದ ಸಮಸ್ಯೆ ಬಗೆಹರಿಯಬೇಕೆಂದರೆ ಜೈವಿಕ ಇಂಧನ ಮೊರೆ ಹೋಗಬೇಕಿದೆ. ನಮ್ಮ ದೇಶದಲ್ಲಿ ಶೇ.20ರಷ್ಟು ಮಾತ್ರ ಇಂಧನ ತೈಲ ಉತ್ಪತ್ತಿಯಾಗುತ್ತಿದೆ. ಉಳಿದ ಶೇ.80 ರಷ್ಟು ಇಂಧನವನ್ನು ನಾವು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಕಚ್ಚಾ ತೈಲ ಮುಗಿದುಹೋಗುವ ಸಂಪನ್ಮೂಲ. ಹಾಗಾಗಿ ಜೈವಿಕ ಇಂಧನದತ್ತ ಹೋಗಬೇಕು. ಜೈವಿಕ ಇಂಧನ ಉತ್ಪತ್ತಿ ಮಾಡುವ ಸಸಿಗಳನ್ನು ಹೆಚ್ಚಾಗಿ ಬೆಳೆಯಬೇಕಿದೆ. ಅವು ನಮಗೆ ಅತ್ಯಂತ ದೊಡ್ಡ ಸಂಪನ್ಮೂಲವಾಗಲಿದೆ. ಇದರಿಂದ ಯಾವುದೇ ಹಾನಿ ಇಲ್ಲ. ಕಾರ್ಬನ್‌ಅನ್ನು ಉಸಿರಾಡುವ ಶಕ್ತಿ ಇರುವುದು ಗಿಡ ಮರಗಳಿಗೆ ಮಾತ್ರ ಎಂದು ತಿಳಿಸಿದರು.

ಸ್ಪೀಚ್ ಸಂಸ್ಥೆಯ ವ್ಯವಸ್ಥಾಪಕ ಸಂತೋಷ್ ಮತ್ತು ಕಾರ್ಯದರ್ಶಿ ಎಚ್.ಶೇಷಪ್ಪ, ಜಿಲ್ಲಾ ಜೈವಿಕ ಇಂಧನ ಸಂಶೋಧನೆ ಮಾಹಿತಿ ಮತ್ತು ಪ್ರಾತ್ಯಕ್ಷತಾ ಕೇಂದ್ರದ ಮುಖ್ಯ ಸಂಯೋಜಕ ಡಾ. ಪಿ.ಬಿ. ಭರತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಕಾಲೇಜು ಪ್ರಾಂಶುಪಾಲ ಡಾ. ಶಾಂತಪ್ಪ ಇನ್ನಿತರರಿದ್ದರು.

ಶ್ರೀಮತಿ ವಿಜಯಲಕ್ಷ್ಮೀ ಹಿರೇಮಠ ಪ್ರಾರ್ಥಿಸಿದರು. ಡಾ. ಬಿ.ಸಿ.ಶಾಂತಪ್ಪ ಸ್ವಾಗತಿಸಿದರು. ಸುನಿಲ್‌ಕುಮಾರ್ ಬಿ.ಕೆ. ನಿರೂಪಿಸಿದರು. ಜೆ. ಸತೀಶ್ ವಂದಿಸಿದರು.