ಕೋವಿಡ್ ಕಾಂಚಾಣ!!!

ಕೋವಿಡ್ ಕಾಂಚಾಣ!!!

ಬ್ರೋ ನಮ್ಮ ಆರ್ಥಿಕ ಸ್ಥಿತಿ ತುಂಬಾ ಲಾಸ್ ನಲ್ಲಿ ಐತೆ. ಈ ಕೋವಿಡ್ ಜಮಾನದಲ್ಲಿ ದುಡ್ಡು ಮಾಡೋದು ಹೇಗೆ.?

ಬ್ರದರ್ ಈ ದುಡ್ಡು ಮಾಡೋದು ಒಂದು ಕಲೆ. ಅದು ಎಲ್ಲರಿಗೂ ಒಲಿಯೋದಿಲ್ಲ. ಇದಕ್ಕೇ ಬಿಸಿನೆಸ್ ಟ್ಯಾಕ್ಟಿಸ್ ಬೇಕು. ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಳ್ಳೋ ಕಲೆ ಬಂಡವಾಳಶಾಹಿಗಳಿಗೆ ಮಾತ್ರ ಗೊತ್ತಿರುತ್ತೆ.

ಹಂಗಂತಿಯಾ?

ಹ್ಞೂಂನೋ ಮಾರಾಯಾ. ಸದ್ಯಕ್ಕೆ ಎಲ್ಲರೂ ದುಡ್ಡು ಮಾಡೋಕೆ ಆಗೋಲ್ಲ. ಕೆಲವರನ್ನು ಬಿಟ್ಟು!

ಕೆಲವರು ಅಂದ್ರೆ ಯಾರು ಯಾರಪಾ? ಅದು ಹೆಂಗೆ?

ನೋಡಪಾ. ಈ ಕೋವಿಡ್ ವಿಷಯದಲ್ಲಿ, ಒಂದು ಸಾರಿ ಗಂಟಲು ದ್ರವ ಸ್ಯಾಂಪಲ್ ಟೆಸ್ಟ್ ಮಾಡೋಕೆ ನಾಲ್ಕು ಸಾವಿರ ರೂಪಾಯಿ. ಪಾಸಿಟಿವ್ ಅಂತಾ ರಿಸಲ್ಟ್ ಬಂದ್ರೇ ಒಬ್ಬರಿಗೆ ನಾಲ್ಕು ಲಕ್ಷ ರೂಪಾಯಿ ಖರ್ಚಾಗುತ್ತೆ. ನಾಲ್ಕು ಸಾವಿರ ಜನರಿಗೆ ಕೇವಲ ಟೆಸ್ಟ್ ಮಾಡೋಕೆ ಒಂದೂವರೆ ಕೋಟಿ! ಕೇವಲ ನಾಲ್ಕು ನೂರು ಪಾಸಿಟಿವ್ ಪೇಷೆಂಟ್ಸ್ ಟ್ರೀಟ್ ಮಾಡೋಕೆ ಹದಿನಾರು ಕೋಟಿ!

ಹೌದಲ್ಲಾ!

ಒಂದೊಂದು ಜಿಲ್ಲೆಯಲ್ಲಿ ಸರ್ಕಾರದ ಬೊಕ್ಕಸದಿಂದ ಎಷ್ಟು ಖರ್ಚಾಗಿ ರಬಹುದು? ಇದನ್ನು ಕ್ರಾಸ್ ಚೆಕ್ ಮಾಡೋಕೆ ಸದ್ಯಕ್ಕೆ ಯಾರ ಕೈಯಿಂ ದಾನೂ ಆಗೊಲ್ಲ. ಉತ್ತರ ಭಾರತದ ಕೆಲವು ಜಿಲ್ಲೆಗಳಲ್ಲಿ ಸುಳ್ಳು ಸುಳ್ಳೇ ಕೇಸ್ ಸೃಷ್ಟಿ ಮಾಡಿ ಲೆಕ್ಕ ತೋರಿಸಿ, ಇವರು ದುಡ್ಡು ಮಾಡಿದಾರೆ ಅಂತಾ ಸುದ್ದಿ.

ಯಾರು?

ಅಧಿಕಾರಿಗಳು!! ಜನಪ್ರತಿನಿಧಿಗಳು !!!

