ಕೊರೊನಾ ರಜಾ..ಮಜಾ..ಸಜಾ!

ಕೊರೊನಾ ರಜಾ..ಮಜಾ..ಸಜಾ!

ಈರ: ಹಲೋ ಕೊಟ್ರಾ ಈ ಕೊರೊನಾ ರಜಾ ಮತ್ತೆ ಮುಂದುಕ್ಕೆ ಹೋತಲ್ಲಾ. ಸ್ಕೂಲಿಗೆ ಹೋಗೋ ಹುಡುಗರ ವಿದ್ಯಾಭ್ಯಾಸದ ಗತಿ ಮುಂದೆ ಹೆಂಗೇ?
ಕೊಟ್ರ: ಲೇ ಸ್ಕೂಲು ಹುಡುಗರಿಗೇ ಈ ಕೊರೊನಾ ರಜಾ ಒಂದು ರೀತಿ ಆಗೇತಿ ಮಜಾ. ಇದು ಹಿಂಗೇ ಮುಂದುವರೀಲಿ ಅಂತಾರೆ ಅವರು. ಯಾಕಂದ್ರೇ ಸ್ಕೂಲಿಗೆ ಹೋಗೋದು ತಪ್ಪತೇತಿ. ಪರೀಕ್ಷೆಗಳು ಇರೋದಿಲ್ಲಾ. ಎಸ್.ಎಸ್.ಎಲ್.ಸಿ ತನಕ ಪಾಸ್ ಮಾಡ್ತಾರೆ ಅಂತಾ ಅವರ ಐಡಿಯಾ.
ಈರ: ಹಂಗಾರೇ ಆನ್ ಲೈನ್ ಕ್ಲಾಸುಗಳೇ ಅವರಿಗೆ ಗತಿ.
ಕೊಟ್ರ : ಅದೇ ಅವರಿಗೆ ಒಂದು ಮಜಾ. ಆನ್ ಲೈನಿನಲ್ಲಿ ಕಾಣಿಸಿಕೊಳ್ಳೋ ಟೀಚರ್ ಗೆ ಇವರು ಸ್ವಲ್ಪ ಹೊತ್ತು ಕೇಳಿಸ್ಕೆಂಡಂಗೆ ಮಾಡ್ತಾರೆ. ಆಮೇಲೆ, ಆಯ್ತು ಮಿಸ್ ಹೋಂ ವರ್ಕ್ ಮಾಡ್ತೇವಿ ಅಂತಾರೆ. ಯೂ ಟ್ಯೂಬಿನಾಗೆ ಸಿನಿಮಾ ನೋಡ್ಕೆಂತಾ ಕುತ್ಗೊಂತಾರೆ! ಪಾಪ, ನಮ್ಮ ಹುಡುಗರು ಎಷ್ಟು ಚೆನ್ನಾಗಿ ಓದ್ಕೆಂತಾ ಇದಾರೆ. ಅಂತಾ ಅವ್ವಂದಿರು ಟಿ.ವಿ. ಧಾರಾವಾಹಿ ನೋಡ್ಕೆಂಡು ಕುತ್ಗೊತಾರೆ. ಆ ಕಡೇ ಆನ್ ಲೈನಿನಲ್ಲಿ ಪಾಠ ಮಾಡೋರಿಗೇ ಒಂದು ರೀತಿ ಸಜಾ. ಇದು ಈಗ ಹೊಸ ಪದ್ದತಿ. ದಿನಾ ಇದರ ಮೂಲಕ ಪಾಠ ಮಾಡ್ಬೇಕು. ಇದಕ್ಕೇ ಒಂದು ತಯಾರಿ ನಡೆಸಬೇಕು. ಆಮೇಲೆ ಪಾಠ ಮಾಡಿಂದೇ, ಈ ಹುಡುಗರು ಏನು ಮಾಡ್ತಾ ಇದಾವೋ ಗೊತ್ತಾಗಂಗಿಲ್ಲಾ. ಮಕ್ಕಳ ಅಪ್ಪ ಅಮ್ಮ ಸ್ಕೂಲ್ ಫೀಸು ಕಟ್ತಾರೆ ಅನ್ನೋ ಗ್ಯಾರಂಟೀನೂ ಇಲ್ಲ!
ಈರ : ಮತ್ತೇ, ಈ ಸ್ಕೂಲುಗಳ ಗತಿ! ಪಾಠ ಮಾಡೋ ಮೇಷ್ಟ್ರು ಗತಿ!!
ಕೊಟ್ರ: ಕಾಪಾಡಬೇಕು ಆ ಸರಸ್ವತಿ!

