ಜಿಲ್ಲಾ ಮಟ್ಟದ ಸಪ್ತಪದಿಗೂ ಪ್ರಭಾವ ಬೀರಿದ ಕೊರೊನಾ

ಜಿಲ್ಲಾ ಮಟ್ಟದ ಸಪ್ತಪದಿಗೂ ಪ್ರಭಾವ ಬೀರಿದ ಕೊರೊನಾ

ಹೊನ್ನಾಳಿ, ಮೇ 24- ಎಲ್ಲಾ ಸರಿಯಾಗಿ ಉತ್ತಮ ದಿನಗಳು ಇದ್ದಿದ್ದರೆ ಹೊನ್ನಾಳಿ ತಾಲ್ಲೂಕಿನ ಮುಜರಾಯಿ ಇಲಾಖೆಗೆ ಸೇರಿದ ಸುಂಕದಕಟ್ಟೆ ಗ್ರಾಮದ ಮಂಜುನಾಥ ದೇವರ ಸನ್ನಿಧಿಯಲ್ಲಿ ಇಂದು ಜಿಲ್ಲಾ ಮಟ್ಟದ ಸಪ್ತಪದಿ ಸಮಾರಂಭ ನಡೆಯಬೇಕಿತ್ತು. ಕೊರೊನಾ ಇದಕ್ಕೂ ತನ್ನ ಪ್ರಭಾವ ಬೀರಿದೆ ಎಂದರೆ ತಪ್ಪಾಗಲಾರದು.

ಜಿಲ್ಲಾ ಮಟ್ಟದ ಸಪ್ತಪದಿ ಸಮಾರಂಭದ ಪ್ರಚಾರಕ್ಕಾಗಿ ಕರಪತ್ರದೊಂದಿಗೆ ಶಾಸಕ ಎಂ.ಪಿ. ರೇಣುಕಾಚಾರ್ಯ,  ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಂಗಪ್ಪ, ತಹಶೀಲ್ದಾರ್  ತುಷಾರ್ ಬಿ. ಹೊಸೂರು ಜಂಟಿಯಾಗಿ ಕಳೆದ ಮಾರ್ಚ್ 21 ರಂದು ಸುಂಕದಕಟ್ಟೆ ದೇವಸ್ಥಾನದ ಎದುರು ಸಪ್ತಪದಿ ಪ್ರಚಾರದ ವಾಹನಕ್ಕೆ ಚಾಲನೆ ನೀಡಿದ್ದರು.

ಕೆಲ ಜೋಡಿಗಳು ನೋಂದಣಿಯೂ ಆಗಿದ್ದವು ಎನ್ನಲಾಗಿತ್ತು. ಕೆಲವರು ನೋಂದಣಿ ಮಾಡಲು ಹಾಗೂ ಹೊರಗಿನಿಂದ ಬರುವ ಸಾರ್ವಜನಿಕರು ಹೆಚ್ಚಾಗಿದ್ದರಿಂದ ಊರಿಗೆ ಯಾರೂ ಬರಬಾರದೆಂದು ಗ್ರಾಮದ ಸಂಪರ್ಕದ ಎಲ್ಲಾ ರಸ್ತೆಗಳಿಗೆ ಬೇಲಿ  ಹಾಕಿದ್ದನ್ನು ಸ್ಮರಿಸಬಹುದಾಗಿದೆ. ನಂತರದ ದಿನಗಳಲ್ಲಿ ತಾಲ್ಲೂಕು ಆಡಳಿತವು ಬೇಲಿ ಹಾಕಿರುವುದನ್ನು  ತೆರವು ಗೊಳಿಸಿತ್ತು.

ಮೇ ತಿಂಗಳ ಕೊನೆಯವರೆಗೂ ಕೊರೊನಾ ಇರಲಾರದು ಎಂದು ಅಂದುಕೊಂಡಿದ್ದವರ ನಂಬಿಕೆಯನ್ನು ಕೊರೊನಾ ಹುಸಿಯಾಗಿಸಿ ತನ್ನ ಪ್ರಭಾವ ಬೀರಿದೆ. 

ಅನೇಕ ಹೊಸ ಜೋಡಿಯ  ವಧು-ವರರಿಗೆ ಹಾಗೂ ಬಂಧುಗಳಿಗೂ, ಊರಿನ ಜನತೆಗೂ ಕೊರೊನಾದ ಈ ದಿನಗಳು ನಿರಾಸೆ ಮೂಡಿಸಿರುವುದಂತೂ ಸ್ಪಷ್ಟವಾಗಿದೆ.