ಈಗ ನಾವೂ ಒಂದು ಕೋವಿಡ್ ಟೆಸ್ಟಿಂಗ್ ಲ್ಯಾಬ್ ಶುರು ಮಾಡಿ ಈ ಡಾಕ್ಟರ್ ಗಳನ್ನು ಬುಕ್ ಮಾಡಿಕೊಂಡರೆ ದುಡ್ಡು ಮಾಡಬಹುದಲ್ವಾ !? ಬರುವ ಪೇಷೆಂಟ್ ಗಳಿಗೆ ಮೊದಲಿಗೇ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬನ್ನಿ ಅಂತಾ ಅವರು ನಮ್ಮ ಹತ್ತಿರ ಕಳುಹಿಸ್ತಾರೆ. ನಾವು ದುಡ್ಡು ಇಸ್ಕೊಂಡು ಟೆಸ್ಟ್ ಮಾಡೋದು. ಅದರಲ್ಲೇ ಡಾಕ್ಟರ್ ಗಳಿಗೆ ಕಮೀಷನ್ ಕೊಡೋದು.

ಗುರೂ ಇದು ನಾವು ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕೆ ಬ್ಯಾಕ್ ಗ್ರೌಂಡಿನಲ್ಲಿ ದೊಡ್ಡ ಪ್ರಭಾವ ಇರಬೇಕು.

ಆಯ್ತು, ಈ ಬೇರೆ ಬೇರೆ ದುಡಿಮೆ ಮಾಡೋರು ಯಾವ ರೀತಿ ದುಡಿಮೆ ಮಾಡಬಹುದು?

ನಾನು ಮೊದಲೇ ಹೇಳಿದ ಹಾಗೇ ಸಂದರ್ಭಕ್ಕೆ ತಕ್ಕಂತೆ ಈ ಟ್ಯಾಕ್ಟಿಸ್ ಉಪಯೋಗಿಸುತ್ತಾರೆ. ಉದಾಹರಣೆಗೆ ಗಾರ್ಮೆಂಟ್ ಫ್ಯಾಕ್ಟರಿಯವರು ಕೋವಿಡ್ ರೆಸಿಸ್ಟೆನ್ಸ್ ಬಟ್ಟೆಗಳು, ಡಿಸೈನ್ಡ್ ಮಾಸ್ಕ್ ಗಳು ಅಂತಾ ಮಾರ್ಕೆಟಲ್ಲಿ ಬಿಟ್ಟಿದಾರೆ. ಡಿಸ್ಟಿಲರಿಯವರು ಆಲ್ಕೋಹಾಲ್ ಗೆ ಪರ್ಫ್ಯೂಮ್ ಮಿಕ್ಸ್ ಮಾಡಿ ಸ್ಯಾನಿಟೈಸರ್ ಪ್ರೊಡಕ್ಷನ್ ಶುರು ಮಾಡಿದ್ದಾರೆ.

ಹೌದು.

ಇಷ್ಟರಲ್ಲಿಯೇ ಕೋವಿಡ್ ಕಾಫ್ ಸಿರಪ್ ಅಂತಾ ಔಷಧಿ ಕಂಪೆನಿಗಳು ಶುರು ಮಾಡುತ್ತವೆ. ಕೋವಿಡ್ ಫ್ರೀ ಇಡ್ಲಿ ಮಿಕ್ಸ್, ಸಾಂಬಾರ್ ಪುಡಿ ಇತ್ಯಾದಿ ಅಂತಾ ಫುಡ್ ಪ್ರೋಡಕ್ಟ್ಸ್ ಕಂಪನಿಗಳು ಶುರು ಹಚ್ಚಿಕೊಳ್ತಾವೆ. ಒಟ್ಟಾರೇ ಏನೇ ಮಾಡಿದ್ರೂ ಅದರ ಮುಂದೆ ಕೋವಿಡ್ ಫ್ರೀ ಎಂದು ಸೇರಿಸೋ ಫ್ಯಾಷನ್ ಶುರು ಆಗುತ್ತೆ.

ಈಗಾ ದೇವಸ್ಥಾನಗಳಲ್ಲಿ ಹೆಚ್ಚು ಭಕ್ತರಿಲ್ಲದೇ  ಪೂಜಾರಿಗಳಿಗೆ ದಕ್ಷಿಣೆ ಕಡಿಮೆ ಆಗಿದೆಯಲ್ಲಾ ಅವರು ಏನು ಮಾಡ್ತಾರೆ?

ಹೊಸ ಪೂಜಾ ಮತ್ತು ಹೋಮದ ಟ್ಯಾಕ್ಟಿಸ್. ಅದಕ್ಕೆ ಭರ್ಜರಿ ಫೀಸ್ ಚಾರ್ಜ್ ಮಾಡ್ತಾರೆ.

ಯಾವ ರೀತಿಯ ಪೂಜೆ?

ಕೊರೊನಾ ಸಂಕಟ ಹರ ಪೂಜೆ.

ಮತ್ತೇ ಹೋಮ?

ಕೋವಿಡ್ ಹೋಮ!!!

 

 

ಆರ್.ಟಿ. ಅರುಣ್‌ಕುಮಾರ್
arunartist@gmail.com