ಉಕ್ಕಡಗಾತ್ರಿ ದೇವಸ್ಥಾನದಲ್ಲಿ ದರ್ಶನಕ್ಕೆ ಸಿದ್ಧತೆ

ಉಕ್ಕಡಗಾತ್ರಿ ದೇವಸ್ಥಾನದಲ್ಲಿ ದರ್ಶನಕ್ಕೆ ಸಿದ್ಧತೆ

ಮಲೇಬೆನ್ನೂರು, ಜೂ. 6- ಸರ್ಕಾರದ ಸೂಚನೆಯಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನಾಡಿದ್ದು ದಿನಾಂಕ 8 ರಿಂದ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುವುದು ಎಂದು ಉಪ ತಹಶೀಲ್ದಾರ್ ರವಿ ತಿಳಿಸಿದ್ದಾರೆ.

‘ಜನತಾವಾಣಿ’ಯೊಂದಿಗೆ ಮಾತನಾಡಿದ ಅವರು ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಮಲೇಬೆನ್ನೂರು ಹೋಬಳಿಯ 14 ದೇವಸ್ಥಾನಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಅಗತ್ಯ ಸೂಚನೆಗಳನ್ನು ನೀಡಲಾಗಿದೆ.

ದೇವಸ್ಥಾನದ ಆವರಣಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ  ಬಾಕ್ಸ್‌ಗಳನ್ನು ಕಡ್ಡಾಯ ವಾಗಿ ಹಾಕ ಬೇಕು. ತೀರ್ಥ-ಪ್ರಸಾದ ಕೊಡುವಂತಿಲ್ಲ, ಹಣ್ಣು-ಕಾಯಿ ತರುವಂತಿಲ್ಲ. ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ದೇವರ ದರ್ಶನ ಮಾತ್ರ ಮಾಡಬೇಕು. ದೇವಸ್ಥಾನಗಳಲ್ಲಿ ಸ್ಯಾನಿಟೈಸರ್ ಇಡ ಬೇಕು. ಭಕ್ತರು ಪಾದರಕ್ಷೆಗಳನ್ನು ದೇವ ಸ್ಥಾನದಿಂದ ದೂರದಲ್ಲಿಯೇ  ಪ್ರತ್ಯೇಕವಾಗಿ ಬಿಟ್ಟು ಬರ ಬೇಕೆಂಬ ಸೂಚನೆಯನ್ನು ದೇವಸ್ಥಾನದವರು ನೀಡಬೇಕು.

ಕನಿಷ್ಠ ವಾರಕ್ಕೊಮ್ಮೆ ದೇವಸ್ಥಾನಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸರ್ ಮಾಡಬೇಕೆಂದು ಹೇಳಲಾಗಿದೆ ಎಂದು ಉಪ ತಹಶೀಲ್ದಾರ್ ರವಿ ಮಾಹಿತಿ ನೀಡಿದರು.

ಕೊಮಾರನಹಳ್ಳಿಯ ಹೆಳವನಕಟ್ಟೆ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನ, ಮಲೇಬೆನ್ನೂರಿನ ಬಸವೇಶ್ವರ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ, ಏಕನಾಥೇಶ್ವರಿ ದೇವಸ್ಥಾನ, ಹರಳ ಹಳ್ಳಿಯ ಹನುಮಂತ ದೇವರ ದೇವಸ್ಥಾನ, ಕುಂಬ ಳೂರಿನ ಹನುಮಂತ ದೇವರ ದೇವಸ್ಥಾನ, ಜಿಗಳಿಯ ರಂಗನಾಥಸ್ವಾಮಿ ದೇವಸ್ಥಾನ, ದಿಬ್ಬದಹಳ್ಳಿಯ ಹನುಮಂತದೇವರು, ಉಕ್ಕಡಗಾತ್ರಿಯ ಹರಿ ಹರೇಶ್ವರ, ಕಲ್ಲೇಶ್ವರ ದೇವಸ್ಥಾನಗಳು, ಎರೇ ಬೂದಿಹಾಳ್ ಗ್ರಾಮದ ಹನುಮಂತ ದೇವರು, ವಾಸನದ ಹನುಮಂತ ದೇವರು, ಧೂಳೆಹೊಳೆಯ ರಾಮೇಶ್ವರ ದೇವಸ್ಥಾನ, ವಾಸನದ ಕಲ್ಲೇಶ್ವರ, ಯಲವಟ್ಟಿಯ ಹನುಮಂತ ದೇವರ ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಒಳಪ್ಟಟಿದ್ದು, ಜೂ. 8ರ ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಅಧಿಕೃತವಾಗಿ ಓಪನ್ ಆಗಲಿವೆ.

ಅಜ್ಜಯ್ಯನ ದರ್ಶನಕ್ಕೆ ಸಿದ್ಧತೆ : ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ದೇವಸ್ಥಾನದಲ್ಲಿ  ಸೋಮವಾರದಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲು ಸಕಲ ಸಿದ್ಧತೆ ಮಾಡಲಾಗುತ್ತಿದೆ. ಭಕ್ತರ ಪ್ರವೇಶ – ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ  ಬಿಳಿ ಬಣ್ಣದ ಬಾಕ್ಸ್‌ಗಳನ್ನು ಹಾಕಲಾಗಿದೆ. ಅಲ್ಲಲ್ಲಿ ಸ್ಯಾನಿಟೈಸರ್ ಬಾಟೆಲ್ ಇಡಲಾಗಿದೆ ಎಂದು ಗದ್ದುಗೆ ಟ್ರಸ್ಟ್  ಕಮಿಟಿ ಕಾರ್ಯದರ್ಶಿ ಸುರೇಶ್ `ಜನತಾವಾಣಿ’ಗೆ ತಿಳಿಸಿದರು. ಅಜ್ಜಯ್ಯನ ದರ್ಶನಕ್ಕೆ ಬರುವ ಭಕ್ತರು ಪಾದರಕ್ಷೆಗಳನ್ನು ತಮ್ಮ ವಾಹನಗಳ ಬಳಿ ಅಥವಾ  ದೂರದಲ್ಲಿ ಬಿಟ್ಟು ಬರಬೇಕು. ಕಾಲು ತೊಳೆದುಕೊಂಡು ದೇವಸ್ಥಾನ ಪ್ರವೇಶಿಸಬೇಕು. ಹಣ್ಣು-ಕಾಯಿಗೆ ಅನುಮತಿ ಇಲ್ಲ. ತೀರ್ಥ-ಪ್ರಸಾದ ವಿತರಣೆ ಇಲ್ಲ. ಅಭಿಷೇಕ, ಅನ್ನ ಪ್ರಸಾದ ಸದ್ಯಕ್ಕಿಲ್ಲ. ಭಕ್ತರು ಅಜ್ಜಯ್ಯನ ದರ್ಶನ ಮಾತ್ರ ಮಾಡಿಕೊಂಡು ಹೋಗಬೇಕೆಂದು ಸುರೇಶ್ ಮನವಿ ಮಾಡಿದ್ದಾರೆ.

ಇದೇ ರೀತಿ ಕೊಕ್ಕನೂರಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ಸಿದ್ಧತೆ ಮಾಡಿದ್ದು, ಸೋಮವಾರದಿಂದ ಹನುಮಪ್ಪನ ದರ್ಶನಕ್ಕೆ ಸಿದ್ಧತೆ ಮಾಡಲಾಗುತ್ತಿದೆ  ಎಂದು ದೇವಸ್ಥಾನ ಸಮಿತಿಯ ಜಿ. ದ್ಯಾಮಣ್ಣ ತಿಳಿಸಿದ್ದಾರೆ.