ಈರ : ಹೌದೂ, ಈಗ ಯಾವಾಗಲೂ ಮಾಸ್ಕ್ ಹಾಕ್ಯಂಡಿರಬೇಕಲ್ಲಾ. ನಮ್ಮ ಗತಿ?
ಕೊಟ್ರ: ಇಷ್ಟೊತ್ತೂ ಮಾಸ್ಕ್ ಹಾಕ್ಯಂಡು ಮಾತಾಡ್ತಿದ್ಯಾ? ಅದಕ್ಕೇ ನೀನು ಮಾತಾಡೋದು ಹೆಂಗೆಂಗೋ ಕೇಳಿಸ್ತಿತ್ತು!. ನಾನು ಈ ಮೊಬೈಲ್ ನೆಟ್ ವರ್ಕ್ ಗೆ ಕೊರೊನಾ ತಗುಲಿರ ಬೇಕು ಅಂದುಕೊಂಡಿದ್ದೆ. ಏನು ಹೊರಗೆ ಬಂದಿದ್ಯಾ?
ಈರ: ಇಲ್ಲಪಾ. ಮನಿಯಾಗೆ ಇದೀನಿ. ಯಾವಾಗಲೂ ಮಾಸ್ಕ್ ಹಾಕ್ಯಂಡೇ ಇರಬೇಕು ಅಂತಾರಲ್ಲಾ ಅದಕ್ಕೇ ಹಾಕ್ಯಂಡಿನಿ.
ಕೊಟ್ರ: ಲೇ ಮನಿಯಾಗೆ ಇದ್ದಾಗ, ಪ್ರತ್ಯೇಕವಾಗಿ ಇದ್ದಾಗ ಮಾಸ್ಕ್ ಹಾಕ್ಯಾಬಾರ್ದು. ಯಾವಾಗಲೂ ಹಾಕ್ಯಂಡರೇ ಮಾಸ್ಕು. ಅದು ರಿಸ್ಕು!
ಆ ಕಲ್ಲೇಶಿ ಒಬ್ಬನೇ ಕಾರ್ ಡ್ರೈವ್ ಮಾಡಬೇಕಾದ್ರೂ ಮಾಸ್ಕ್ ಹಾಕ್ಯಂಡಿರ್ತಾನೆ! ಆಕ್ಸಿಜನ್ ಬದಲು ಕಾರ್ಬನ್ ಡೈ ಆಕ್ಸೈಡು ಕುಡಿತಾ ಇರಬೇಕಾಗ್ತತಿ. ನೀವೆಲ್ಲಾ ಇಪ್ಪತ್ನಾಲ್ಕು ತಾಸೂ ಬಾಯಿಗೆ ಮಾಸ್ಕ್ ಹಾಕ್ಯಂಡಿದ್ದರೇ, ಸ್ವಲ್ಪ ದಿನಕ್ಕೆ ನಿಮ್ಮ ಬಾಡಿಗೇ ಮಾಸ್ಕ್ ಹಾಕಿ ದೇವರ ಹತ್ತಿರ ಪಾರ್ಸೆಲ್ ಮಾಡಬೇಕಾಗ್ತತಿ ನೋಡು.
ಈರ: ಅದು ನಿಜಾನೇ ಬಿಡು. ಏನು ಮಾಡ್ತೀ, ಮನಿಯಾಗೇ ಇದ್ದರೂ ನನ್ನ ಹೆಂಡ್ತಿ ವಟವಟಾನ ಕೇಳೋಕೆ ಆಗೋಲ್ಲ. ಅವಳ ಬಾಯಿ ಮುಚ್ಚಿಸೋಣ ಅಂತಾ ಈ ಪ್ಲಾನ್ ಮಾಡಿದ್ನಪಾ. ಸರ್ಕಾರದವರೂ ಹೇಳ್ಯಾರೆ, ಮನಿಯಾಗೂ ಮಾಸ್ಕ್ ಹಾಕ್ಯಂಡಿರಬೇಕಂತೆ ಅಂತ ಹೇಳಿ ಅವಳಿಗೂ ಮಾಸ್ಕ್ ಹಾಕಿಸಿ ನಾನೂ ಹಾಕ್ಯಂಡನೀ!
ಕೊಟ್ರ :  ನೋಡೋ ಈ ಕೊರೊನಾನ ಹೆಂಗಾದರೂ ಮಾಡಿ ತಡೆಗಟ್ಟಬಹುದು. ಆದರೆ, ಹೆಂಡ್ರು ವಟವಟಾನ ತಡೆಯೋಕ್ಕಾಗಲ್ಲ!
ನೀನು ಮನಿಯಾಗೆ ಇದ್ದಾಗ ಮಾಸ್ಕ್ ಹಾಕ್ಯಬೇಡ. ನಿನ್ನ ಹೆಂಡ್ತಿನೂ ಹಾಕ್ಕೊಳ್ಳೋದು ಬ್ಯಾಡ. ಆ ಪಕ್ಕದ ಮನೆ ಪದ್ಮಕ್ಕನ ಗಂಡನಿಗೂ ಅವನ ಹೆಂಡ್ತಿ ದಿನಾ ಸಂಗೀತಾ ಅಭ್ಯಾಸ ಮಾಡೋದನ್ನ ಕೇಳೋಕೆ ಆಗ್ತಿರಲಿಲ್ಲಂತೆ. ಅವನಿಗೆ ಒಂದು ಐಡಿಯಾ ಕೊಟ್ಟಿದ್ದೆ. ನೀನೂ ಅದೇ ಐಡಿಯಾ ಮಾಡು.
ಈರ: ಏನು ಐಡಿಯಾ?
ಕೊಟ್ರ: ನಿನ್ನ ಕಿವಿಗೇ ಮಾಸ್ಕ್ ಹಾಕ್ಯಾ !!!  

 

ಆರ್.ಟಿ. ಅರುಣ್‌ಕುಮಾರ್
arunartist@gmail.com