ಮುರುಘಾರಾಜೇಂದ್ರ ಮಠದಲ್ಲಿ ಬಂಜಾರ, ಲಿಂಗಾಯತ ಸಮಾಜದ ಇಬ್ಬರಿಗೆ ಲಿಂಗದೀಕ್ಷೆ

ಮುರುಘಾರಾಜೇಂದ್ರ ಮಠದಲ್ಲಿ ಬಂಜಾರ,  ಲಿಂಗಾಯತ ಸಮಾಜದ ಇಬ್ಬರಿಗೆ ಲಿಂಗದೀಕ್ಷೆ

ಚಿತ್ರದುರ್ಗ, ಜೂ. 22 – ಶರಣ ಸಂಸ್ಕೃತಿ, ಕಾಯಕದ ಮೇಲೆ ಶ್ರದ್ಧೆ, ಲಿಂಗಾಂಗ ಸಾಮರಸ್ಯ ಬಯಸಿ, 12ನೇ ಶತಮಾನದಲ್ಲಿ ಲಿಂಗ ಸಂಸ್ಕಾರವನ್ನು ಪಡೆದು ಲಿಂಗಾಯತರು ಶರಣಾ ಯತರಾದರು. ಅದೇ ಪರಂಪರೆಯ ಶೂನ್ಯಪೀಠವಾದ ಶ್ರೀ ಮುರುಘ ರಾಜೇಂದ್ರ ಮಠದಲ್ಲಿ ನೂರಾರು ಸಾಧಕರಿಗೆ ಲಿಂಗದೀಕ್ಷೆ ಮಾಡಲಾಗು ತ್ತಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶ್ರೀ ಮುರುಘರಾಜೇಂದ್ರ ಮಠದಲ್ಲಿ ಇಂದು ನಡೆದ ಲಿಂಗದೀಕ್ಷಾ ಕಾರ್ಯಕ್ರಮದಲ್ಲಿ ಬಂಜಾರ ಮತ್ತು ಲಿಂಗಾಯತ ಸಮಾಜಕ್ಕೆ ಸೇರಿದ ಇಬ್ಬರು ಯುವಕರಿಗೆ ಲಿಂಗದೀಕ್ಷೆ ನೀಡಿ ಶರಣರು ಆಶೀರ್ವಚನ ನೀಡಿದರು.

ಚಿತ್ರದುರ್ಗ ಜೋಗಿಮಟ್ಟಿ ರಸ್ತೆಯ ಬಂಜಾರ ಸಮಾಜದ ಶ್ರೀಮತಿ ರೇಷ್ಮಾಬಾಯಿ ಮತ್ತು ಶ್ರೀನಿವಾಸ್‌ ನಾಯಕ ದಂಪತಿಯ ಮಗ ನಂದಾಮಸಂದ್ (12) ಅವರಿಗೆ ಲಿಂಗದೀಕ್ಷೆ ನೀಡಿ, ಶ್ರೀ ನಂದಾಮಸಂದ್ ಸೇವಾಲಾಲ್ ಸ್ವಾಮೀಜಿ ಎಂದೂ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ
ತಾಲ್ಲೂಕಿನ ಸಾಸಲು ಗ್ರಾಮದ ಲಿಂಗಾಯತ ಸಮಾಜಕ್ಕೆ ಸೇರಿದ ಶ್ರೀಮತಿ ಮಂಜುಳಮ್ಮ ಮತ್ತು ಚನ್ನಬಸವಯ್ಯ ದಂಪತಿಯ ಪುತ್ರ ನಿಂಗರಾಜು (30) ಅವರಿಗೆ ಲಿಂಗದೀಕ್ಷೆ ನೀಡಿ, ಶ್ರೀ ಬಸವಲಿಂಗರಾಜ ದೇವರು ಎಂದೂ ನಾಮಕರಣ ಮಾಡಲಾಗಿದೆ. ಇಬ್ಬರು ಸಾಧಕರು ಶ್ರೀಮಠದ ಗುರುಕುಲ ದಲ್ಲಿ ಶ್ವೇತ ವಸ್ತ್ರ ಧಾರಿಗಳಾಗಿ, ಹೆಚ್ಚಿನ ವಿದ್ಯಾಭ್ಯಾಸ  ಪಡೆಯಲಿದ್ದಾರೆ ಎಂದು ಶರಣರು ತಿಳಿಸಿದರು.

ಲಿಂಗದೀಕ್ಷೆ ಪಡೆದಿರುವ ವಟುಗಳು ಉತ್ತಮ ವಿದ್ಯಾಭ್ಯಾಸ, ಬಸವ ತತ್ತ್ವವನ್ನು ಕಲಿತು, ಜನಾಂಗಕ್ಕೆ ಅವರು ದಾರಿ ತೋರಿಸಬೇಕು. ಈರ್ವರು ಶ್ರೀಮಠದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಾ, ಹೆಚ್ಚಿನದನ್ನು ನಮ್ಮ ಸಾಧಕರೊಟ್ಟಿಗೆ ಗುರುಕುಲದಲ್ಲಿ ಕಲಿತು, ಬಸವಾದಿ ಶರಣರ ಪರಂಪರೆ, ತತ್ತ್ವ ಸಿದ್ಧಾಂತಗಳನ್ನು ಸಮಾಜಕ್ಕೆ ಮತ್ತಷ್ಟು ಪರಿಚಯಿಸಬೇಕು. ಉತ್ತಮ ಸಾಧನೆ ಗಳನ್ನು ಮಾಡಿ ಮೌಢ್ಯತೆಗಳನ್ನು ತಿದ್ದಬೇಕು. ಗುರು ಮುಟ್ಟಿ ಗುರುವಾಗುವ ಸಂಬಂಧವೇ ಶರಣ ಪರಂಪರೆ. ಸಾಧನೆಯ ಮೂಲಕ ಹೆಚ್ಚಿನ ಅನುಭವವಾಗುತ್ತದೆ. ತಮ್ಮ ಜನಾಂಗದಲ್ಲಿ ಜಾಗೃತಿ ಮೂಡಿಸ ಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಂಜಾರ ಗುರುಪೀಠದ ಕಾರ್ಯಾಧ್ಯಕ್ಷ ರಾಜಾ ನಾಯ್ಕ, ಉಪಾಧ್ಯಕ್ಷ ಜೆ.ಮಾಧವ ನಾಯ್ಕ, ಪ್ರಧಾನ ಕಾರ್ಯದರ್ಶಿ ಕೆ.ಮಂಜುನಾಥ್‌ ನಾಯ್ಕ, ಎಂಕುಸಾದ್ ಬಾವಾಜಿ, ಸುಮಿತ್‌ಕುಮಾರ್, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯ ದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಆರ್.ಲಿಂಗರಾಜು ಮುಂತಾದವರಿದ್ದರು.